
ಆಲೂರು, ಜು.31: ಆಲೂರು ತಾಲ್ಲೂಕಿನ ಸಂಕ್ಲಾಪುರದಲ್ಲಿ ಐಸಿಸಿಆರ್‌ಎಲ್ (ICCRL) ಹಾಗೂ ಪ್ರಕೃತಿ ಕಾಫಿ ಬೆಳೆಗಾರರ ಸಂಘದ ಸಹಯೋಗದಲ್ಲಿ ಪುನಶ್ಚೇತನ ಕಾಫಿ ಕೃಷಿ ಕುರಿತು ಒಂದು ದಿನದ ತರಬೇತಿ ಕಾರ್ಯಗಾರ ನಡೆಯಿತು.ಕಾರ್ಯಕ್ರಮವನ್ನು ಪರಮಪೂಜ್ಯ ಶ್ರೀ ಶ್ರೀ ಶಾಂತವೀರ ಮಲ್ಲಿಕಾರ್ಜುನ ಸ್ವಾಮೀಜಿ ಉದ್ಘಾಟಿಸಿ, ಪ್ರಕೃತಿ ಸ್ನೇಹಿ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರ ಸಂರಕ್ಷಣೆ ಹಾಗೂ ಉತ್ತಮ ಗುಣಮಟ್ಟದ ಕಾಫಿ ಉತ್ಪಾದನೆಗೆ ರೈತರು ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರಾಜೆಕ್ಟ್ ಕೋಆರ್ಡಿನೇಟರ್ ದಿವ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಯೋಜನೆಯ ಉದ್ದೇಶ, ರೈತರಿಗೆ ದೊರೆಯುವ ಪ್ರಯೋಜನಗಳು ಹಾಗೂ ಪುನಶ್ಚೇತನ ಕೃಷಿಯ ಮಹತ್ವವನ್ನು ವಿವರಿಸಿದರು. ಮಣ್ಣು, ನೀರು, ಜೀವವೈವಿಧ್ಯತೆ, ಹವಾಮಾನ ಬದಲಾವಣೆ ಹಾಗೂ ರೈತರ ಜೀವನೋಪಾಯ ಸುಧಾರಣೆಗೆ ಸಂಬಂಧಿಸಿದ ವಿಷಯಗಳ ಕುರಿತು ಸಮಗ್ರ ಮಾಹಿತಿ ನೀಡಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಾಜೆಕ್ಟ್ ಡೈರೆಕ್ಟರ್ ಅಶೋಕ್ ಕುಮಾರ್ ಮಾತನಾಡಿ, ಕಾಫಿ ಬೆಳೆಯುವುದಷ್ಟೇ ಸಾಕಾಗುವುದಿಲ್ಲ. ರೈತರು ಹಾಗೂ ರೈತರ ಸಂಘಗಳು ಗುಣಮಟ್ಟದ ಕಾಫಿಯನ್ನು ರಫ್ತು ಮಾಡುವತ್ತ ಹೆಜ್ಜೆ ಇಡಬೇಕು. ಜಾಗತಿಕ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ, ಸಂಸ್ಕರಣೆ ಹಾಗೂ ಗುಣಮಟ್ಟಕ್ಕೆ ಆದ್ಯತೆ ನೀಡಿದರೆ ಹೆಚ್ಚಿನ ಆದಾಯ ಗಳಿಸಲು ಸಾಧ್ಯ ಎಂದು ತಿಳಿಸಿದರು.
ಹಾಸನ ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಮಂಜುನಾಥ್ ಶೆಟ್ಟಿ ಮಾತನಾಡಿ, ರೈತರ ಸಂಘಟನೆಗಳ ಬಲವೇ ಅವರ ಆರ್ಥಿಕ ಶಕ್ತಿಯಾಗಿದೆ. ಸಂಘಟಿತ ಪ್ರಯತ್ನಗಳಿಂದ ಉತ್ತಮ ಮಾರುಕಟ್ಟೆ ಹಾಗೂ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಲು ಸಾಧ್ಯ ಎಂದು ಹೇಳಿದರು.
ಪ್ರಗತಿಪರ ಕೃಷಿಕ ಧರ್ಮರಾಜ್ ಹೊಂಕರವಳ್ಳಿ ಮಾತನಾಡಿ, ಮಣ್ಣಿನ ಆರೋಗ್ಯವೇ ಉತ್ತಮ ಕಾಫಿ ಉತ್ಪಾದನೆಯ ಆಧಾರವಾಗಿದೆ. ಯೂರಿಯಾ ಬಳಕೆಯನ್ನು ಕಡಿಮೆ ಮಾಡಿ, ಕಾಂಪ್ಲೆಕ್ಸ್ ಗೊಬ್ಬರ, ಕಾಂಪೋಸ್ಟ್ ಹಾಗೂ ಲಘು ಪೋಷಕಾಂಶಗಳನ್ನು ವೈಜ್ಞಾನಿಕವಾಗಿ ಬಳಸಿದರೆ ಉತ್ತಮ ಇಳುವರಿ ಹಾಗೂ ಗುಣಮಟ್ಟದ ಕಾಫಿ ಪಡೆಯಬಹುದು ಎಂದರು. ಕೃಷಿ ಚಟುವಟಿಕೆಗಳನ್ನು ಸಮಯಕ್ಕೆ ಸರಿಯಾಗಿ ಕೈಗೊಂಡರೆ ಉತ್ಪಾದನಾ ವೆಚ್ಚ ಕಡಿಮೆಯಾಗಿ ಲಾಭ ಹೆಚ್ಚುತ್ತದೆ ಎಂದು ತಿಳಿಸಿದರು.
ಕಾಫಿ ತೋಟಗಳ ನಿರ್ವಹಣೆಯನ್ನು ಅಂತರರಾಷ್ಟ್ರೀಯ ಮಟ್ಟದ ಮಾದರಿಯಾಗಿ ರೂಪಿಸುವ ಅಗತ್ಯವಿದೆ. ವಿದೇಶಿಗರು ನಮ್ಮ ಕಾಫಿ ತೋಟಗಳನ್ನು ವೀಕ್ಷಿಸಲು ಬರುವಂತಹ ಗುಣಮಟ್ಟದ ನಿರ್ವಹಣೆ ಮತ್ತು ಉತ್ಪಾದನೆ ನಮ್ಮ ಗುರಿಯಾಗಬೇಕು ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಪ್ರಕೃತಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಟಿ. ಕರುಣಾಕರ್ ಮಾತನಾಡಿ, ಬೆಳೆಗಾರರ ಹಿತಕ್ಕಾಗಿ ಸಂಘ ಸದಾ ಬದ್ಧವಾಗಿದೆ. ರೈತರ ಜ್ಞಾನವೃದ್ಧಿಗೆ ಇಂತಹ ತರಬೇತಿ ಕಾರ್ಯಕ್ರಮಗಳನ್ನು ಮುಂದೆಯೂ ಆಯೋಜಿಸಲಾಗುವುದು. ಬೆಳೆಗಾರರು ಇದೇ ರೀತಿಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಕೃತಿ ಕಾಫಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಸಿ.ಎಸ್. ಮೋಹನ್ ಕುಮಾರ್, ಕಾರ್ಯದರ್ಶಿ ಬಿ.ಇ. ದಾನೇಶ್, ಖಜಾಂಚಿ ಪ್ರೇಮ್ ರಾಜ್, ಸಂಘದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ಹೆಚ್ಚಿನ ಸಂಖ್ಯೆಯ ಕಾಫಿ ಬೆಳೆಗಾರರು ಪಾಲ್ಗೊಂಡಿದ್ದರು.
