ಜಿಲ್ಲೆಯಲ್ಲಿ ಬರಗಾಲ ಅವರಿಸಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸ್ಪಂದಿಸುವ ಜವಾಬ್ದಾರಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಇಲ್ಲವೇ?’ ಎಂದು ಶಾಸಕ ಎಚ್‌.ಡಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೈತರು ಅಷ್ಟಿಷ್ಟು ಮೆಕ್ಕೆಜೋಳ ಬೆಳೆದಿದ್ದು, ಈಗ ದಲ್ಲಾಳಿಗಳಿಗೆ ಮಾರಾಟ ಮಾಡುವಂತಾಗಿದೆ.ಅದರ ಬದಲು ರೈತರಿಂದಲೇ ನೇರವಾಗಿ ಕೆಎಂಎಫ್‌ ಖರೀದಿಸಬೇಕು ಎಂದು ಒತ್ತಾಯಿಸಿದ್ದೇನೆ’ ಎಂದರು.

ಈ ಬಗ್ಗೆ ಉಸ್ತುವಾರಿ ಸಚಿವರ ಪ್ರತಿಕ್ರಿಯೆ ನೋಡಿದ್ದೇನೆ. ನಿರ್ದೇಶಕನಾಗಿ ಕೆಎಂಎಫ್‌ ಆಡಳಿತ ಮಂಡಳಿ ಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ. ಮಾಜಿ ಸಚಿವನಾಗಿದ್ದರೂ, ಸಭೆಯಲ್ಲಿ ಭಾಗವಹಿಸಿ ರೈತರ ಕಷ್ಟಗಳ ಬಗ್ಗೆ ವಿವರಿಸಿದ್ದೇನೆ. ಆದರೆ, ಕಾಂಗ್ರೆಸ್‌ ಪಕ್ಷದವರೇ 10 ಜನ ನಿರ್ದೇಶಕರಿದ್ದಾರೆ. ಮೇಲಾಗಿ ಉಸ್ತುವಾರಿ ಸಚಿವರೇ ಸಹಕಾರ ಸಚಿವರು. ಹೀಗಾಗಿ ಅವರಿಗೆ ಯಾವುದೇ ಹೊಣೆ ಇಲ್ಲವೇ?’ ಎಂದು ತಿರುಗೇಟು ನೀಡಿದರು.

‘ಕೆಎಂಎಫ್‌ ಅನ್ನು ಲೂಟಿ ಹೊಡೆಯುವವರಿಗೆ ಬಿಟ್ಟು ಬಿಡುವುದಾದರೆ, ಬಿಡಲಿ. ನನ್ನ ಅಭ್ಯಂತರವೇನಿಲ್ಲ. ಪಶು ಆಹಾರ ಉತ್ಪಾದನೆಗೆ ತಿಂಗಳಿಗೆ 14,500 ಟನ್ ಮೆಕ್ಕೆ ಜೋಳ ಅಗತ್ಯವಾಗಿದೆ. ಈ ಬಗ್ಗೆ ಸಹಕಾರ ಸಚಿವರಿಗೆ ಪತ್ರ ಬರೆದಿದ್ದೇನೆ. ಕೆಎಂಎಫ್ ನಿರ್ದೇಶಕನಾಗಿ ನನ್ನ ಕರ್ತವ್ಯ ಮಾಡಿದ್ದೇನೆ. ನಾವು ಲೂಟಿ ಮಾಡಬೇಕು, ನಮ್ಮ ಸರ್ಕಾರ ಇರುವುದೇ ಐದು ವರ್ಷ ಲೂಟಿ ಮಾಡುವುದಕ್ಕೆ ಎಂಬ ಅವರಿಗೆ ಭಾವನೆ ಇದ್ದರೆ ನಾನು ಏನೂ ಮಾಡಲು ಆಗುವುದಿಲ್ಲ’ ಎಂದು ಕಿಡಿ ಕಾರಿದರು.

ಮೈತ್ರಿಯಿಂದ ಭಯ: ‘ರಾಜ್ಯದಲ್ಲಿ ನಾವು ಯಾರ ಜೊತೆಗಾದರೂ ಮೈತ್ರಿ ಮಾಡಿಕೊಳ್ಳುತ್ತೇವೆ, ಇವರಿಗೇನು? ಚುನಾವಣೆ ಬಂದಾಗ ನಾವು ಸೀಟು ಹಂಚಿಕೆ ಬಗ್ಗೆ ಮಾತನಾಡುತ್ತೇವೆ. ಮೈತ್ರಿಯಿಂದಾಗಿ ರಾಜ್ಯದಲ್ಲಿ ಆಡಳಿತ ಪಕ್ಷಕ್ಕೆ ಭಯ ಶುರುವಾಗಿರಬೇಕು. ರಾಜ್ಯದ ಜನರು 135 ಸ್ಥಾನಗಳನ್ನು ಕೊಟ್ಟಿದ್ದರೂ, ಇದೇ ಭಯಕ್ಕೆ ಇನ್ನೂ ಬೇರೆ ಪಕ್ಷದವರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ’ ಎಂದು ರೇವಣ್ಣ ಲೇವಡಿ ಮಾಡಿದರು.’ಮೈತ್ರಿ ಅಭ್ಯರ್ಥಿಗಳನ್ನು ಸೋಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ’ ಎಂಬ ಸಚಿವ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ರೇವಣ್ಣ, ‘ಜನರು ಏನು ತೀರ್ಮಾನ ಕೊಡುತ್ತಾರೋ ಅದನ್ನು ನೋಡೋಣ. ಮೈತ್ರಿ ಇದ್ದಾಗಲೇ ಕಳೆದ ಬಾರಿ ತುಮಕೂರಿನಲ್ಲಿ ದೇವೇಗೌಡರನ್ನು ಸೋಲಿಸಲಿಲ್ಲವೇ? 5 ವರ್ಷ ನೀವೇ ಅಧಿಕಾರ ಮಾಡಿ ಎಂದು ಹೇಳಿದವರು, 17 ಜನರನ್ನು ಬಿಜೆಪಿಗೆ ಕಳುಹಿಸಲಿಲ್ಲವೇ’ ಎಂದು ಪ್ರಶ್ನಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *