
ಹಾಸನ : ನಗರದ ಗಂಧದಕೋಟೆ ಯೋಗ ಪಾರ್ಕ್‌ನಲ್ಲಿ ಎಸ್‌ಜೆಪಿ (SJP) ಯೋಗ ತಂಡದ ಅಂಗ ಸಂಸ್ಥೆಯಾದ ಗಂಧದಕೋಟೆ ಯೋಗ ಕೇಂದ್ರದ ವತಿಯಿಂದ ಗುರು ಪೂರ್ಣಿಮಾ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಎಸ್‌ಜೆಪಿ ಯೋಗ ಸಂಸ್ಥೆಯ ಎರಡು ಕೇಂದ್ರಗಳ ಯೋಗ ಸಾಧಕರು ಒಂದೆಡೆ ಸೇರಿ ಗುರು ಪೂರ್ಣಿಮೆಯನ್ನು ವಿಶೇಷವಾಗಿ ಆಚರಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ನಿವೃತ್ತ ನೌಕಾಪಡೆ (ನೇವಿ) ಸದಸ್ಯರಾದ ರೋಟರಿಯನ್ ಮದನ್ ಕುಮಾರ್ ಹಾಗೂ ಶೇಷಪ್ಪ ಭಾಗವಹಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.
ಎಸ್‌ಜೆಪಿ ಯೋಗ ತಂಡದ ಹಿರಿಯ ಯೋಗ ಸಾಧಕರಾದ ಬಿ.ಎಸ್. ಪ್ರದೀಪ್ ಅವರು ಮಾತನಾಡಿ, ಯೋಗ ಕೇಂದ್ರದ ಧ್ಯೇಯೋದ್ದೇಶಗಳು ಹಾಗೂ ಸಮಾಜದಲ್ಲಿ ಯೋಗದ ಮಹತ್ವದ ಕುರಿತು ಸಾಧಕರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಸುನಿತಾ ಅವರು ಪ್ರಾರ್ಥನಾ ಗೀತೆ ಹಾಡಿದರು.
ಕುಮಾರಿ ಐಶ್ವರ್ಯಾ, ಬ್ರಹ್ಮ್ಯಾ ಹಾಗೂ ಮಾನಸ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಕುಮಾರಿ ಕನಸು ಅವರು ನೃತ್ಯ ಪ್ರದರ್ಶಿಸಿದರು.
ಕಳೆದ ಒಂದು ವರ್ಷದಿಂದ ನಿರಂತರವಾಗಿ ಯೋಗ ತರಬೇತಿ ನೀಡುತ್ತಿರುವ ಯೋಗಗುರು ಸುರೇಶ್ ಪ್ರಜಾಪತಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ನಂತರ ಯೋಗ ಸಾಧಕರು ಭಕ್ತಿಪೂರ್ವಕ ನೃತ್ಯದ ಮೂಲಕ ಗುರುಗಳನ್ನು ಸ್ಮರಿಸಿ, ಯೋಗದ ಕುರಿತು ತಮ್ಮ ಅನುಭವ ಮತ್ತು ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಸಮಾರೋಪದಲ್ಲಿ ಎಲ್ಲರಿಗೂ ಮನೆಯಲ್ಲೇ ಸಿದ್ಧಪಡಿಸಿದ ಮೊಳಕೆಕಾಳು ಹಾಗೂ ಪಪ್ಪಾಯಿ ಹಣ್ಣಿನ ಮಿಶ್ರಣವನ್ನು ಸಾತ್ವಿಕ ಪ್ರಸಾದವಾಗಿ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಘದ ಹಿರಿಯರು, ಮಹಿಳೆಯರು, ಮಕ್ಕಳು ಹಾಗೂ ಯೋಗ ಸಾಧಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
