
ಸಕಲೇಶಪುರ – ಹೆತ್ತೂರು: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ, 2022-23ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು 2023-24ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಜರುಗಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆ, ಬ್ಯಾಕರವಳ್ಳಿಯ ಪ್ರಾಂಶುಪಾಲರಾದ ಡಾ. ಶತೇಂದ್ರ ಕುಮಾರ್ ನೆರವೇರಿಸಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಶಿಕ್ಷಣ ವ್ಯವಸ್ಥೆಯ ಎರಡು ಪ್ರಮುಖ ಘಟ್ಟಗಳಾಗಿದ್ದು, ದ್ವಿತೀಯ ಪಿಯುಸಿ ಫಲಿತಾಂಶ ಮುಂದಿನ ಭವಿಷ್ಯದ ದಿಕ್ಸೂಚಿಯಂತೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮತ್ತೋರ್ವ ಅತಿಥಿ, ನಿವೃತ್ತ ಯೋಧ ಹಾಗೂ ಜಾಗತಿಕ ಗ್ರಾಹಕ ಹಕ್ಕುಗಳ ಒಕ್ಕೂಟದ ಹಾಸನ ಜಿಲ್ಲೆಯ ಅಧ್ಯಕ್ಷ ನಂದೀಶ್ ವಳಲಹಳ್ಳಿ ವಿದ್ಯಾರ್ಥಿಗಳಿಗೆ ಮಾನಸಿಕ ಮತ್ತು ದೈಹಿಕ ಸಧೃಡತೆಯ ಅಗತ್ಯ ಮತ್ತು ಭಾರತೀಯ ಸೇನೆಗೆ ಸೇರುವಂತೆ ಕಿವಿ ಮಾತು ಹೇಳಿದರು.

ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪ್ರಥಮ ಪಿಯುಸಿಯ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಬರ ಮಾಡಿಕೊಂಡರು.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಸಾನಿಕ ಡಿ.ಎಂ, ನಿಶಾ ಆರ್, ಸಾನಿಕ ವೈ.ಬಿ, ಸುಪ್ರಿತ ಹೆಚ್.ಕೆ. ಅವರಿಗೆ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ಲಲಿತಾ ಆಚಾರ್ ನೀಡುವ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಮಂಜುನಾಥ ಬಿ.ಡಿ. ವಹಿಸಿದ್ದರು. ಕೆಪಿಎಸ್ ನ ಉಪ ಪ್ರಾಂಶುಪಾಲೆ ಲತಾ ಬಿ.ಕೆ, ಉಪನ್ಯಾಸಕ ವರ್ಗ ಮತ್ತು ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು. ಕು. ಚೈತ್ರ ನಿರೂಪಿಸಿದರು.
