ಸಕಲೇಶಪುರ: ತಾಲೂಕಿನ ಇಬ್ಬಡಿ ಕೊಣ್ಣೂರು ಗ್ರಾಮದ ರಾಮಚಂದ್ರ ಅವರ ತೋಟದ ಸಮೀಪ ಐದು ಕಾಡಾನೆಗಳು ಹಾಗೂ ಸುಳ್ಳಕ್ಕಿ–ಮೇಘಲಕೆರೆ ಗ್ರಾಮದ ರವಿ ಅವರ ತೋಟದ ಪಕ್ಕದ ಕಾಡಿನಲ್ಲಿ ಒಂಟಿ ಕಾಡಾನೆಯೊಂದು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ನೀಡಿದೆ.

ಕಾಡಾನೆಗಳ ಚಲನವಲನದ ಮಾಹಿತಿ ತಿಳಿದು ಸಕಲೇಶಪುರ ವಲಯ ಅರಣ್ಯಾಧಿಕಾರಿ ಎಚ್.ಆರ್. ಹೇಮಂತ್ ಕುಮಾರ್ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿ ಇಬ್ಬಡಿ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಇದೇ ವೇಳೆ ಪ್ರಕಾಶ್ ಗೌಡ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಕೂಲಿ ಕಾರ್ಮಿಕರು ಸೇರಿದಂತೆ ಸ್ಥಳೀಯ ಗ್ರಾಮಸ್ಥರು, ರೈತರು ಹಾಗೂ ಸಾರ್ವಜನಿಕರಿಗೆ ಕಾಡಾನೆಗಳ ಇರುವಿಕೆ ಮತ್ತು ಸಂಚರಿಸುವ ಮಾರ್ಗದ ಕುರಿತು ಮಾಹಿತಿ ನೀಡಿದರು.

ಕಾಡಾನೆಗಳು ಆಹಾರ ಮತ್ತು ನೀರಿನ ಹುಡುಕಾಟದಲ್ಲಿ ತೋಟ, ಹೊಲ ಹಾಗೂ ಅರಣ್ಯ ಪ್ರದೇಶಗಳ ನಡುವೆ ಸಂಚರಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ವಿಶೇಷವಾಗಿ ಬೆಳಗಿನ ಜಾವ ಹಾಗೂ ರಾತ್ರಿ ವೇಳೆ ತೋಟ, ಹೊಲ, ಗದ್ದೆಗಳಿಗೆ ತೆರಳುವಾಗ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅರಣ್ಯ ಇಲಾಖೆ ಸೂಚಿಸಿದೆ.ಅರಣ್ಯ ಇಲಾಖೆಯಿಂದ ಕಾಡಾನೆಗಳ ಚಲನವಲನದ ಕುರಿತು ಮಾಹಿತಿ ಪಡೆದುಕೊಂಡ ನಂತರವೇ ಕೂಲಿ ಕಾರ್ಮಿಕರು ಹಾಗೂ ರೈತರು ತಮ್ಮ ಕೆಲಸಗಳಿಗೆ ತೆರಳಬೇಕು. ಒಬ್ಬರೇ ಅರಣ್ಯ ಪ್ರದೇಶ ಅಥವಾ ತೋಟದೊಳಗೆ ತೆರಳದೆ, ಆನೆಗಳ ಚಲನವಲನ ಕಂಡುಬಂದಲ್ಲಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್ ಮನವಿ ಮಾಡಿದರು.

ಕಾಡಾನೆಗಳನ್ನು ಕಂಡ ಸಂದರ್ಭದಲ್ಲಿ ಅವುಗಳನ್ನು ಹಿಂಬಾಲಿಸುವುದು, ಹತ್ತಿರ ಹೋಗುವುದು, ಕಲ್ಲು ತೂರುವುದು ಅಥವಾ ಯಾವುದೇ ರೀತಿಯಲ್ಲಿ ಪ್ರಚೋದಿಸುವ ಕೆಲಸ ಮಾಡಬಾರದು. ಅರಣ್ಯ ಇಲಾಖೆಯ ಸಿಬ್ಬಂದಿ ನೀಡುವ ಸೂಚನೆಗಳನ್ನು ಪಾಲಿಸುವ ಮೂಲಕ ಮಾನವ–ಕಾಡಾನೆ ಸಂಘರ್ಷವನ್ನು ತಪ್ಪಿಸಲು ಸಹಕರಿಸಬೇಕು ಎಂದು ಅವರು ತಿಳಿಸಿದರು.

ಕಾಡಾನೆಗಳ ಚಲನವಲನದ ಮೇಲೆ ಅರಣ್ಯ ಇಲಾಖೆ ನಿರಂತರ ನಿಗಾ ವಹಿಸಿದ್ದು, ಗ್ರಾಮಸ್ಥರು ಯಾವುದೇ ಆತಂಕಕ್ಕೆ ಒಳಗಾಗದೆ ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯ ಇಲಾಖೆ ತಿಳಿಸಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *