
ಸಕಲೇಶಪುರ: ಕಾಡಾನೆಗಳ ಹಾವಳಿಯಿಂದ ಬೆಳೆ ಹಾನಿಗೊಳಗಾದ ನಡಹಳ್ಳಿ ಗ್ರಾಮದ ರೈತ ಧರ್ಮೇಂದ್ರ ಅವರ ಗದ್ದೆಗೆ ಸಕಲೇಶಪುರ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕಾಡಾನೆಗಳ ಹಿಂಡು ಗದ್ದೆಗೆ ನುಗ್ಗಿ ಬೆಳೆಗಳನ್ನು ತುಳಿದು ಹಾಗೂ ತಿಂದು ಹಾನಿಗೊಳಿಸಿರುವ ಬಗ್ಗೆ ರೈತರಿಂದ ಮಾಹಿತಿ ಪಡೆದುಕೊಂಡ ಅರಣ್ಯಾಧಿಕಾರಿಗಳು, ಹಾನಿಗೊಳಗಾದ ಪ್ರದೇಶವನ್ನು ಪರಿಶೀಲಿಸಿ ಬೆಳೆ ನಷ್ಟದ ವಿವರಗಳನ್ನು ದಾಖಲಿಸಿಕೊಂಡರು.
ಈ ಸಂದರ್ಭದಲ್ಲಿ ರೈತರಿಗೆ ಕಾಡಾನೆಗಳ ಚಲನವಲನದ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ ಅಧಿಕಾರಿಗಳು, ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಒಬ್ಬರೇ ತೋಟ, ಗದ್ದೆಗಳಿಗೆ ತೆರಳದಂತೆ ಸಲಹೆ ನೀಡಿದರು.
ಕಾಡಾನೆಗಳು ಕಾಣಿಸಿಕೊಂಡಲ್ಲಿ ಅವುಗಳನ್ನು ಓಡಿಸಲು ಮುಂದಾಗದೆ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.ಬೆಳೆ ಹಾನಿಗೊಳಗಾದ ರೈತ ಧರ್ಮೇಂದ್ರ ಅವರಿಗೆ ಸರ್ಕಾರದ ನಿಯಮಾನುಸಾರ ಸೂಕ್ತ ಪರಿಹಾರ ದೊರಕಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಕಲೇಶಪುರ ವಲಯ ಅರಣ್ಯಾಧಿಕಾರಿಗಳು ಭರವಸೆ ನೀಡಿದರು.
ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿ ಕಂಡುಬರುತ್ತಿದ್ದು, ರೈತರ ಬೆಳೆ ಹಾಗೂ ಜೀವ ರಕ್ಷಣೆಗೆ ಅರಣ್ಯ ಇಲಾಖೆ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅಲ್ಲದೆ, ಆನೆಗಳ ಚಲನವಲನದ ಬಗ್ಗೆ ಗ್ರಾಮಸ್ಥರಿಗೆ ನಿರಂತರವಾಗಿ ಮಾಹಿತಿ ನೀಡಬೇಕು ಹಾಗೂ ಬೆಳೆ ಹಾನಿಗೆ ಶೀಘ್ರ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
