
ಗುರು ಪೂರ್ಣಿಮೆಯು ಆಧ್ಯಾತ್ಮಿಕ ಗುರುಗಳನ್ನು ಗೌರವಿಸುವ ಪೂಜ್ಯ ಹಬ್ಬವಾಗಿದೆ. ಆಷಾಢ ಮಾಸದ ಹುಣ್ಣಿಮೆಯಂದು ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಮಹಾಭಾರತ ಕಾವ್ಯ ರಚಿಸಿದ, ಬ್ರಹ್ಮರ್ಷಿ ಬಿರುದಾಂಕಿತ ವೇದವ್ಯಾಸರು ಜನಿಸಿದ್ದು ಗುರುಪೂರ್ಣಿಮೆಯಂದೇ, ಆ ಕಾರಣಕ್ಕೆ ಈ ದಿನವನ್ನು ವ್ಯಾಸ ಹುಣ್ಣಿಮೆ ಎಂದೂ ಕರೆಯಲಾಗುತ್ತದೆ.
ಹಿಂದೂ ಧರ್ಮದಲ್ಲಿ ಗುರು ಪೂರ್ಣಿಮಾ ಆಚರಣೆಗೆ ವಿಶೇಷ ಪ್ರಾಧಾನ್ಯವಿದೆ. ಹಿಂದೂ ಧರ್ಮದಲ್ಲಿ ಗುರುವನ್ನು ದೇವರ ಸ್ಥಾನದಲ್ಲಿ ಪೂಜಿಸಲಾಗುತ್ತದೆ. ಗುರು ಪೂರ್ಣಿಮೆಯಂದು ಗುರುವನ್ನು ಪೂಜಿಸುವುದರಿಂದ ಒಳಿತಾಗುತ್ತದೆ ಎಂಬುದು ನಂಬಿಕೆ. ಗುರು ಪೂರ್ಣಿಮೆಯ ಕಥೆ, ಆಚರಣೆ, ಸಮಯ ಹಾಗೂ ಪ್ರಾಮುಖ್ಯತೆಯ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.
ಗುರು ಪೂರ್ಣಿಮೆ ಹಿಂದೂಗಳ ಧಾರ್ಮಿಕ ಆಚರಣೆ. ಈ ದಿನದಂದು ಆಧ್ಯಾತ್ಮಿಕ ಹಾಗೂ ಶೈಕ್ಷಣಿಕ ಗುರುಗಳನ್ನು ಗೌರವಿಸುವ ಸಲುವಾಗಿ ಆಚರಿಸಲಾಗುತ್ತದೆ. ಮಹಾತ್ಮ ಗಾಂಧೀಜಿಯವರು ತಮ್ಮ ಆಧ್ಯಾತ್ಮಿಕ ಗುರು ಶ್ರೀಮದ್ ರಾಮಚಂದ್ರ ಅವರಿಗೆ ಗೌರವ ಸಲ್ಲಿಸಲು ಈ ದಿನವನ್ನು ಪುನರುಜ್ಜೀವನಗೊಳಿಸಿದರು, ಅಂದಿನಿಂದ ಈ ಹಬ್ಬವನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯಲಾಗುತ್ತದೆ ಎಂದು ಹೇಳುತ್ತಾರೆ. ಇದನ್ನು ಭಾರತ, ನೇಪಾಳ, ಭೂತಾನ್‌ನ ಪ್ರಮುಖ ಭಾಗಗಳಲ್ಲಿ ಹಿಂದೂಗಳು, ಜೈನರು ಹಾಗೂ ಬೌದ್ದರು ಆಚರಿಸುತ್ತಾರೆ.
ಗುರು ಪೂರ್ಣಿಮೆ ಎರಡು ಪದಗಳ ಸಂಯೋಜನೆಯಾಗಿದೆ. ಗುರುವು ಸಂಸ್ಕೃತದ ಮೂಲ ಪದಗಳಾದ ಗು ಮತ್ತು ರು ಗಳಿಂದ ಬಂದಿದೆ. ಗು ಎಂದರೆ ಕತ್ತಲೆ ಅಥವಾ ಅಜ್ಞಾನ, ರು ಎಂದರೆ ಬಿಡಿಸುವವನು ಎಂದರೆ ಗುರು ಎಂದರೆ ಕತ್ತಲೆ ಅಥವಾ ಅಜ್ಞಾನದಿಂದ ಬಿಡಿಸುವವನು ಎಂದರ್ಥ. ಹಿಂದೂ ಕ್ಯಾಲೆಂಡರ್ ಪ್ರಕಾರ ಆಷಾಢ ಮಾಸದ ಹುಣ್ಣಿಮೆಯ ದಿನ ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಗ್ರೆಗೋರಿಯನ್ ತಿಂಗಳ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಬರುತ್ತದೆ. ಈ ವರ್ಷ ಜುಲೈ 3 ರಂದು ಗುರು ಪೂರ್ಣಿಮಾ ಆಚರಣೆ ಇದೆ.
ದೃಕ್ ಪಂಚಾಂಗದ ಪ್ರಕಾರ ಪೂರ್ಣಿಮಾ ತಿಥಿ ಅಥವಾ ಹುಣ್ಣಿಮೆಯ ಅವಧಿಯು ಜುಲೈ 2 ರಂದು ರಾತ್ರಿ 8.20ಕ್ಕೆ ಆರಂಭವಾಗುತ್ತದೆ ಮತ್ತು ಜುಲೈ 3 ರಂದು ಸಂಜೆ 5.08ಕ್ಕೆ ಕೊನೆಗೊಳ್ಳುತ್ತದೆ.
ಗುರು ಪೂರ್ಣಿಮೆಯು ಹಿಂದೂ ಪುರಾಣಗಳಲ್ಲಿ ಶ್ರೇಷ್ಠ ಗುರುಗಳಲ್ಲಿ ಒಬ್ಬರೆನಿಸಿದ ಋಷಿ ವ್ಯಾಸರ ಜನ್ಮಕ್ಕೆ ಸಂಬಂಧಿಸಿದ್ದು. ಪುರಾಣ ಕಥೆಗಳ ಪ್ರಕಾರ ವ್ಯಾಸರು ಈ ದಿನದಂದು ಜನಿಸಿದರು. ಅವರು ಮಹಾಭಾರತವನ್ನು ರಚಿಸಿದ ಕವಿಯೂ ಹೌದು. ವೇದಗಳನ್ನು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಿ ಕೀರ್ತಿಯು ಇವರಿಗೆ ಸಲ್ಲುತ್ತದೆ. ಗುರು ಪೂರ್ಣಿಮೆಯು ಬುದ್ಧಿವಂತಿಕೆ, ಆಧ್ಯಾತ್ಮಿಕ, ಸಾಹಿತ್ಯಿಕ ಜ್ಞಾನಕ್ಕೆ ವ್ಯಾಸ ಮಹರ್ಷಿಗಳು ನೀಡಿದ ಕೊಡುಗೆಗಳನ್ನು ಗೌರವಿಸುವ ದಿನವಾಗಿದೆ. ಜ್ಞಾನವನ್ನು ಹರಡುವ ಮತ್ತು ತಮ್ಮ ಶಿಷ್ಯರನ್ನು ಜ್ಞಾನದ ಹಾದಿಯಲ್ಲಿ ಮಾರ್ಗದರ್ಶನ ಮಾಡುವ ಎಲ್ಲಾ ಗುರುಗಳು ಮತ್ತು ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ಸಮಯವೂ ಇದಾಗಿದೆ.
