ಚಿಚಾಂಗ್ ಚಂಡಮಾರುತದ ಪರಿಣಾಮದಿಂದ ಚೆನ್ನೈನಲ್ಲಿ ಭಾರಿ ಮಳೆಯಾಗುತ್ತಿದ್ದು ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಚೆನ್ನೈ ವಿಮಾನ ನಿಲ್ದಾಣದ ರನ್‌ವೇನಲ್ಲಿ ಭಾರಿ ಪ್ರಮಾಣದ ನೀರು ನಿಂತ ಕಾರಣ ಡಿಸೆಂಬರ್ 4 ರಂದು ಬೆಳಿಗ್ಗೆ ಎರಡು ಗಂಟೆಗಳ ಕಾಲ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

ಇದರಿಂದ ವಿಮಾನ ಪ್ರಯಾಣ ವೇಳಾಪಟ್ಟಿ ಮೇಲೆ ಪರಿಣಾಮ ಬೀರಿದ್ದು, ಜೋರು ಗಾಳಿಯ ಪರಿಣಾಮ ಸರಿಸುಮಾರು 10 ಚೆನ್ನೈಗೆ ಹೋಗುವ ವಿಮಾನಗಳನ್ನು ಬೆಂಗಳೂರಿಗೆ ತಿರುಗಿಸಲಾಯಿತು.

ಚೆನ್ನೈನಲ್ಲಿ ಇಳಿಯಬೇಕಿದ್ದ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳನ್ನು ಕೆಐಎಗೆ ತಿರುಗಿಸಲಾಗಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್) ಅಧಿಕಾರಿಗಳು ತಿಳಿಸಿದ್ದಾರೆ.

ಇಂಡಿಗೋ, ಸ್ಪೈಸ್‌ಜೆಟ್, ಇತಿಹಾದ್, ಗಲ್ಫ್ ಏರ್, ಫ್ಲೈ ದುಬೈ, ಏರ್ ಇಂಡಿಯಾ, ಲುಫ್ತಾನ್ಸಾ ಮತ್ತು ಬ್ರಿಟಿಷ್ ಏರ್‌ವೇಸ್‌ಗೆ ಸೇರಿದ ವಿಮಾನಗಳನ್ನು ಚೆನ್ನೈನಿಂದ ಬೆಂಗಳೂರಿಗೆ ತಿರುಗಿಸಲಾಗಿದೆ. ಇಲ್ಲಿಯವರೆಗೆ 10 ವಿಮಾನಗಳು ಕೆಐಎಗೆ ಬಂದಿಳಿದಿವೆ ಮತ್ತು ಇನ್ನೊಂದು ಮಾರ್ಗದಲ್ಲಿದೆ ಎಂದು ಬಿಐಎಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಕೆಲವು ಗಂಟೆಗಳಲ್ಲಿ ಹೆಚ್ಚಿನ ವಿಮಾನಗಳನ್ನು ಕೆಐಎಗೆ ತಿರುಗಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಭಾರಿ ಮಳೆಗೆ ನಲುಗಿದ ಚೆನ್ನೈ!ಚಂಡಮಾರುತದ ಪ್ರಭಾವದಿಂದ ತಮಿಳುನಾಡು ಮತ್ತು ಪುದುಚೇರಿಯ ವಿವಿಧ ಭಾಗಗಳಲ್ಲಿ ಡಿಸೆಂಬರ್ 4 ರಂದು ಭಾರೀ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.

ಚಂಡಮಾರುತವು ಹಗಲಿನಲ್ಲಿ ಬಲಗೊಂಡು ಉತ್ತರ ತಮಿಳುನಾಡು ಕರಾವಳಿಯನ್ನು ತಲುಪಲಿದೆ ಮತ್ತು ಡಿಸೆಂಬರ್ 5 ರಂದು ದಕ್ಷಿಣ ಆಂಧ್ರಪ್ರದೇಶದಲ್ಲಿ ಭೂಕುಸಿತವನ್ನು ಉಂಟುಮಾಡುತ್ತದೆ. ಚೆನ್ನೈ ಮತ್ತು ಹತ್ತಿರದ ಜಿಲ್ಲೆಗಳು ಸೇರಿದಂತೆ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು ತಗ್ಗು ಪ್ರದೇಶಗಳಲ್ಲಿ ಪ್ರವಾಹಕ್ಕೆ ಕಾರಣವಾಗಿದೆ.

ಗಂಟೆಗೆ 35 ರಿಂದ 80 ಕಿ.ಮೀ ವೇಗದಲ್ಲಿ ಗಾಳಿ ಬೀಸುವುದರಿಂದ ಜನರು ಮನೆಯೊಳಗೆ ಇರುವಂತೆ ಗ್ರೇಟರ್ ಚೆನ್ನೈ ಕಾರ್ಪೊರೇಷನ್ (ಜಿಸಿಸಿ) ಸಾರ್ವಜನಿಕರಿಗೆ ಮನವಿ ಮಾಡಿದೆ.ನದಿಯಂತಾದ ರಸ್ತೆಗಳು, ಕೊಚ್ಚಿ ಹೋದ ಕಾರುಗಳುಇನ್ನು ಚೆನ್ನೈ ಮಳೆಯ ಹೊಡೆತವನ್ನು ತೋರಿಸುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ಹಲವು ರಸ್ತೆಗಳಲ್ಲಿ 2 ಅಡಿಗಿಂತ ಹೆಚ್ಚು ನೀರು ನಿಂತಿದ್ದು ನದಿಯಂತಾಗಿವೆ. ಇನ್ನು ಹಲವು ಮನೆಗಳಿಗೆ ನೀರು ನುಗ್ಗಿದ್ದು ಜನ ಪರದಾಡುವಂತಾಗಿದೆ.

ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಪ್ರವಾಹದಂತ ಸನ್ನಿವೇಶಕ್ಕೆ ಕಾರಣವಾಗಿದೆ. ಹಲವು ರಸ್ತೆಗಳಲ್ಲಿ ನೀರು ರಭಸವಾಗಿ ಹರಿಯುತ್ತಿದ್ದು, ಕಾರುಗಳು ಕೂಡ ಕೊಚ್ಚಿ ಹೋಗುವ ದೃಶ್ಯಗಳು ವೈರಲ್ ಆಗಿವೆ.ರಾಜ್ಯ ಸರ್ಕಾರವು ಚೆನ್ನೈ, ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್ಪಟ್ಟು ನಾಲ್ಕು ಜಿಲ್ಲೆಗಳಿಗೆ ಸಾರ್ವಜನಿಕ ರಜೆ ಘೋಷಿಸಿದೆ.

ಶಾಲಾ ಕಾಲೇಜುಗಳು ಕೂಡ ಬಂದ್ ಆಗಿವೆ. ಹಾಲು ಸರಬರಾಜು, ನೀರು ಸರಬರಾಜು, ಆಸ್ಪತ್ರೆಗಳು, ವಿದ್ಯುತ್, ಹೋಟೆಲ್‌ಗಳು ಮತ್ತು ವಿಪತ್ತು ಪ್ರತಿಕ್ರಿಯೆ, ಪರಿಹಾರ ಮತ್ತು ರಕ್ಷಣಾ ಚಟುವಟಿಕೆಗಳಲ್ಲಿ ತೊಡಗಿರುವ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ. ನಿರಂತರ ಮಳೆ ಮತ್ತು ಬಿರುಸಿನ ಗಾಳಿಯಿಂದಾಗಿ ಮದ್ರಾಸ್ ಹೈಕೋರ್ಟ್ ಡಿಸೆಂಬರ್ 4 ರಂದು ಚೆನ್ನೈನ ಎಲ್ಲಾ ನ್ಯಾಯಾಲಯಗಳಿಗೆ ರಜೆ ಘೋಷಿಸಿ ಪರಿಷ್ಕೃತ ಸುತ್ತೋಲೆ ಹೊರಡಿಸಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *