
ಅರೇಹಳ್ಳಿ: ನಾರ್ವೆ ಕೃಷಿಪತ್ತಿನ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ನಾರ್ವೆ ಗ್ರಾಮದಲ್ಲಿ ನಡೆಯಿತು. ರೈತ ಗೀತೆಯೊಂದಿಗೆ ಗಣ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ HDCC ಬ್ಯಾಂಕ್‌ನ ಮಾಜಿ ಉಪಾಧ್ಯಕ್ಷ ಎಂ.ಎ. ನಾಗರಾಜ್ ಮಾತನಾಡಿ, ನಾರ್ವೆ ಸಹಕಾರ ಸಂಘವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇಡೀ ಜಿಲ್ಲೆಯಲ್ಲಿ ಉತ್ತಮ ಹೆಸರು ಗಳಿಸಿದೆ. ಸಂಘದ ಅಧಿಕಾರಿಗಳು ಹಾಗೂ ನಿರ್ದೇಶಕರ ಪರಿಶ್ರಮ ಮತ್ತು ಕಾಳಜಿಯಿಂದಾಗಿ ಈ ಸಾಧನೆ ಸಾಧ್ಯವಾಗಿದೆ ಎಂದು ಹೇಳಿದರು.
2025-26ನೇ ಸಾಲಿನಲ್ಲಿ ಸಂಘವು ₹1.36 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಗೊಬ್ಬರ ಮಾರಾಟದಲ್ಲಿಯೂ ಉತ್ತಮ ಕಾರ್ಯನಿರ್ವಹಿಸಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ರೈತರಿಗೆ ಸಾಲ ಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡುವುದಾಗಿ ನಾಗರಾಜ್ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ದೇವರಾಜ್ ಎಸ್.ವಿ., ಉಪಾಧ್ಯಕ್ಷ ಮಧು ಕುಮಾರ್, ಮಾಜಿ ಅಧ್ಯಕ್ಷ ಶಿವಪ್ರಸಾದ್, ನಿರ್ದೇಶಕರಾದ ಕೃಷ್ಣೇಗೌಡ, ಸೋಮಯ್ಯ, ಚೇತನ್, ಪ್ರವೀಣ್, ಚಿದಾನಂದ, ಚಂದ್ರು, ದೇವರಾಜ್ ಎನ್.ಪಿ., ಗೀತಾ, ಲಕ್ಷ್ಮಣ್, ಗೋಪಮ್ಮ, ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ಎಸ್., ಸಿಬ್ಬಂದಿಗಳಾದ ಹೇಮರಾಜ್, ಸಂತೋಷ್ ಸೇರಿದಂತೆ ಷೇರುದಾರರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.



