
ಸಕಲೇಶಪುರ: ತಾಲೂಕಿನ ಅಚ್ಚನಹಳ್ಳಿ ಗ್ರಾಮದ ಅರುಣ್ ಬಿನ್ ಸೋಮೇಶ್ ಹಾಗೂ ಇತರ ರೈತರ ಜಮೀನುಗಳಲ್ಲಿ ಕಾಡಾನೆಗಳ ದಾಳಿಯಿಂದ ಉಂಟಾದ ಬೆಳೆ ಹಾನಿಯನ್ನು ವಲಯ ಅರಣ್ಯಾಧಿಕಾರಿಗಳು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳ ನಿರಂತರ ಸಂಚಾರದಿಂದ ಕಾಫಿ, ಬಾಳೆ, ಅಡಿಕೆ, ಕಾಳುಮೆಣಸು ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿಯಾಗಿದ್ದು, ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಹಾನಿಗೊಳಗಾದ ಪ್ರದೇಶಗಳನ್ನು ಪರಿಶೀಲಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ನಷ್ಟದ ಮಾಹಿತಿಯನ್ನು ದಾಖಲಿಸಿಕೊಂಡು, ಸರ್ಕಾರದ ನಿಯಮಾನುಸಾರ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ರೈತರು, ಕಾಡಾನೆಗಳ ಹಾವಳಿಯನ್ನು ತಡೆಯಲು ಶಾಶ್ವತ ಕ್ರಮ ಕೈಗೊಳ್ಳಬೇಕು, ರಾತ್ರಿ ವೇಳೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿರಂತರ ಗಸ್ತು ನಡೆಸಬೇಕು ಹಾಗೂ ಕಾಡಾನೆಗಳನ್ನು ಕಾಡಿನೊಳಗೆ ಓಡಿಸಲು ಪರಿಣಾಮಕಾರಿ ಕಾರ್ಯಾಚರಣೆ ನಡೆಸುವಂತೆ ಮನವಿ ಮಾಡಿದರು.
ವಲಯ ಅರಣ್ಯಾಧಿಕಾರಿಗಳು ಸಾರ್ವಜನಿಕರು ಕಾಡಾನೆಗಳ ಸಮೀಪ ಹೋಗದಂತೆ ಎಚ್ಚರಿಕೆ ವಹಿಸುವಂತೆ ಹಾಗೂ ಕಾಡಾನೆ ಕಂಡುಬಂದ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡುವಂತೆ ಸೂಚಿಸಿದರು.
ಅರಣ್ಯ ಇಲಾಖೆ, ಆರ್‌ಆರ್‌ಟಿ (RRT) ಹಾಗೂ ಇಟಿಎಫ್ (ETF) ಸಿಬ್ಬಂದಿ ಕಾಡಾನೆಗಳ ಚಲನವಲನದ ಮೇಲೆ ನಿರಂತರ ನಿಗಾ ವಹಿಸಿದ್ದು, ಗ್ರಾಮಸ್ಥರು ಎಚ್ಚರಿಕೆಯಿಂದ ಸಂಚರಿಸುವಂತೆ ಮನವಿ ಮಾಡಲಾಗಿದೆ.







