
ಸಕಲೇಶಪುರ : ಜೋಕಾಲಿ ಆಡಲು ಹೋಗಿ ಬಾಲಕಿ ಪ್ರಾಣ ಕಳೆದುಕೊಂಡಿರುವ ಹೃದಯವಿದ್ರಾವಕ ಘಟನೆ ತಾಲ್ಲೂಕು ಹೆತ್ತೂರು ಹೋಬಳಿ ವನಗೂರು ಗ್ರಾಮದಲ್ಲಿ ನಡೆದಿದೆ. ಸಾನಿತಾ (9) ಮೃತಪಟ್ಟ ಬಾಲಕಿ.
ಬಸವರಾಜು-ಬೇಬಿ ದಂಪತಿಯ ಒಬ್ಬಳೇ ಪುತ್ರಿ ಸಾನಿತಾ ನಾಲ್ಕನೇ ತರಗತಿ ಓದುತ್ತಿದ್ದು, ಶನಿವಾರ ಶಾಲೆಗೆ ರಜೆಯಿದ್ದ ಕಾರಣ ಮನೆಯೊಳಗೆ ಸೀರೆ ಕಟ್ಟಿಕೊಂಡು ಜೋಕಾಲಿ ಆಡುತ್ತಿದ್ದಳು. ಈ ವೇಳೆ ಆಯತಪ್ಪಿ ಸಾನಿತಾ ಕುತ್ತಿಗೆಗೆ ಸೀರೆ ಬಿಗಿದು ಸಾವನ್ನಪ್ಪಿದ್ದಾಳೆ.
ಇದ್ದ ಒಬ್ಬಳೇ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
