ಹಾಸನ : ಹಾಸನ ಸನ್ ರೈಸ್ ರೋಟರಿ ಕ್ಲಬ್ ವತಿಯಿಂದ ಇಂದು ಮೊಸಳೆಹೊಸಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರಾದ ಡಾ. ಚೈತ್ರ ಬಿ.ವಿ. ಅವರು ಎದೆಹಾಲಿನ ಮಹತ್ವ, ಅದರ ಪೌಷ್ಟಿಕಾಂಶ, ಮಗುವಿನ ಆರೋಗ್ಯ ಮತ್ತು ಬೆಳವಣಿಗೆಯಲ್ಲಿ ಎದೆಹಾಲಿನ ಪಾತ್ರ ಹಾಗೂ ತಾಯಿಯ ಆರೋಗ್ಯಕ್ಕೆ ದೊರೆಯುವ ಪ್ರಯೋಜನಗಳ ಕುರಿತು ಗರ್ಭಿಣಿಯರು ಮತ್ತು ತಾಯಂದಿರಿಗೆ ವಿವರವಾಗಿ ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಫಲಾನುಭವಿಗಳು ಭಾಗವಹಿಸಿ ಆರೋಗ್ಯ ಜಾಗೃತಿ ಅರಿವು ಪಡೆದುಕೊಂಡರು.

ರೋಟರಿ ಕ್ಲಬ್ ಆಫ್ ಹಾಸನ ಸನ್ ರೈಸ್ ಅಧ್ಯಕ್ಷ ರೋ. ಕೆ.ಎಸ್. ಯೋಗೇಶ್ ಮಾತನಾಡಿ, ರೋಟರಿ ಸಂಸ್ಥೆ ತಾಯಿ ಮತ್ತು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆಯೂ ಅದರ ಒಂದು ಮಹತ್ವದ ಭಾಗವಾಗಿದೆ ಎಂದರು. ಜೊತೆಗೆ, ಮೊಸಳೆಹೊಸಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉತ್ತಮ ಆರೋಗ್ಯ ಸೇವೆ ದೊರೆಯುತ್ತಿದ್ದು, ಡಾ. ಚೈತ್ರ ಅವರ ನೇತೃತ್ವದಲ್ಲಿ ಉತ್ತಮ ಕಾರ್ಯ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಂಗವಾಗಿ ಫಲಾನುಭವಿಗಳಿಗೆ ಹಣ್ಣುಗಳು ಹಾಗೂ ಚಿಕ್ಕಿಯನ್ನು ವಿತರಿಸಲಾಯಿತು.

ಇದೇ ವೇಳೆ ವೈದ್ಯರಾದ ಡಾ. ಚೈತ್ರ ಹಾಗೂ ಡಾ. ದಿವ್ಯಶ್ರೀ ಅವರನ್ನು ರೋಟರಿ ಕ್ಲಬ್ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಕ್ಲಬ್ ಅಧ್ಯಕ್ಷ ರೋ. ಕೆ.ಎಸ್. ಯೋಗೇಶ್, ಜಂಟಿ ಕಾರ್ಯದರ್ಶಿ ರೋ. ಎಸ್.ಸಿ. ರಾಜೇಶ್, ರೋ. ಸುಬ್ರಮಣ್ಯ, ರೋ. ಚಂದ್ರೇಗೌಡ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ವೈದ್ಯರು, ಸಿಬ್ಬಂದಿ ಹಾಗೂ ಎಲ್ಲಾ ಸದಸ್ಯರಿಗೆ ರೋಟರಿ ಕ್ಲಬ್ ಆಫ್ ಹಾಸನ ಸನ್ ರೈಸ್ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *