
ಹಾಸನ : ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಬಿಸಿಲಹಳ್ಳಿ ಗ್ರಾಮದಲ್ಲಿ ಕಲುಷಿತ ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದ ದಂಪತಿ ಸಾವು ಪ್ರಕರಣ ಸಂಬಂಧ ತನಿಖೆ ವೇಳೆ ದಂಪತಿ ಸಾವಿನ ರಹಸ್ಯ ಬಯಲಾಗಿದ್ದು, ಆರೋಪಿ ಜೈಲು ಪಾಲಾಗಿದ್ದಾನೆ.ಕಲುಷಿತ ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದ ದಂಪತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ತನಿಖೆ ವೇಳೆ ಪುತ್ರನೇ ತನ್ನ ಪೋಷಕರಿಗೆ ವಿಷ ಹಾಕಿ ಕೊಲೆ ಮಾಡಿರುವ ರಹಸ್ಯ ಬಯಲಾಗಿದೆ.
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಬಿಸಿಲಹಳ್ಳಿ ಗ್ರಾಮದಲ್ಲಿ ಉಮಾ (48), ನಂಜುಂಡಪ್ಪ (55) ದಂಪತಿ ಮೃತ ದುರ್ದೈವಿಗಳಾಗಿದ್ದು, ಪುತ್ರ ಮಂಜುನಾಥ್ (27) ತಂದೆ-ತಾಯಿಯನ್ನೇ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ.ಉಮಾ ಹಾಗೂ ನಂಜುಂಡಪ್ಪ ದಂಪತಿಗೆ ಮಂಜುನಾಥ್ ಎರಡನೇ ಪುತ್ರನಾಗಿದ್ದು, ಮಂಜುನಾಥ್ ವಿಧವೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎಂಬ ಆರೋಪಗಳಿವೆ.
ಮಗನ ಈ ಸಂಬಂಧಕ್ಕೆ ತಾಯಿ ಮೃತ ಉಮಾ ವಿರೋಧ ವ್ಯಕ್ತಪಡಿಸಿದ್ದು, ಆಗಾಗ ಬುದ್ಧಿ ಮಾತುಗಳನ್ನು ಹೇಳುತ್ತಿದ್ದರು ಎನ್ನಲಾಗಿದೆ. ಇನ್ನು ಸಹಕಾರ ಸಂಘಗಳಲ್ಲಿ ತಾಯಿ ಉಮಾ ಮಾಡಿದ್ದ ಸಾಲದ ಹಣವನ್ನು ಮಂಜುನಾಥ್ ದುರುಪಯೋಗ ಪಡಿಸಿಕೊಂಡಿದ್ದ. ಹೀಗಾಗಿ ಮೃತ ಉಮಾ ಹಣ ನೀಡುವಂತೆ ಪದೇ ಪದೇ ಒತ್ತಾಯಿಸುತ್ತಿದ್ದರು ಜೊತೆಗೆ ತನ್ನ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಕೋಪಗೊಂಡಿದ್ದ ಆರೋಪಿ ಮಂಜುನಾಥ್ ತಾಯಿಯ ಕೊಲೆ ಸಂಚು ಮಾಡಿದ್ದ ಎನ್ನಲಾಗಿದೆ.
ಆಗಸ್ಟ್ 15 ರಂದು ಮನೆಯಲ್ಲಿ ತಾಯಿ ಉಮಾ ಬೆಳಗ್ಗೆ ತಿಂಡಿಗೆ ಪಲಾವ್ ಮಾಡಿದ್ದರು. ಆರೋಪಿ ಮಂಜುನಾಥ್ ತನ್ನ ತಂದೆ, ತಾಯಿಗಿಂತ ಮೊದಲೇ ತಿಂಡಿ ತಿಂದು ಆ ನಂತರ ಪಲಾವ್‌ಗೆ ಕಳೆ ನಾಶಕ ಬೆರೆಸಿದ್ದ. ಅಲ್ಲದೆ ತಂದೆ, ತಾಯಿ ತಿಂಡಿ ತಿಂದ ವೇಳೆ ಔಷಧಿ ವಾಸನೆ ಬರುತ್ತಿದೆ ಎಂದು ವಾಂತಿ ಮಾಡಿ ನಾಟಕವಾಡಿದ್ದ ಎನ್ನಲಾಗಿದೆ.
ಆಗಸ್ಟ್ 15 ರಂದು ಮನೆಯಲ್ಲಿ ತಿಂಡಿ ತಿಂದ ಬಳಿಕ ದಂಪತಿ ಅಸ್ವಸ್ಥಗೊಂಡಿದ್ದರು. ಕಳೆದ ಗುರುವಾರ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಬರುವ ವೇಳೆ ಇಬ್ಬರೂ ಏಕಾಏಕಿ ಸಾವಿಗೀಡಾಗಿದ್ದಾರೆ. ಇದರಿಂದ ಅನುಮಾನಗೊಂಡ ಮತ್ತೊಬ್ಬ ಪುತ್ರ ತಂದೆ-ತಾಯಿಯ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.ಗುರುವಾರ ಅಂತ್ಯಕ್ರಿಯೆಗೆ ಸಿದ್ದತೆ ಮಾಡಿಕೊಂಡಿದ್ದ ವೇಳೆ ಗ್ರಾಮಕ್ಕೆ ಆಗಮಿಸಿದ ಪೊಲೀಸರು ಅಂತ್ಯಕ್ರಿಯೆ ತಡೆದು ಕುಟುಂಬ ಸದಸ್ಯರ ಮನವೊಲಿಸಿ ಮೃತದೇಹಗಳ ಮರಣೋತ್ತರ ಪರೀಕ್ಷೆ ಮಾಡಿಸಿದ್ದಾರೆ.
ಅಸಹಜ ಸಾವು ಎಂದು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಈ ವೇಳೆ ಮಂಜುನಾಥ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಪೋಷಕರನ್ನು ಆತನೇ ಕೊಲೆ ಮಾಡಿರುವ ಸತ್ಯ ಬಯಲಾಗಿದೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

