
ಸಕಲೇಶಪುರ : ನಿತ್ಯ ಹರಿದ್ವರ್ಣ ಕಾಡು, ಹಚ್ಚ ಹಸಿರಿನ ಸೆರಗುಟ್ಟು ಕಂಗೊಳಿಸುವ ನಮ್ಮ ಸಕಲೇಶಪುರದ ಮಲೆನಾಡು ಬಾಗ ಇನ್ನೇನು ಕೆಲವೇ ದಿನಗಳಲ್ಲಿ ಬರಭೂಮಿಯಾಗಿ ಮಾರ್ಪಾಡಾಗಲಿದೆ.
ಮೈತುಂಬಿ ಹರಿಯ ಬೇಕಾದ ಸಕಲೇಶಪುರದ ಜೀವ ನದಿ ತಾಯಿ ಹೇಮಾವತಿ ಮಳೆಯಿಲ್ಲದೆ ಸೊರಗಿ ಹೋಗಿದ್ದಾಳೆ. ರೈತರು, ಕಾಫಿ ಬೆಳೆಗಾರರು ತಲೆ ಮೇಲೆ ಕೈ ಇಟ್ಟು ಕೂರುವ ಕಾಲ ದೂರವಿಲ್ಲ.
ಕಳೆದ ವರ್ಷದ ಮಳೆಗೆ ಹೋಲಿಕೆ ಮಾಡಿದರೆ ಈ ವರ್ಷ ವರುಣನ ಕೃಪೆ ನಮ್ಮ ಮಲೆನಾಡ ಮೇಲೆ ಇಲ್ಲದಿರುವುದು ನಮ್ಮ ದುರ್ವಿಧಿ. ಕಳೆದ ವರ್ಷ ಇಂದಿನ ದಿನಕ್ಕೆ ಸರಾಸರಿ 86 ಇಂಚು ಮಳೆಯಾಗಿತ್ತು ಆದರೆ ಈ ವರ್ಷ ಕೇವಲ 39 ಇಂಚಷ್ಟು ಮಳೆಯಾಗಿದ್ದು ಬರಗಾಲ ಪರಿಸ್ಥಿತಿ ಎದುರಾಗಿದೆ.
ಆದುದರಿಂದ ರಾಜ್ಯ ಸರ್ಕಾರ ಕೂಡಲೇ ನಮ್ಮ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಬಗ್ಗೆ ಗಮನ ಹರಿಸಿ ಸಕಲೇಶಪುರವನ್ನು ಬರ ಪೀಡತ ಪ್ರದೇಶ ಎಂದು ಘೋಷಿಸಬೇಕು ಮತ್ತು ರಾಜ್ಯದ ಮಲೆನಾಡು ಭಾಗಗಳಾದ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ ಮತ್ತು ಇತರೆ ಜಿಲ್ಲೆಗಳನ್ನು ಕೂಡ ಗಣನೆಗೆ ತೆಗೆದು ಕೊಂಡು ಸರ್ಕಾರ ಕೂಡಲೇ ಸರ್ವೇ ನಡೆಸಿ ಬರ ಪೀಡಿತ ಪ್ರದೇಶ ಎಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು.
ಈಗಾಗಲೇ ಮಳೆ ಇಲ್ಲದೆ ಕಂಗೆಟ್ಟು ಬೆಳೆದ ಬೆಳೆಗೆ ಸೂಕ್ತ ಬೆಲೆ ಇಲ್ಲದೆ ಬೆಲೆಯೇರಿಕೆಯ ಕಾವನ್ನು ಸಹಿಸದೆ ಆತ್ಮಹತ್ಯೆಯ ಕಡೆ ಮುಖ ಮಾಡುತ್ತಿರುವ ರೈತರಿಗೆ ಸರ್ಕಾರ ಆಶಾ ಕಿರಣ ವಾಗಬೇಕು.
ಬರದ ಭೀತಿ, ಸಾಲ ಬಾಧೆಯಿಂದ ರೈತರ ಆತ್ಮಹತ್ಯೆ ನಮ್ಮ ಮಲೆನಾಡು ಭಾಗದಲ್ಲಿ ಆಗಬಾರದು. ಸರ್ಕಾರ ರೈತರಿಗೆ ಸೂಕ್ತ ಬೆಂಬಲ ಬೆಲೆ ಮತ್ತು ಬರ ಪರಿಹಾರ ನೀಡಬೇಕೆಂದು ಮಲೆನಾಡು ರಕ್ಷಣಾ ಸೇನೆ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಸಾಗರ್ ಜಾನೆಕೆರೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
