
ಸಕಲೇಶಪುರ: ಸಕಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವನ್ನು ಪಾರದರ್ಶಕತೆ, ಶಿಸ್ತು ಮತ್ತು ಸೇವಾಭಾವದಿಂದ ಆಯೋಜಿಸಿರುವುದಕ್ಕೆ ಈ ಬಾರಿ ₹30,95,508 ಉಳಿಕೆ ಹಣವೇ ಸಾಕ್ಷಿಯಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಮಂಗಳವಾರ ಪಟ್ಟಣದ ಸಕಲೇಶ್ವರ ಸ್ವಾಮಿ ಆವರಣದಲ್ಲಿ ಆಯೋಜಿಸಲಾಗಿದೆ 2026ನೇ ಸಾಲಿನ ಸಕಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಮತ್ತು ರಥೋತ್ಸವ ಕಾರ್ಯಕ್ರಮ ಜಮಾ,ಖರ್ಚು ಮಂಡನೆ ಸಭೆಯಲ್ಲಿಮಾತನಾಡಿದ ಅವರು, ಸಕಲೇಶ್ವರ ಸ್ವಾಮಿ ಈ ಭಾಗದ ಆರಾಧ್ಯ ದೈವವಾಗಿದ್ದು, ಸಕಲೇಶಪುರ ಎಂಬ ಹೆಸರಿಗೂ ಸ್ವಾಮಿಯ ಹೆಸರೇ ಕಾರಣವಾಗಿದೆ. ಈ ಭಾಗದ ಜನರ ಬದುಕು, ಭಕ್ತಿ ಮತ್ತು ಸಂಸ್ಕೃತಿ ಸ್ವಾಮಿಯ ಆಶೀರ್ವಾದದೊಂದಿಗೆ ಬೆಸೆದುಕೊಂಡಿದೆ ಎಂದು ಹೇಳಿದರು.
ಜಾತ್ರೆಯನ್ನು ದೇವಸ್ಥಾನ ಸಮಿತಿಯೇ ನಡೆಸಬೇಕು ಎಂಬ ಸಾರ್ವಜನಿಕರ ಬಹುಕಾಲದ ಆಶಯವನ್ನು ಸಮಿತಿ ಸಾಕಾರಗೊಳಿಸಿದೆ. ಪುರಸಭೆಯಲ್ಲಿ ಸೂಕ್ತ ಜಾಗದ ಕೊರತೆ ಇದ್ದರೂ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ದೇವಸ್ಥಾನ ಸಮಿತಿಯೇ ಜಾಗವನ್ನು ಒಪ್ಪಂದದ ಮೂಲಕ ಪಡೆದು ವಸ್ತು ಪ್ರದರ್ಶನವನ್ನು ಯಶಸ್ವಿಯಾಗಿ ಆಯೋಜಿಸಿದೆ ಎಂದು ತಿಳಿಸಿದರು.
“ನಾನು ಶಾಸಕನಾದ ನಂತರ ನಡೆದ ಮೂರು ಜಾತ್ರೆಗಳಲ್ಲೂ ಸಮಿತಿ ಅತ್ಯುತ್ತಮ ಆರ್ಥಿಕ ಶಿಸ್ತು ಪ್ರದರ್ಶಿಸಿದೆ. ಮೊದಲ ವರ್ಷ ಸುಮಾರು ₹16 ಲಕ್ಷ, ಎರಡನೇ ವರ್ಷ ₹18 ಲಕ್ಷ ಹಾಗೂ ಈ ಬಾರಿ ಎಲ್ಲ ವೆಚ್ಚಗಳನ್ನು ಭರಿಸಿದ ಬಳಿಕವೂ ದಾಖಲೆಯ ₹30,95,508 ಉಳಿಕೆ ಹಣ ಉಳಿದಿದೆ. ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ದುಡಿದ ಸಮಿತಿಯ ಸದಸ್ಯರ ತಂಡದ ಕಾರ್ಯ, ಪ್ರಾಮಾಣಿಕತೆ ಮತ್ತು ಪಾರದರ್ಶಕ ಆಡಳಿತದಿಂದಲೇ ಈ ಸಾಧನೆ ಸಾಧ್ಯವಾಗಿದೆ. ಇದು ಸಾಮಾನ್ಯ ಸಾಧನೆಯಲ್ಲ; ಸಾರ್ವಜನಿಕರ ಹಣವನ್ನು ಜವಾಬ್ದಾರಿಯಿಂದ ನಿರ್ವಹಿಸಿದ ಅತ್ಯುತ್ತಮ ಮಾದರಿಯಾಗಿದೆ” ಎಂದು ಶಾಸಕ ಸಿಮೆಂಟ್ ಮಂಜು ಮೆಚ್ಚುಗೆ ವ್ಯಕ್ತಪಡಿಸಿದರು.
ಜಾತ್ರೆಯ ಉದ್ದೇಶ ಕೇವಲ ಆದಾಯ ಗಳಿಸುವುದಲ್ಲ, ಸಮಾಜದ ಎಲ್ಲ ವರ್ಗದ ಜನರು ಸಂಭ್ರಮಿಸುವಂತಾಗಬೇಕು ಎಂಬುದು. ಬಡ ಕುಟುಂಬಗಳ ಮಕ್ಕಳು ವರ್ಷಕ್ಕೊಮ್ಮೆ ಜಾತ್ರೆಗೆ ಬಂದು ಸಂತೋಷದಿಂದ ಆಟವಾಡುವ ಅವಕಾಶ ಕಳೆದುಕೊಳ್ಳಬಾರದು ಎಂಬ ಉದ್ದೇಶದಿಂದ ಅಮ್ಯೂಸ್‌ಮೆಂಟ್ ಆಟಗಳ ದರವನ್ನು ಕೈಗೆಟುಕುವ ಮಟ್ಟದಲ್ಲೇ ನಿಗದಿಪಡಿಸಲಾಗಿದೆ. ಇದರಿಂದ ಸಾವಿರಾರು ಮಕ್ಕಳು ಮತ್ತು ಕುಟುಂಬಗಳು ಕಡಿಮೆ ವೆಚ್ಚದಲ್ಲಿ ಜಾತ್ರೆಯ ಸಂಭ್ರಮವನ್ನು ಅನುಭವಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಪ್ರತಿ ವರ್ಷ ತಾಲೂಕಿನ ವಿವಿಧ ಗ್ರಾಮಗಳ ಜೊತೆಗೆ ಹೊರ ಊರುಗಳಲ್ಲಿ ನೆಲೆಸಿರುವ ಕುಟುಂಬಗಳೂ ಜಾತ್ರೆಯ ನಿಮಿತ್ತ ತವರಿಗೆ ಆಗಮಿಸುತ್ತಾರೆ. ಎಲ್ಲ ವರ್ಗದ ಜನರು ವಸ್ತು ಪ್ರದರ್ಶನ ಹಾಗೂ ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತ ವಾತಾವರಣ ನಿರ್ಮಿಸಿರುವುದು ದೇವಸ್ಥಾನ ಸಮಿತಿಯ ಸಾಮಾಜಿಕ ಬದ್ಧತೆಯ ಪ್ರತೀಕವಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ತಹಸೀಲ್ದಾರ್ ಸುಪ್ರಿತಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಂಗಾಧರನ್, ಪುರಸಭಾ ಮುಖ್ಯ ಅಧಿಕಾರಿ ಮಹೇಶ್ವರಪ್ಪ, ಸಕಲೇಶ್ವರ ಸ್ವಾಮಿ ಭಕ್ತ ಮಂಡಳಿ ಅಧ್ಯಕ್ಷ ಬ್ಯಾಕರವಳ್ಳಿ ಜಯಣ್ಣ, ಉತ್ಸವ ಸಮಿತಿ ಕಾರ್ಯದರ್ಶಿ ಅವಿನಾಶ್, ಖಜಾಂಚಿ ಮೋಹನ್, ಮಾಜಿ ಸಂಚಾಲಕ ನಂದಿ ಕೃಪಾ ದೇವರಾಜು, ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಮಹೇಶ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
