
ಹಾಸನ : ಜಿಲ್ಲೆಯ ಅಧಿದೇವತೆ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವ ನವೆಂಬರ್ 2 ರಿಂದ 15 ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಾರಿಗೆ, ಲೋಕೋಪಯೋಗಿ ಇಲಾಖೆಗಳ ಸಹಯೋಗದಲ್ಲಿ ಉತ್ಸವಕ್ಕೆ ಹೊಸ ರೂಪ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ತಿಳಿಸಿದರು.
ಗುರುವಾರ ಇಲ್ಲಿ ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಅವರು, ಜಿಲ್ಲಾಡಳಿತ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಪ್ರವಾಸೋದ್ಯಮ ಇಲಾಖೆ ವತಿಯಿಂದ ನವೆಂಬರ್ 3 ರಿಂದ 14ರವರೆಗೆ ಪ್ಯಾಕೇಜ್ ಟೂರ್ ಆಯೋಜಿಸಲಾಗಿದೆ. ನಾಲ್ಕು ಪ್ಯಾಕೇಜ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದರು.
1 ನೇ ಪ್ಯಾಕೇಜ್‌ನಲ್ಲಿ ಪ್ರಾಕೃತಿಕ ನೈಸರ್ಗಿಕ ಪ್ರವಾಸ ತಾಣಗಳನ್ನು ಗುರುತಿಸಲಾಗಿದೆ. ಹಾಸನದಿಂದ- ವಿಜಯದುರ್ಗ ದೇವಾಲಯ, ಪಾಳ್ಯ ಜನಾರ್ದನ ಸ್ವಾಮಿ ದೇವಸ್ಥಾನ, ಕೆಂಚಮ್ಮನ ಹೊಸಕೋಟೆ ದೇವಾಲಯ, ಬಿಸಿಲೆ ಘಾಟ್, ಮೂಕನಮನೆ ಫಾಲ್ಸ್, ಮಂಜರಾಬಾದ್ ಕೋಟೆ, ಹಾಸನ ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲಯ ಒಳಗೊಂಡಿದ್ದು, 195 ಕಿ.ಮೀ. ಪ್ರವಾಸದ ಮಾರ್ಗವಿದೆ. ವಯಸ್ಕರಿಗೆ ₹ 425 ಹಾಗೂ ಮಕ್ಕಳಿಗೆ ₹ 325 ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
2 ನೇ ಪ್ಯಾಕೇಜ್‌ನಲ್ಲಿ ಐತಿಹಾಸಿಕ ಪ್ರವಾಸಿ ಸರ್ಕ್ಯೂಟ್ ಅನ್ನು ಗುರುತಿಸಲಾಗಿದೆ. ಹಾಸನದಿಂದ ಹೊರಟು ದೊಡ್ಡಗದ್ದವಳ್ಳಿ, ಬೇಲೂರು ಚೆನ್ನಕೇಶವ ದೇವಾಲಯ, ಯಗಚಿ ಜಲಾಶಯ, ಜೈನರ ಬಸದಿ, ಪುಷ್ಪಗಿರಿ ಬೆಟ್ಟ, ಹಳೇಬೀಡು, ಜಾವಗಲ್ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯ, ಕೊಂಡಜ್ಜಿ, ಮಳೆಮಲ್ಲೇಶ್ವರ ದೇವಸ್ಥಾನ, ಸಿಗೇಗುಡ್ಡ, ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲಯ ಒಳಗೊಂಡಿದ್ದು, 143 ಕಿ.ಮೀ. ಮಾರ್ಗದ ಈ ಪ್ಯಾಕೇಜ್‌ನಲ್ಲಿ ₹350 ವಯಸ್ಕರಿಗೆ, ಮಕ್ಕಳಿಗೆ ₹ 250 ನಿಗದಿಪಡಿಸಲಾಗಿದೆ ಎಂದು ವಿವರಿಸಿದರು.
3 ನೇ ಪ್ಯಾಕೇಜ್‌ನಲ್ಲಿ ಹಾಸನ ನಗರದಿಂದ ಹೊರಟು ಕೋರವಂಗಲ, ಹಾರನಹಳ್ಳಿ, ಮಾಲೇಕಲ್ ತಿರುಪತಿ, ಶಿವಾಲಯ ದೇವಾಲಯ, ಜೇನುಕಲ್ ಸಿದ್ದೇಶ್ವರ ಬೆಟ್ಟ, ಮಹಾತ್ಮ ಗಾಂಧಿ ಚಿತಾಭಸ್ಮ, ಶಾಂತಿಗ್ರಾಮ ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲಯ ಸೇರಿದಂತೆ 119 ಕಿ.ಮೀ. ಇರಲಿದೆ. ವಯಸ್ಕರಿಗೆ ₹ 325, ಮಕ್ಕಳಿಗೆ ₹ 225 ನಿಗದಿ ಮಾಡಲಾಗಿದೆ ಎಂದು ಹೇಳಿದರು.
4 ನೇ ಪ್ಯಾಕೇಜ್‌ನಲ್ಲಿ ಹಾಸನದಿಂದ ಹೊರಟು ನುಗ್ಗೇಹಳ್ಳಿ, ಜನಿವಾರ ಕೆರೆ ಸಾಹಸ ಕ್ರೀಡೆ, ಶ್ರವಣಬೆಳಗೊಳ, ಶಾಂತಿ ಗ್ರಾಮ, ಭೋಗಾಯೋಗಾ ನರಸಿಂಹಸ್ವಾಮಿ ದೇವಾಲಯ, ಗೆಂಡೆಕಟ್ಟೆ ಅರಣ್ಯ, ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲಯ ಸೇರಿದಂತೆ ಒಟ್ಟು 140 ಕಿ.ಮೀ. ಪ್ರವಾಸ ಮಾರ್ಗ ಇದಾಗಿದ್ದು, ವಯಸ್ಕರಿಗೆ ₹ 350 ಹಾಗೂ ಮಕ್ಕಳಿಗೆ ₹ 250 ದರ ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.
ಪ್ಯಾಕೇಜ್ 5 ರಲ್ಲಿ ಆಸಕ್ತರು ಭಾಗವಹಿಸಬಹುದಾಗಿದ್ದು, ಚಾರಣಪ್ರಿಯರಿಗೆ ಅವಕಾಶ ಕಲ್ಪಿಸಲಾಗಿದೆ. ಹಾಸನದಿಂದ ಹೊರಟು ಹೆರೂರು ಗವಿಬೆಟ್ಟ, ಪಟ್ಲಬೆಟ್ಟ, ಬಿಸಿಲೆ ಘಾಟ್, ಹೊಸಹಳ್ಳಿ ಗುಡ್ಡ, ಅಗನಿಗುಡ್ಡ, ಬೆಟ್ಟದ ಭೈರವೇಶ್ವರ, ಮಗಜಹಳ್ಳಿ ಜಲಪಾತ, ಮೂಕನಮನೆ ಜಲಪಾತ ವೀಕ್ಷಣೆ ಮಾಡಬಹುದಾಗಿದೆ ಎಂದು ಹೇಳಿದರು.
ಒಂದು ಬಸ್‌ನಲ್ಲಿ ಕನಿಷ್ಠ 20 ಮಂದಿ ಪ್ರವಾಸಿಗರು ಇದ್ದಲ್ಲಿ ಮಾತ್ರ ಪ್ರವಾಸ ಆರಂಭಿಸಲಾಗುವುದು. ಪ್ರತಿ ಬಸ್‌ನಲ್ಲಿ ಪ್ರವಾಸಿ ತಾಣಗಳ ಬಗ್ಗೆ ಉಚಿತವಾಗಿ ಮಾರ್ಗದರ್ಶನ ನೀಡಲು ಪ್ರವಾಸಿ ಮಾರ್ಗದರ್ಶಿಗಳು ನಿಯೋಜಿಸಲಾಗಿದೆ. ಸಕಲೇಶಪುರ ಸರ್ಕ್ಯೂಟ್ ಹೊರತುಪಡಿಸಿ, ಬೇಲೂರು, ಅರಸೀಕೆರೆ ಮತ್ತು ಶ್ರವಣಬೆಳಗೊಳ ಪ್ಯಾಕೇಜ್ ಟೂರ್‌ನಲ್ಲಿ ಉಚಿತ ಊಟದ ವ್ಯವಸ್ಥೆ ಇರಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ತಿಪ್ಪೇಸ್ವಾಮಿ ಮಾಹಿತಿ ನೀಡಿದರು.
ಹಾಸನಾಂಬ ದೇವಸ್ಥಾನ ಆಡಳಿತಾಧಿಕಾರಿಯೂ ಆದ ಉಪ ವಿಭಾಗಾಧಿಕಾರಿ ಮಾರುತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ಹರೀಶ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಮನು ಇದ್ದರು.
ಸಿ. ಸತ್ಯಭಾಮಾ ಜಿಲ್ಲಾಧಿಕಾರಿ ಮಾತನಾಡಿ ಎಲ್ಲಾ ಪ್ಯಾಕೇಜ್ ಟೂರ್‌ಗಳಿಗೆ ಶಕ್ತಿ ಯೋಜನೆ ಅನ್ವಯಿಸುವುದಿಲ್ಲ. ಪ್ರತಿದಿನ ಹಾಸನ ನಗರ ಬಸ್ ನಿಲ್ದಾಣದಿಂದ ಬೆಳಿಗ್ಗೆ 7 ಗಂಟೆಗೆ ಆರಂಭವಾಗುವ ಪ್ರವಾಸ ಸಂಜೆ 7 ಗಂಟೆಗೆ ಹಾಸನ ನಗರ ಬಸ್ ನಿಲ್ದಾಣದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.
ಆಗಸದಿಂದ ಹಾಸನ ಕಾರ್ಯಕ್ರಮ : ಪ್ರವಾಸೋದ್ಯಮದ ಅಭಿವೃದ್ದಿಗೆ ಮತ್ತಷ್ಟು ಒತ್ತು ನೀಡುವ ಉದ್ದೇಶದಿಂದ ಆಗಸದಿಂದ ಹಾಸನ ಕಾರ್ಯಕ್ರಮ ರೂಪಿಸಲಾಗಿದೆ. ನವೆಂಬರ್ 3 ರಿಂದ 6 ರವರೆಗೆ ಡೆಕ್ಕನ್ ಚಾರ್ಟರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಿಂದ ಹೆಲಿಟೂರಿಸಂ ಆಯೋಜಿಸಲಾಗಿದ್ದು ಪ್ರತಿಯೊಬ್ಬರಿಗೆ ₹ 4300 ದರ ನಿಗದಿ ಮಾಡಲಾಗಿದೆ.
ಎರಡು ವರ್ಷದೊಳಗಿನ ಮಕ್ಕಳಿಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಸತ್ಯಭಾಮಾ ತಿಳಿಸಿದರು. ಬೆಳಿಗ್ಗೆ 9 ರಿಂದ ಸಂಜೆ 5.30 ರವರೆಗೆ ಹೆಲಿಟರಿಸಂ ಸಮಯ ನಿಗದಿಪಡಿಸಲಾಗಿದ್ದು 6 ರಿಂದ 7 ನಿಮಿಷ ಹೆಲಿಕಾಪ್ಟರ್ ಮೂಲಕ ಹಾರಾಟ ನಿಗದಿ ಮಾಡಲಾಗಿದೆ. ಪ್ರತಿ ಹಾರಾಟದಲ್ಲಿ ಆರು ಪ್ರಯಾಣಿಕರನ್ನು ಕೊಂಡಲಾಗುತ್ತಿದ್ದು ಹಾಸನ ನಗರದ ಪರಿಸರದ ರಮಣೀಯ ನೋಟ ವೀಕ್ಷಣೆಗೆ ಅವಕಾಶವಿದೆ. ಮಳೆಮಲ್ಲೇಶ್ವರ ದೇವಸ್ಥಾನ ಸಿಗೇಗುಡ್ಡ ಹಾಸನಾಂಬ ದೇವಾಲಯ ದೇವಿಗೆರೆ ಕೊಳ ಗೆಂಡೆಕಟ್ಟೆ ಅರಣ್ಯ ಪ್ರದೇಶವನ್ನು ಹೆಲಿ ಟೂರಿಸಂ ಮೂಲಕ ವೀಕ್ಷಣೆ ಮಾಡಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಹಾಗೂ ಟಿಕೆಟ್ ಬುಕಿಂಗ್‌ಗೆ ಇಲಾಖೆಯ ಸಹಾಯಕ ಎಂಜಿನಿಯರ್ ಮನು (ಮೊ.ಸಂ. 9008181879) ಹಾಗೂ ಡೆಕ್ಕನ್ ಚಾರ್ಟರ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ಯಾಸಿನ್ (ಮೊ.ಸಂ. 9448397710 9900027530 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಪ್ಯಾರಾಸೈಲಿಂಗ್ ಪ್ಯಾರಾ ಮೋಟಾರಿಂಗ್ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಜಿಲ್ಲೆಯ ಯುವ ಸಮುದಾಯವನ್ನು ಗುರಿಯಾಗಿಸಿಕೊಂಡು ಸಾಹಸ ಕ್ರೀಡೆಗಳತ್ತ ಆಕರ್ಷಿಸಲು ಜಿಲ್ಲಾಡಳಿತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಪ್ಯಾರಾಸೈಲಿಂಗ್ ಮತ್ತು ಪ್ಯಾರಾಮೋಟಾರಿಂಗ್ ವಾಯು ಸಾಹಸ ಕ್ರೀಡೆಗಳನ್ನು ನವೆಂಬರ್ 2 ರಿಂದ 15 ರವರೆಗೆ ಭುವನಹಳ್ಳಿ ವಿಮಾನ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ತಿಳಿಸಿದರು.
ಬೆಂಗಳೂರು ಮೂಲದ ಸ್ಕೈ ಅವೇಕ್ಸ್ ಅಡ್ವೆಂಚರ್ಸ್ ಸಂಸ್ಥೆಯಿಂದ ಸಾಹಸ ಕ್ರೀಡೆಗಳನ್ನು ಆಯೋಜಿಸಲಾಗಿದ್ದು ಪ್ಯಾರಾಸೈಲಿಂಗ್‌ಗೆ ಪ್ರತಿ ವ್ಯಕ್ತಿಗೆ ₹ 500 ಪ್ಯಾರಾ ಮೋಟಾರಿಂಗ್‌ಗೆ ಪ್ರತಿ ವ್ಯಕ್ತಿಗೆ ₹ 2ಸಾವಿರ ದರ ನಿಗದಿ ಪಡಿಸಲಾಗಿದೆ. ಪ್ರತಿ ವ್ಯಕ್ತಿಯನ್ನು ಆಕಾಶದಲ್ಲಿ ನಾಲ್ಕರಿಂದ ಐದು ನಿಮಿಷ ಹಾರಿಸಲಾಗುತ್ತದೆ ಎಂದು ಹೇಳಿದರು.
ಈ ಸಂಸ್ಥೆಯು 50 ವರ್ಷದ ಸಾಹಸ ಕ್ರೀಡೆಗಳ ಅನುಭವವಿದ್ದು ಸುರಕ್ಷತೆಗಾಗಿ ಹೆಲ್ಮೆಟ್ ಗಾರ್ಡ್ ಇತರೆ ಪರಿಕರಗಳನ್ನು ಸಂಸ್ಥೆಯ ಒದಗಿಸುತ್ತದೆ. ಜಿಲ್ಲಾಡಳಿತದಿಂದ ತುರ್ತು ವೈದ್ಯಕೀಯ ವ್ಯವಸ್ಥೆಯನ್ನು ಸ್ಥಳದಲ್ಲಿ ಒದಗಿಸಲಾಗಿದೆ. ಹಾಸನಾಂಬ ಜಾತ್ರಾ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಸಾರ್ವಜನಿಕರ ಮನರಂಜನೆಗಾಗಿ ಇಂತಹ ಕಾರ್ಯಕ್ರಮಗಳನ್ನು ಜಿಲ್ಲಾಡಳಿತದಿಂದ ಆಯೋಜಿಸಲಾಗಿದೆ ಎಂದು ಹೇಳಿದರು.
