ಹಾಸನ : ರಾಜ್ಯ ಸರಕಾರವು ಶಕ್ತಿ ಯೋಜನೆ ಜಾರಿಗೆ ತಂದಿರುವುದನ್ನು ಸ್ವಾಗತಿಸುತ್ತೇವೆ. ಆದರೇ ಅದರ ಪ್ರಯೋಜನವನ್ನು ಮಹಿಳೆಯರು ಪಡೆಯಲು ಹೆಚ್ಚಿನ ಬಸ್ ಸಂಚಾರ ಒದಗಿಸಲು ಆಗ್ರಹಿಸಿ ಡಿಸಿ ಕಛೇರಿ ಆವರಣದಲ್ಲಿ ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯನ್ ವುಮೇನ್ ಜಿಲ್ಲಾ ಘಟಕದಿಂದ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯನ್ ವುಮೇನ್ ಸಂಚಾಲಕಿ ಎಸ್.ಎನ್. ಜಯಲಕ್ಷ್ಮಿ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದೊಡನೆಯೇ ಶಕ್ತಿ ಯೋಜನೆಯನ್ನು ಜಾರಿಗೆ ತಂದಿರುತ್ತೀರಿ. ಇದನ್ನು ಎನ್‌ಎಎಫ್ ಐಡಬ್ಲ್ಯೂ ಸ್ವಾಗತಿಸಿ ಜಿಲ್ಲಾ ಮಂಡಳಿ ಅಭಿನಂದನೆಗಳನ್ನು ಸಲ್ಲಿಸುತ್ತದೆ.

ಇತ್ತೀಚೆಗೆ ರಾಜ್ಯದ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಜನದಟ್ಟಣೆ ಹೆಚ್ಚಾಗಿದ್ದು, ಬಸ್‌ಗಳಲ್ಲಿ ಹೆಜ್ಜೆಯಿಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಲಿ ಇರುವ ಪ್ರಯಾಣಿಕರ ಪ್ರಯಾಣಕ್ಕೆ ಬಸ್‌ಗಳ ಸಂಖ್ಯೆಯು ಸಾಕಾಗುತ್ತಿಲ್ಲ ಎಂಬುದಾಗಿ ತೋರುತ್ತಿದೆ ಎಂದರು.

ಶಾಲಾ-ಕಾಲೇಜು ಮತ್ತು ಕಚೇರಿ ಸಮಯದಲ್ಲಿ ಬಸ್‌ಗಳು ತುಂಬಿ ತುಳುಕುತ್ತಿದ್ದು, ಎಷ್ಟೋ ವಿದ್ಯಾರ್ಥಿಗಳಿಗೆ ಬಸ್ ಏರಲೂ ಸಹ ಆಗದೆ ತರಗತಿಗಳು ತಪ್ಪಿ ಹೋಗುತ್ತಿವೆ. ವೃದ್ಧರು, ಮಹಿಳೆಯರು ಮತ್ತು ಮಕ್ಕಳಿಗೆ ಬಹಳ ಆನಾನುಕೂಲವಾಗಿದೆ. ದೂರದ ಪ್ರಯಾಣವಂತೂ ಬಲು ದುಸ್ತರವಾಗಿದೆ.

ಶಕ್ತಿ ಯೋಜನೆಯ ಪ್ರಯೋಜನವನ್ನು ಪಡೆಯಲು ಮಹಿಳೆಯರಿಗೆ ಕಷ್ಟವಾಗುತ್ತಿದೆ. ಈ ಕೂಡಲೇ ಸಾರಿಗೆ ನಿಗಮಗಳು ಪ್ರಯಾಣಿಕರಿಗೆ ಹೆಚ್ಚಿನ ಬಸ್‌ಗಳನ್ನು ಒದಗಿಸಿ ಮತ್ತು ಆ ಬಸ್‌ಗಳನ್ನು ಚಲಾಯಿಸಲು ಹೆಚ್ಚುವರಿ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಬೇಕೆಂದು ಮನವಿ ಮಾಡಲಾಯಿತು.

ಪ್ರತಿಭಟನೆಯಲ್ಲಿ ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯನ್ ವುಮೇನ್ ಜಿಲ್ಲಾ ಘಟಕದ ಸಂಚಾಲಕಿ ಮಂಜೂಳಾ, ರೂಪ, ಅನೀತಾ, ಚೈತ್ರಾ, ಪ್ರೇಮ ಸೇರಿದಂತೆ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *