ಸಕಲೇಶಪುರ: ಆ,21 : ತಾಲೂಕಿನ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಸಂಪೂರ್ಣವಾಗಿ ನಿಷೇಧಿಸಿ, ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ವಿದ್ಯಾರ್ಥಿಗಳು ಹಾಗೂ ‘ಡ್ರಗ್ಸ್ ಮುಕ್ತ ಸಕಲೇಶಪುರ ಆಂದೋಲನ’ದ ಕಾರ್ಯಕರ್ತರು ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ.

ಪಟ್ಟಣದ ಬಿ.ಆರ್. ಅಂಬೇಡ್ಕರ್ ಎಸ್‌ಸಿ/ಎಸ್‌ಟಿ ಹಾಸ್ಟೆಲ್‌ನಲ್ಲಿ ನಡೆದ ‘ಡ್ರಗ್ಸ್ ಮುಕ್ತ ಸಕಲೇಶಪುರ ಆಂದೋಲನ’ದ ಮೂರನೇ ವರ್ಷದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿ ಬಸವರಾಜು, ತಾಲೂಕಿನ ಹಲವು ಟೀ ಅಂಗಡಿಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಮಾರಾಟ ಮತ್ತು ಬಹಿರಂಗವಾಗಿ ಧೂಮಪಾನ ಮಾಡುತ್ತಿರುವುದು ಕಂಡುಬರುತ್ತಿದೆ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಧೂಮಪಾನ ನಿಷೇಧ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರ ವಿರುದ್ಧ ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಿಸಿದ ಎಲ್ಲ ಇಲಾಖೆಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ರೋಟರಿ ಅಧ್ಯಕ್ಷ ರವಿಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಬೇಡಿಕೆಯನ್ನು ತಾಲೂಕು ಆಡಳಿತದ ಗಮನಕ್ಕೆ ತಂದು ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ನಿಷೇಧ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಒತ್ತಾಯಿಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಬಳಸಿಕೊಂಡು ಹಾಗೂ ಸಾರ್ವಜನಿಕರಿಂದ ಬರುವ ಮಾಹಿತಿಯನ್ನು ಆಧರಿಸಿ ಬಹಿರಂಗವಾಗಿ ಧೂಮಪಾನ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ಪ್ರಕರಣ ದಾಖಲಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಆರೋಗ್ಯ ಸಂರಕ್ಷಣಾಧಿಕಾರಿ ಯಾಸ್ಮಿನ್ ರಿಯಾಜ್, ಡ್ರಗ್ಸ್ ಆರೋಗ್ಯವನ್ನು ಹಾಳುಮಾಡುವುದಲ್ಲದೆ ಜೀವಕ್ಕೂ ಅಪಾಯ ತಂದೊಡ್ಡುತ್ತದೆ. ಇದರಿಂದ ವ್ಯಕ್ತಿಯೊಂದಿಗೆ ಕುಟುಂಬವೂ ಸಂಕಷ್ಟಕ್ಕೆ ಸಿಲುಕುತ್ತದೆ. ಡ್ರಗ್ಸ್ ಎಂಬ ಪಿಡುಗು ಮನೆ, ಸಮಾಜ ಹಾಗೂ ದೇಶದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಇದರ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು ಎಂದು ಕರೆ ನೀಡಿದರು.

‘ಡ್ರಗ್ಸ್ ಮುಕ್ತ ಸಕಲೇಶಪುರ ಆಂದೋಲನ’ದ ಸಂಚಾಲಕ ಮಲ್ನಾಡ್ ಮೆಹಬೂಬ್ ಮಾತನಾಡಿ, ನಮ್ಮನ್ನು ನಂಬಿ, ನಮ್ಮೊಂದಿಗೆ ಬದುಕುತ್ತಿರುವ ಕುಟುಂಬದ ಸದಸ್ಯರು ಹಾಗೂ ಸಮಾಜದ ಜನರ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಯುವಜನರನ್ನು ವ್ಯಸನಗಳಿಂದ ದೂರವಿಡಲು ಇಂತಹ ಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ಕಾರ್ಯದರ್ಶಿ ದಯಾನಂದ್, ನಿವೃತ್ತ ಉಪನ್ಯಾಸಕ ಹರೀಶ್, ಡ್ರಗ್ಸ್ ಮುಕ್ತ ಸಕಲೇಶಪುರ ಆಂದೋಲನ’ದ ಸಾಯಿರಾ ಬಾನು, ರಾಣಿ ಮಲ್ನಾಡ್ , ಬಿ.ಆರ್. ಅಂಬೇಡ್ಕರ್ ಎಸ್‌ಸಿ/ಎಸ್‌ಟಿ ಹಾಸ್ಟೆಲ್‌ ವಾರ್ಡನ್ ಸಂತೋಷ್ ಕುಮಾರ್ ಹುಗಾರ್ ವಿದ್ಯಾರ್ಥಿಗಳು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *