ಅರಸೀಕೆರೆ: ಭಾರತೀಯ ಸಂಸ್ಕೃತಿಯ ಜೀವಾಳವಾಗಿರುವ ಹಬ್ಬಗಳು ಧಾರ್ಮಿಕ ನಂಬಿಕೆ, ಸಾಂಸ್ಕೃತಿಕ ಪರಂಪರೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಸೆಯುವ ಸೇತುವೆಗಳಾಗಿವೆ. ಅಧರ್ಮದ ವಿರುದ್ಧ ಧರ್ಮವನ್ನು ಸಾರುವ ಸಂಕೇತವೇ ನವರಾತ್ರಿ ಹಾಗೂ ಶಕ್ತಿ ದೇವತೆಯ ಆರಾಧನೆ ಎಂದು ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮರಿದೇವರು ತಿಳಿಸಿದರು.

ತಾಲೂಕಿನ ಮಾಡಾಳು ಗ್ರಾಮದ ಶಿವಬಸವ ಕುಮಾರಾಶ್ರಮದ ರಸ್ತೆಯ ಬದಿಯಲ್ಲಿರುವ ಮೂಲಸ್ಥಾನ ಶ್ರೀ ಸ್ವರ್ಣಗೌರಿ ದೇವಾಲಯದ ಮುಂಭಾಗದಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿ, ಭಕ್ತರಿಗೆ ಆಶೀರ್ವಚನ ನೀಡಿದರು.

ಕೋಡಿಮಠದ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಸಂಕಲ್ಪದಂತೆ ಕಳೆದ 12 ದಿನಗಳಿಂದ ಇದೇ ಮೊದಲ ಬಾರಿಗೆ ಗ್ರಾಮದಲ್ಲಿ ದಸರಾ ಮಹೋತ್ಸವವನ್ನು ಆಚರಿಸಲಾಯಿತು.

ಈ ನಿಮಿತ್ತ ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿಯವರನ್ನು ಪಟ್ಟದಲ್ಲಿ ಕೂರಿಸಿ, ಪ್ರತಿದಿನ ದೇವಿ ಪಾರಾಯಣ ನಡೆಸಲಾಯಿತು.ಲೋಕಕಲ್ಯಾಣಾರ್ಥವಾಗಿ ಹಾಗೂ ಭಕ್ತರ ಒಳಿತಿಗಾಗಿ ಮಾಡಾಳು ಮೂಲಸ್ಥಾನ ದೇವಾಲಯದ ಮುಂಭಾಗದಲ್ಲಿ ಆಚರಿಸಲಾದ ಈ ನಾಡಹಬ್ಬವು ಜನಮನದಲ್ಲಿ ಶಾಂತಿ, ನೆಮ್ಮದಿ ಮತ್ತು ಸಾಮರಸ್ಯ ನೆಲೆಸಲಿ ಎಂಬ ಆಶಯವನ್ನು ಹೊಂದಿದೆ ಎಂದು ಶ್ರೀಗಳು ನುಡಿದರು.12 ದಿನಗಳ ಕಾರ್ಯಕ್ರಮ ಸಂಪನ್ನಕಾರ್ಯಕ್ರಮಕ್ಕೂ ಮುನ್ನ ತಾಯಿ ಜಗನ್ಮಾತೆ ಶ್ರೀ ಸ್ವರ್ಣಗೌರಿ ಅಮ್ಮನವರಿಗೆ ಹಾಗೂ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿಯವರಿಗೆ ಅರ್ಚಕರು ಮಹಾಮಂಗಳಾರತಿ ಮತ್ತು ಕರ್ಪೂರದಾರತಿ ಬೆಳಗಿದರು.

ನಂತರ ದೇವಾಲಯದ ಮುಂಭಾಗದಲ್ಲಿ ಸಿದ್ಧಪಡಿಸಲಾಗಿದ್ದ ಬಾಳೆಕಂದು ಮತ್ತು ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಿ, ಅಂಬುಛೇದನ ನೆರವೇರಿಸಲಾಯಿತು. ಬಳಿಕ ಬನ್ನಿ ಕಡಿದು, ನೆರೆದಿದ್ದ ಭಕ್ತರೆಲ್ಲರೂ ಸಂಭ್ರಮದಿಂದ ಬನ್ನಿ ವಿನಿಮಯ ಮಾಡಿಕೊಂಡು ಧನ್ಯತೆ ಅನುಭವಿಸಿದರು.ಕಾರ್ಯಕ್ರಮಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಕಲ್ಪಿಸಲಾಗಿತ್ತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *