ವಿಶ್ವ ಏಡ್ಸ್ ದಿನಾಚರಣೆಜಾಗೃತಿ ಜಾಥಕ್ಕೆ ಬಿ.ಸಿ. ರವಿಕುಮಾರ್ ಚಾಲನೆ

ಹಾಸನ: ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ನಗರದ ಮೆಡಿಕಲ್ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಹಾಸನ ಲಯನ್ಸ್ ಕ್ಲಬ್, ಜಿಲ್ಲಾ ಆರೋಗ್ಯ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಜಾಥಕ್ಕೆ ಮೆಡಿಕಲ್ ಕಾಲೇಜು ನಿರ್ದೇಶಕರಾದ ಬಿ.ಸಿ. ರವಿಕುಮಾರ್ ಹಸಿರು ಭಾವುಟ ಪ್ರದರ್ಶಿಸುವುದರ ಮೂಲಕ ಚಾಲನೆ ನೀಡಿದರು.
ನಂತರ ಬಿ.ಸಿ. ರವಿಕುಮಾರ್ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಹೆಚ್. ಅನೀಲ್ ಮಾಧ್ಯಮದೊಂದಿಗೆ ಮಾತನಾಡಿ, ಪ್ರತಿ ವರ್ಷ ಡಿಸೆಂಬರ್ ೧ ರಂದು ವಿಶ್ವ ಏಡ್ಸ್ ದಿನವನ್ನಾಗಿ ಆಚರಿಸಲಾಗುತ್ತಿದೆ. ಸೋಂಕಿನ ಹರಡುವಿಕೆಯಿಂದ ಉಂಟಾಗುವ ಏಡ್ಸ್ ಸಾಂಕ್ರಾಮಿಕದ ಬಗ್ಗೆ ಜಾಗೃತಿ ಮೂಡಿಸಲು ಜಾಥ ನಡೆಸಲಾಗುವುದು.
ಎಚ್‌ಐವಿ ವೈರಸ್ ರೋಗಿಯ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತದೆ ಮತ್ತು ಇತರ ರೋಗಗಳಿಗೆ ಅದರ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ. ಅತ್ಯಂತ ವಿನಾಶಕಾರಿ ಸಾಂಕ್ರಾಮಿಕ ರೋಗಗಳಲ್ಲಿ ಒಂದಾಗಿದೆ ಎಂದರು.
ಈ ಸೋಂಕಿಗೊಳಗಾದವರು ನಡೆಸುವ ಹೋರಾಟದ ಯಶಸ್ಸಿಗೆ ಧೈರ್ಯ ತುಂಬಲು ಸಂಕಲ್ಪವನ್ನು ಮಾಡುವಂತಹ ಮಹತ್ವದ ದಿನ ವಿಶ್ವ ಏಡ್ಸ್ ದಿನವಾಗಿದೆ. ಏಡ್ಸ್ ಸೋಂಕನ್ನು ಮೊಟ್ಟ ಮೊದಲ ಬಾರಿಗೆ ೧೯೮೧ರಲ್ಲಿ ಅಮೆರಿಕದಲ್ಲಿ ಗುರುತಿಸಲಾಯಿತು. ಭಾರತದಲ್ಲಿ ೧೯೮೬ರಲ್ಲಿ ಚೆನ್ನೈನಲ್ಲಿ ಪತ್ತೆ ಮಾಡಲಾಯಿತು.
ಏಡ್ಸ್‌ಗೆ ಕಾರಣವಾದ ವೈರಸ್ ಹೆಚ್‌ಐವಿ ಇದನ್ನು ಮೊಟ್ಟಮೊದಲ ಬಾರಿಗೆ ೧೯೮೩ರಲ್ಲಿ ಫ್ರೆಂಚ್ ವಿಜ್ಞಾನಿಗಳು ಪತ್ತೆ ಹಚ್ಚಿದರು. ಇಲ್ಲಿಯವರೆಗೂ ಸುಮಾರು ೩೫ ಮಿಲಿಯನ್‌ಗಿಂತಲೂ ಹೆಚ್ಚು ಜನರು ಹೆಚ್‌ಐವಿ ಅಥವಾ ಏಡ್ಸ್ ಸಂಬಂಧಿತ ಕಾಯಿಲೆಗಳಿಂದ ಸಾವನ್ನಪ್ಪಿದ್ದಾರೆ. ಹೆಚ್.ಐ.ವಿ. ಸೋಂಕು ಯಾವ ರೀತಿ ಹರಡುತ್ತದೆ. ಮುನ್ನೇಚ್ಚರಿಕ ಕ್ರಮವನ್ನು ಯಾವ ರೀತಿ ಮಾಡಬೇಕು ಎಂದು ಅರಿವು ಮೂಡಿಸಲು ಈ ಜಾಗೃತಿ ಜಾಥ ಹಮ್ಮಿಕೊಂಡಿರುವುದಾಗಿ ಹೇಳಿದರು.
ಮೆರವಣಿಗೆಯಲ್ಲಿ ಜಿಲ್ಲಾ ಏಡ್ಸ್ ಮತ್ತು ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಬಿ. ಸಂಧ್ಯಾ, ಜಿಲ್ಲಾ ಸರಕಾರಿ ಆಸ್ಪತ್ರೆಯ ಕೃಷ್ಣಮೂರ್ತಿ, ಜಿಲ್ಲಾ ಆರ್.ಸಿ.ಹೆಚ್. ಡಾ. ಹೆಚ್.ಸಿ. ಚೇತನ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಎಂ.ಕೆ. ಹರೀಶ್, ಹಾಸನ ಲಯನ್ಸ್ ಕ್ಲಬ್ ಅಧ್ಯಕ್ಷ ಹೆಚ್.ಕೆ. ನಾಗೇಶ್, ಖಜಾಂಚಿ ಬಿ.ಎಂ. ರವಿಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಿವಶಂಕರ್, ಡಾ. ನಾಗಪ್ಪ, ಡಾ. ಕೆ.ಎಸ್. ಮಧು, ಡಾ. ವಿಜಯ ಗೊರೂರು, ಶಾಂತಮ್ಮ, ವರಲಕ್ಷ್ಮಿ ಇತರರು ಉಪಸ್ಥಿತರಿದ್ದರು.




