ಸಕಲೇಶಪುರ: ಭಾರತದಲ್ಲಿ ವಿವಿಧ ಧರ್ಮ, ಜಾತಿ ಹಾಗೂ ಸಮುದಾಯಗಳ ಜನರು ಪರಸ್ಪರ ಪ್ರೀತಿ, ಗೌರವ ಹಾಗೂ ಸೌಹಾರ್ದತೆಯಿಂದ ಬದುಕಬೇಕು. ದೇಶದ ನಿಜವಾದ ಸಂಪತ್ತು ಇಲ್ಲಿನ ಐಕ್ಯತೆ ಹಾಗೂ ಸೌಹಾರ್ದತೆಯ ಜೀವನದಲ್ಲಿದೆ ಎಂದು ಆನೆಮಹಲ್ ಇಬ್ರಾಹಿಂ ಮುಸ್ಲಿಯಾರ್ ಹೇಳಿದರು.

ಕೊಲ್ಲಹಳ್ಳಿ ಬದ್ರಿಯಾ ಜುಮಾ ಮಸೀದಿ ವತಿಯಿಂದ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಮಣ್ಣಿನ ಬಗ್ಗೆ ಪ್ರೀತಿ ಮತ್ತು ಗೌರವ ಹೊಂದುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಧರ್ಮದ ಹೆಸರಿನಲ್ಲಿ ಯಾರಾದರೂ ಸ್ವಾರ್ಥದಿಂದ ದೇಶದ್ರೋಹದ ಕೃತ್ಯ ಎಸಗಿದರೆ ಅದಕ್ಕೆ ಇಡೀ ಸಮುದಾಯ ಅಥವಾ ಧರ್ಮವನ್ನು ಹೊಣೆ ಮಾಡುವುದು ಸರಿಯಲ್ಲ ಎಂದರು.

ಭಾರತದ ಮಣ್ಣಿನಲ್ಲಿ ವಾಲ್ಮೀಕಿ, ವೇದವ್ಯಾಸ, ತುಕಾರಾಮ, ತುಳಸೀದಾಸ, ಗುರುನಾನಕ್, ಬಸವಣ್ಣ ಹಾಗೂ ಸ್ವಾಮಿ ವಿವೇಕಾನಂದ ಸೇರಿದಂತೆ ಅನೇಕ ಮಹನೀಯರು ನಡೆದಾಡಿದ್ದಾರೆ. ಅವರ ವಿಚಾರಗಳು ಸಮಾಜಕ್ಕೆ ಬೆಳಕು ನೀಡಿವೆ. ಅವರ ಆದರ್ಶಗಳನ್ನು ಗೌರವಿಸಿ ಪರಸ್ಪರ ಸಹೋದರತ್ವದಿಂದ ಬದುಕುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಆಧ್ಯಾತ್ಮಿಕ ಗುರುಗಳು, ಪ್ರವಾದಿಗಳು, ಆಚಾರ್ಯರು, ಮುನಿಗಳು ಹಾಗೂ ಮಹರ್ಷಿಗಳು ಬೋಧಿಸಿದ ಮಾನವೀಯ ಮೌಲ್ಯಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸ್ವಾರ್ಥಕ್ಕೆ ಬಲಿಯಾಗದೆ ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಸೌಹಾರ್ದತೆಯನ್ನು ಕಾಪಾಡಬೇಕು ಎಂದು ತಿಳಿಸಿದರು.

ಸಮಾಜ ಸೇವಕ ಮಠಸಾಗರ ಶ್ರೀಧರ್ ಮಾತನಾಡಿ, ಧರ್ಮ ಹಾಗೂ ಜಾತಿಯ ಎಲ್ಲೆಯನ್ನು ಮೀರಿ ಸ್ನೇಹ ಮತ್ತು ಮಾನವೀಯ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು. ಪರಸ್ಪರರ ಹಬ್ಬ, ಆಚರಣೆ ಹಾಗೂ ಸಂಭ್ರಮಗಳಲ್ಲಿ ಭಾಗವಹಿಸುವ ಮೂಲಕ ಸಮಾಜದಲ್ಲಿ ಉತ್ತಮ ಬಾಂಧವ್ಯ ಬೆಳೆಸಬಹುದು ಎಂದರು.

ರೋಟರಿ ಸಂಸ್ಥೆಯ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಸಕಲೇಶಪುರದಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತರು ಸೇರಿದಂತೆ ವಿವಿಧ ಸಮುದಾಯದವರು ಅನ್ಯೋನ್ಯವಾಗಿ ಬದುಕುತ್ತಿರುವುದು ಹೆಮ್ಮೆಯ ಸಂಗತಿ. ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತುವ ಸಂದೇಶಗಳು ಹಾಗೂ ವದಂತಿಗಳಿಗೆ ಯಾರೂ ಪ್ರಚೋದಿತರಾಗದೆ, ಯಾವುದೇ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಿದ ಬಳಿಕ ಪ್ರತಿಕ್ರಿಯಿಸಬೇಕು ಎಂದು ಮನವಿ ಮಾಡಿದರು.

ಸಕಲೇಶಪುರದಲ್ಲಿ ಹಲವು ವರ್ಷಗಳಿಂದ ವಿವಿಧ ಧರ್ಮಗಳ ಜನರು ಪರಸ್ಪರರ ಹಬ್ಬ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು, ಈ ಸೌಹಾರ್ದ ಪರಂಪರೆಯನ್ನು ಮುಂದುವರಿಸಬೇಕು. ಸಹಬಾಳ್ವೆ, ಪ್ರೀತಿ ಹಾಗೂ ಪರಸ್ಪರ ಗೌರವದ ಮೂಲಕ ಸಕಲೇಶಪುರವನ್ನು ಇಡೀ ರಾಜ್ಯಕ್ಕೆ ಮಾದರಿಯನ್ನಾಗಿಸೋಣ ಎಂದು ಹೇಳಿದರು.

ಸಭೆಯಲ್ಲಿ ಕೊಲ್ಲಹಳ್ಳಿ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಸಲೀಂ ಕೊಲ್ಲಹಳ್ಳಿ, ಸಮಾಜ ಸೇವಕರಾದ ಸಿ.ಕೆ. ಕಿರಣ್, ಈಶ್ವರ್ ಆಳ್ವ, ಖಾಸಿಂ ಗುಳಗಳಲೆ, ಬಾಲರಾಜ್, ಆಲೆಬೆಲೂರು ಲಕ್ಷ್ಮಣ್ ಶೆಟ್ಟಿ, ರಾಮನಹಳ್ಳಿ ಚಂದ್ರು, ಸಿದ್ದಾಪುರ ಮುರುಗೇಶ್, ಮಠಸಾಗರ ಯೋಗೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *