ಸಕಲೇಶಪುರ: ತಾಲ್ಲೂಕಿನ ಹಳ್ಳಿ ಬಯಲು ಗ್ರಾಮದಲ್ಲಿ ಕಾಡಾನೆಗಳು ತೋಟಗಳಿಗೆ ನುಗ್ಗಿ ಕಾಫಿ, ಅಡಿಕೆ, ತೆಂಗು ಸೇರಿದಂತೆ ವಿವಿಧ ಬೆಳೆಗಳನ್ನು ಹಾನಿಗೊಳಿಸಿರುವ ಹಿನ್ನೆಲೆಯಲ್ಲಿ ಸಕಲೇಶಪುರ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗ್ರಾಮದ ಸುಲೈಮಾನ್ ಸಾಬ್ ಅವರ ಮನೆ ಸಮೀಪ ಹಾಗೂ ತೋಟಕ್ಕೆ ಕಳೆದ ರಾತ್ರಿ ಕಾಡಾನೆಗಳು ನುಗ್ಗಿದ್ದು, ಬ್ಯಾರಲ್, ಕಾಫಿ, ಬಾಳೆ, ಅಡಿಕೆ ಹಾಗೂ ತೆಂಗಿನ ಬೆಳೆಗಳಿಗೆ ಹಾನಿ ಮಾಡಿರುವ ಕುರಿತು ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ದೂರುದಾರರನ್ನು ಭೇಟಿ ಮಾಡಿ, ಹಾನಿಗೊಳಗಾದ ಪ್ರದೇಶವನ್ನು ಪರಿಶೀಲಿಸಿದರು.

ಸ್ಥಳ ಪರಿಶೀಲನೆ ವೇಳೆ ಕಾಡಾನೆಗಳ ದಾಳಿಯಿಂದ ಬ್ಯಾರಲ್, ಕಾಫಿ, ಅಡಿಕೆ ಹಾಗೂ ತೆಂಗಿನ ಬೆಳೆಗಳಿಗೆ ಹಾನಿಯಾಗಿರುವುದು ಕಂಡುಬಂದಿದೆ. ಬೆಳೆ ಹಾನಿಯ ಕುರಿತು ಇಲಾಖೆಯ ನಿಯಮಾನುಸಾರ ಪರಿಶೀಲನೆ ನಡೆಸಿ, ಅರ್ಹತೆ ಆಧಾರದ ಮೇಲೆ ಸೂಕ್ತ ಪರಿಹಾರವನ್ನು ಒದಗಿಸುವುದಾಗಿ ಅಧಿಕಾರಿಗಳು ದೂರುದಾರರಿಗೆ ತಿಳಿಸಿದರು.

ಇದೇ ವೇಳೆ ಕಾಡಾನೆಗಳ ಚಲನವಲನದ ಕುರಿತು ಮಾಹಿತಿ ಸಂಗ್ರಹಿಸಿದ ಅರಣ್ಯಾಧಿಕಾರಿಗಳು, ಶಾಪ್ ಭಾಸ್ಕರ್ ಕಾಡಿನ ಭಾಗದಲ್ಲಿ ಕಾಡಾನೆಗಳು ಕಾಣಿಸಿಕೊಂಡಿರುವುದಾಗಿ ತಿಳಿಸಿದರು.

ಹೀಗಾಗಿ ಸುತ್ತಮುತ್ತಲಿನ ಗ್ರಾಮಸ್ಥರು, ರೈತರು, ಸಾರ್ವಜನಿಕರು ಹಾಗೂ ತೋಟಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಮುಂಜಾಗ್ರತಾ ಸೂಚನೆ ನೀಡಿದರು.

ವಿಶೇಷವಾಗಿ ಬೆಳಗಿನ ಜಾವ ಹಾಗೂ ಸಂಜೆ ವೇಳೆ ತೋಟ, ಹೊಲ ಮತ್ತು ಗದ್ದೆಗಳಿಗೆ ತೆರಳುವಾಗ ಎಚ್ಚರಿಕೆ ವಹಿಸುವಂತೆ ಸೂಚಿಸಿದ ಅಧಿಕಾರಿಗಳು, ಕಾಡಾನೆಗಳ ಚಲನವಲನ ಕಂಡುಬಂದಲ್ಲಿ ಅವುಗಳನ್ನು ಹಿಂಬಾಲಿಸುವುದು, ಓಡಿಸುವುದು ಅಥವಾ ಹತ್ತಿರ ಹೋಗುವ ಸಾಹಸ ಮಾಡಬಾರದು ಎಂದು ಎಚ್ಚರಿಸಿದರು.

ಅರಣ್ಯ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದ ಅಧಿಕಾರಿಗಳು, ಕಾಡಾನೆಗಳ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣ ಅರಣ್ಯ ಇಲಾಖೆಗೆ ತಿಳಿಸುವಂತೆ ಗ್ರಾಮಸ್ಥರಿಗೆ ಸೂಚಿಸಿದರು.

ಕಾಡಾನೆಗಳಿಂದ ಬೆಳೆ ಹಾನಿಗೊಳಗಾದ ರೈತರು ಇಲಾಖೆಗೆ ಮಾಹಿತಿ ನೀಡಿದಲ್ಲಿ ಸ್ಥಳ ಪರಿಶೀಲನೆ ನಡೆಸಿ, ನಿಯಮಾನುಸಾರ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *