
ಹಾಸನ: ಕಳೆದ ಒಂದು ದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟ ನಂದಿನಿ ಸಾವಿಗೆ ಆಸ್ಪತ್ರೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕುಟುಂಬಸ್ಥರು ಇಂದು ಪ್ರತಿಭಟನೆ ನಡೆಸಿ ಮನವಿ ಮಾಡಿದರು.
ಮೃತ ನಂದಿನಿ ಕುಟುಂಬಸ್ಥರು ಹಾಗೂ ಸಂಬಂಧಿಕರು ಡಿಸಿ ಕಛೇರಿ ಆವರಣದಲ್ಲಿ ಜಮಾಯಿಸಿ ಮೌನ ಪ್ರತಿಭಟನೆ ನಡೆಸುವ ಮೂಲಕ ಆಸ್ಪತ್ರೆ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಸಂದರ್ಭದಲ್ಲಿ ಮೃತ ನಂದಿನಿ ಸಂಬಂಧಿಕ ಜೈಕುಮಾರ್ ಮಾತನಾಡಿ, ಕಳೆದ ಭಾನುವಾರ ನಗರದ ಆರ್‌ಸಿ ರಸ್ತೆಯಲ್ಲಿರುವ ಮಿಷನ್ ಆಸ್ಪತ್ರೆಗೆ ಗರ್ಭಕೋಶದ ಅನಾರೋಗ್ಯ ಸಮಸ್ಯೆ ಗೆ ಚಿಕಿತ್ಸೆಗೆಂದು ಕರೆದುಕೊಂಡು ಬಂದಾಗ ವೈದ್ಯೆ ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂದು ಸಲಹೆ ನೀಡಿದ್ದಾರೆಅದರಂತೆ ಸೋಮವಾರ ಮೊದಲ ಬಾರಿ ಶಾಸ್ತ್ರ ಚಿಕಿತ್ಸೆ ನಡೆದಿದ್ದು, ಅದಾದ ನಂತರ ಎಲ್ಲ ಸರಿಯಾಗಿದೆ ನಂದಿನಿ ಆರೋಗ್ಯವಾಗಿದ್ದಾರೆ ಎಂದು ಹೇಳಿ ಸಾಮಾನ್ಯ ವಾರ್ಡ್‌ಗೆ ಶಿಫ್ಟ್ ಮಾಡಿದ್ದಾರೆ.
ನಂತರ ಮರುದಿನವೇ ಮತ್ತೆ ಹೊಟ್ಟೆ ನೋವು ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಾಗ ಮತ್ತೆ ತಪಾಸಣೆ ನಡೆಸಿದ ವೈದ್ಯರು ಇನ್ನೊಮ್ಮೆ ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ಹೇಳಿದ್ದಾರೆ.
ಅದಾದ ನಂತರ ಬುಧವಾರ ರಾತ್ರಿ ಮತ್ತೆ ಎರಡನೇ ಬಾರಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದು, ವೈದ್ಯರ ನಿರ್ಲಕ್ಷ್ಯ ಹಾಗೂ ಸರಿಯಾದ ರೀತಿಯಲ್ಲಿ ಶಸ್ತ್ರ ಚಿಕಿತ್ಸೆ ಮಾಡದ ಹಿನ್ನೆಲೆಯಲ್ಲಿ ನಂದಿನಿ ಮೃತಪಟ್ಟಿದ್ದಾರೆ ಎಂದು ದೂರಿದರು.
ಜಿಲ್ಲಾಡಳಿತ ಕೂಡಲೇ ಆಸ್ಪತ್ರೆ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು, ಮೃತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.


