ಉಗ್ರರ ಗುಂಡಿನ ಕಾಳಗದಲ್ಲಿ ವೀರಮರಣವನ್ನಪ್ಪಿದ ಕನ್ನಡಿಗ ಯೋಧ ಎಂ.ವಿ. ಪ್ರಾಂಜಲ್ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಸುಮಾರು 30 ಕಿಮೀ ಅಂತಿಮಯಾತ್ರೆ ನಡೆಸಿದ್ದು ದಾರಿಯುದ್ಧಕ್ಕೂ ಜನರು ಸಾಲಾಗಿ ನಿಂತು ವೀರಯೋಧನಿಗೆ ಅಂತಿಮ ನಮನ ಸಲ್ಲಿಸಿದ್ರು. ದೇಶಕ್ಕಾಗಿ ಬಲಿದಾನಗೈದ ಯೋಧನಿಗೆ ಕಣ್ಣೀರ ವಿದಾಯ ಹೇಳಿದ್ರು.

ಸೇನಾ ವಾಹನದಲ್ಲಿ ಹುತಾತ್ಮ ಕ್ಯಾಪ್ಟನ್ ಪ್ರಾಂಜಲ್ ಅಂತಿಮ ಯಾತ್ರೆ. ಕುಶಾಲತೋಪು ಸಿಡಿಸಿ ಸೇನಾಧಿಕಾರಿಗಳಿಂದ ಗೌರವ ಸಮರ್ಪಣೆ. ರಸ್ತೆಯುದ್ದಕ್ಕೂ ತ್ರಿವರ್ಣ ಧ್ವಜ ಹಿಡಿದು ವೀರಯೋಧನಿಗೆ ಗೌರವ ಸಲ್ಲಿಸುತ್ತಿರುವ ಜನರು. ಸಾಲಾಗಿ‌ ನಿಂತು ಅಂತಿಮ ನಮನ ಸಲ್ಲಿಸುತ್ತಿರುವ ವಿದ್ಯಾರ್ಥಿಗಳು. ಎಲ್ಲರ ಬಾಯಲ್ಲೂ ಬರುತ್ತಿರೋ ಜಯಘೋಷ ಕ್ಯಾಪ್ಟನ್ ಪ್ರಾಂಜಲ್ ಅಮರ್​ ರಹೇ. ಭಾರತ ಮಾತಾ ಕೀ ಜೈ.

ಕ್ಯಾಪ್ಟನ್ ಎಮ್​ವಿ ಪ್ರಾಂಜಲ್. ಜಮ್ಮು-ಕಾಶ್ಮೀರದ ರಜೌರಿಯಲ್ಲಿ ಕಳೆದ 22 ರಂದು ಉಗ್ರರ ಜೊತೆಗಿನ ಕಾಳಗದಲ್ಲಿ ಗುಂಡುಗಳಿಗೆ ಎದೆಯೊಡ್ಡಿ ವೀರಮರಣವನ್ನಪ್ಪಿದ ಯೋಧ. ಉಗ್ರರ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿ ಭಾರತಾಂಬೆಯ ಪದತಲ ಸೇರಿದ್ದಾರೆ.

ಇಂದು ಆ ವೀರಯೋಧನಿಗೆ ಕನ್ನಡಿಗರೆಲ್ಲರೂ ಕಣ್ಣೀರ ವಿದಾಯ ಹೇಳಿದ್ದಾರೆ. ಕ್ಯಾಪ್ಟನ್ ಪ್ರಾಂಜಲ್ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಬೆಂಗಳೂರಿನ ಸೋಮಸುಂದರಪಾಳ್ಯ ವಿದ್ಯುತ್​ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಕ್ಯಾಪ್ಟನ್​ ಪ್ರಾಂಜಲ್​ ಅಂತ್ಯಕ್ರಿಯೆ ನೆರವೇರಿದೆ.

ಇದಕ್ಕೂ ಮೊದಲು ಬೆಂಗಳೂರಿನ ಆನೇಕಲ್​ನ ಜಿಗಣಿ ಬಳಿಯ ನಂದನವನ ಲೇಔಟ್​​ನ ನಿವಾಸದಲ್ಲಿ ಅಂತಿಮ ದರ್ಶನ ನಡೆಯಿತು.

ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಜನರು ದೇಶಕ್ಕಾಗಿ ಬಲಿದಾನಗೈದ ಪ್ರಾಂಜಲ್​ರಿಗೆ ಅಂತಿಮ ನಮನ ಸಲ್ಲಿಸಿದರು.

ಸಕಲ ಸರಕಾರಿ ಗೌರವಗಳೊಂದಿಗೆ ಮಧ್ಯಾಹ್ನ 12.30ಕ್ಕೆ ನಿವಾಸದಿಂದ ತೆರೆದ ಸೇನಾ ವಾಹನದಲ್ಲಿ ಸುಮಾರು 30 ಕಿಲೋ ಮೀಟರ್ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು.

ದಾರಿಯುದ್ದಕ್ಕೂ ಜನರು ತ್ರಿವರ್ಣ ಧ್ವಜ ಹಿಡಿದು ವೀರಮರಣವನ್ನಪ್ಪಿದ ಯೋಧನಿಗೆ ಗೌರವ ಸಲ್ಲಿಸಿದ್ರು. ವಾಹನ ಹಿಂದೆ ಓಡಿ ಹೋಗಿ ಜಯಘೋಷ ಮೊಳಗಿಸಿದರು. ಸಾಲಾಗಿ ನಿಂತ ಮಕ್ಕಳು ಅಂತಿಮ ನಮನ ಸಲ್ಲಿಸಿದ್ರು. ಎಲ್ಲೆಲ್ಲೂ ಭಾರತ ಮಾತಾ ಕೀ ಜೈ ಎಂಬ ಜಯಘೋಷ ಮುಗಿಲುಮುಟ್ಟಿತ್ತು.

ಪಾರ್ಥಿವ ಶರೀರವನ್ನು ನಂದನವನ ಬಡಾವಣೆಯಿಂದ ಜಿಗಣಿಯ ಓಟಿಸಿ ಸರ್ಕಲ್, ಬನ್ನೇರುಘಟ್ಟ ಮುಖ್ಯ ರಸ್ತೆ, ಕೋನಪ್ಪನ ಅಗ್ರಹಾರ ವೃತ್ತ, ಕೂಡ್ಲು ಗೇಟ್ ಮಾರ್ಗವಾಗಿ ಸೋಮಸುಂದರ ಪಾಳ್ಯ ಚಿತಾಗಾರಕ್ಕೆ ತರಲಾಯಿತು. ಅಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಪ್ರಾಂಜಲ್ ತಂದೆ ವೆಂಕಟೇಶ್​ ಅಂತಿಮ ವಿಧಿವಿಧಾನ ಪೂರೈಸಿದರು.

ಈ ವೇಳೆ ಸೇನೆಯಿಂದ ಕುಶಾಲ ತೋಪು ಸಿಡಿಸಿದ ಸೇನಾಧಿಕಾರಿಗಳು, ಪ್ರಾಂಜಲ್​ಗೆ ಅಂತಿಮ ನಮನ ಸಲ್ಲಿಸಿದರು. ಬಳಿಕ ಪ್ರಾಂಜಲ್ ಪಾರ್ಥಿವ ಶರೀರದ ಮೇಲಿದ್ದ ತ್ರಿವರ್ಣಧ್ವಜವನ್ನು ಪೋಷಕರಿಗೆ ಹಸ್ತಾಂತರಿಸಿದರು.

ಈ ವೇಳೆ ಎಲ್ಲೆಡೆ ಕ್ಯಾಪ್ಟನ್ ಪ್ರಾಂಜಲ್​ ಅಮರ್ ರಹೇ ಎಂಬ ಘೋಷಣೆ ಮುಗಿಲು ಮುಟ್ಟಿತ್ತು. ಬಳಿಕ ಕ್ಯಾಪ್ಟನ್​ ಪ್ರಾಂಜಲ್​ ಅಂತ್ಯಕ್ರಿಯೆ ನೆರವೇರಿತು.

ಒಟ್ಟಾರೆ ವೀರಯೋಧ ಪ್ರಾಂಜಲ್ ಕೆಚ್ಚೆದೆಯಿಂದ ಹೋರಾಡಿ ಉಗ್ರರ ಗುಂಡಿಗೆ ಎದೆಯೊಡ್ಡಿ ದೇಶಕ್ಕಾಗಿ ಬಲಿದಾನಗೈದಿದ್ದಾರೆ. ಭಾರತಾಂಬೆಯ ಪದತಲ ಸೇರಿದ್ದಾರೆ. ಈ ಮೂಲಕ ಶತಕೋಟಿ ಭಾರತೀಯರ ಹೃದಯಾಳದಲ್ಲಿ ಚಿರಸ್ಥಾಯಿಯಾಗಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *