ಚನ್ನರಾಯಪಟ್ಟಣ: ತಾಲ್ಲೂಕಿನ ಚೌಡೇನಹಳ್ಳಿ ಗ್ರಾಮದಲ್ಲಿ ಕೃಷಿ ವಿದ್ಯಾರ್ಥಿಗಳು ಹಾಗೂ ಆಹಾರ ತಂತ್ರಜ್ಞಾನ ವಿದ್ಯಾರ್ಥಿಗಳ ಸಹಯೋಗದಲ್ಲಿ ರೈತರಿಗೆ ತೆಂಗು ಮತ್ತು ರಾಗಿ ಬೆಳೆಗಳ ವೈಜ್ಞಾನಿಕ ಕೃಷಿ ಪದ್ಧತಿಗಳು, ಸುಧಾರಿತ ತಂತ್ರಜ್ಞಾನ ಹಾಗೂ ಬೆಳೆ ನಿರ್ವಹಣೆ ಕುರಿತು ಸಮಗ್ರ ಮಾಹಿತಿ ನೀಡುವ ಉದ್ದೇಶದಿಂದ ತೆಂಗು ಮತ್ತು ರಾಗಿ ಬೆಳೆ ಸಮಗ್ರ ವಿಚಾರ ಸಂಕಿರಣ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕೃಷಿ ಮಹಾವಿದ್ಯಾಲಯ, ಹಾಸನದ ಡೀನ್ (ಕೃಷಿ) ಡಾ. ಬಿ.ಎಸ್. ಬಸವರಾಜು, ತೋಟಗಾರಿಕೆ ವಿಭಾಗದ ಪ್ರಾಧ್ಯಾಪಕ ಡಾ. ಎ. ನಟರಾಜ, ಬೇಸಾಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಭೈರಪ್ಪ, ಸಸ್ಯ ರೋಗ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಮಂಜುನಾಥ್ ಹಾಗೂ ಸಸ್ಯ ಕೀಟ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಸೌಮ್ಯ ಭಾಗವಹಿಸಿ ರೈತರಿಗೆ ಮಾರ್ಗದರ್ಶನ ನೀಡಿದರು.

ತೆಂಗು ಮತ್ತು ರಾಗಿ ಬೆಳೆಗಳಲ್ಲಿ ಸುಧಾರಿತ ತಳಿಗಳ ಆಯ್ಕೆ, ಭೂಮಿ ಸಿದ್ಧತೆ, ಸಮತೋಲಿತ ಪೋಷಕಾಂಶ ನಿರ್ವಹಣೆ, ನೀರಾವರಿ, ಕಳೆ ನಿಯಂತ್ರಣ, ಕೀಟ ಹಾಗೂ ರೋಗಗಳ ನಿರ್ವಹಣೆ ಕುರಿತು ತಜ್ಞರು ವಿವರವಾದ ಮಾಹಿತಿ ನೀಡಿದರು.ತೆಂಗು ಬೆಳೆಯಲ್ಲಿ ಗುಣಮಟ್ಟದ ಸಸಿಗಳ ಆಯ್ಕೆ, ಸೂಕ್ತ ಅಂತರ, ಸಾವಯವ ಗೊಬ್ಬರಗಳ ಬಳಕೆ, ನೀರಿನ ಸಮರ್ಪಕ ನಿರ್ವಹಣೆ ಹಾಗೂ ಕಪ್ಪು ತಲೆ ಹುಳು, ಕೆಂಪು ಮೂತಿ ಹುಳು, ಬಿಳಿ ನೊಣ ಸೇರಿದಂತೆ ಪ್ರಮುಖ ಕೀಟಗಳ ನಿರ್ವಹಣೆ ಕುರಿತು ತಿಳಿಸಲಾಯಿತು.

ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು ಸಾವಯವ ಪದಾರ್ಥಗಳ ಬಳಕೆ ಹಾಗೂ ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ಗೊಬ್ಬರ ನೀಡುವ ಅಗತ್ಯವನ್ನು ಒತ್ತಿ ಹೇಳಲಾಯಿತು.ರಾಗಿ ಬೆಳೆಗೆ ಸಂಬಂಧಿಸಿದಂತೆ ಉತ್ತಮ ಗುಣಮಟ್ಟದ ಬೀಜದ ಆಯ್ಕೆ, ಬೀಜೋಪಚಾರ, ಸೂಕ್ತ ಬಿತ್ತನೆ ಸಮಯ, ಸಾಲು ಬಿತ್ತನೆ, ಸಮತೋಲಿತ ರಸಗೊಬ್ಬರ ಬಳಕೆ ಹಾಗೂ ನೀರಿನ ನಿರ್ವಹಣೆ ಕುರಿತು ಮಾಹಿತಿ ನೀಡಲಾಯಿತು.

ರಾಗಿಯಲ್ಲಿ ಕಂಡುಬರುವ ಬೆಂಕಿ ರೋಗ ಮತ್ತು ಕೊಳೆ ರೋಗ ಸೇರಿದಂತೆ ಪ್ರಮುಖ ಕೀಟ ಹಾಗೂ ರೋಗಗಳ ಸಮಗ್ರ ನಿರ್ವಹಣೆ ಕುರಿತು ತಜ್ಞರು ರೈತರಿಗೆ ಮಾರ್ಗದರ್ಶನ ನೀಡಿದರು.ಕಾರ್ಯಕ್ರಮದಲ್ಲಿ ರೈತರು ತಮ್ಮ ಕೃಷಿ ಸಮಸ್ಯೆಗಳನ್ನು ತಜ್ಞರೊಂದಿಗೆ ಚರ್ಚಿಸಿ ಪರಿಹಾರೋಪಾಯಗಳನ್ನು ಪಡೆದುಕೊಂಡರು. ತೆಂಗು ಮತ್ತು ರಾಗಿ ಬೆಳೆಗಳ ಉತ್ಪಾದಕತೆ ಹಾಗೂ ಗುಣಮಟ್ಟ ಹೆಚ್ಚಿಸುವುದರ ಜೊತೆಗೆ ಕೃಷಿ ವೆಚ್ಚವನ್ನು ಕಡಿಮೆ ಮಾಡಿ ರೈತರ ಆದಾಯ ಹೆಚ್ಚಿಸಲು ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಲಾಯಿತು.

ಊರಿನ ಗ್ರಾಮಸ್ಥರು ಸಹಕಾರ ನೀಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ವಿಚಾರ ಸಂಕಿರಣವು ರೈತರಿಗೆ ಬೆಳೆಗಳ ಸಮಗ್ರ ನಿರ್ವಹಣೆ ಕುರಿತು ಪ್ರಾಯೋಗಿಕ ಹಾಗೂ ವೈಜ್ಞಾನಿಕ ಜ್ಞಾನ ಒದಗಿಸುವುದರೊಂದಿಗೆ ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಪ್ರೇರಣೆಯಾಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *