
ಪ್ರಿಯಕರನ ಜತೆ ಸೇರಿ ಪತ್ನಿಯೇ ಪತಿಯನ್ನು ಕೊಲೆ ಮಾಡಿರುವ ಶಾಕಿಂಗ್ ಸಂಗತಿ ಬೆಳಕಿಗೆ ಬಂದಿದೆ.ಚಿಕ್ಕಬಾಣವಾರದ ಗುಡ್ಡೆಬಸವಪುರ ನಿವಾಸಿ ಅಭಿನಂದನ್ (35) ಮತ್ತು ಅವರ ಪುತ್ರ ಯದುವೀರ್ (5) ಮೃತರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವ್ಯಕ್ತಿಯ ಪತ್ನಿ ಹರಿಣಿ ಹಾಗೂ ಆಕೆಯ ಪ್ರಿಯಕರ ವಿನಯ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ ಪತಿ ಅಭಿನಂದನ್ (38) ಹಾಗೂ ಐದು ವರ್ಷದ ಮಗ ಮನೆಯಲ್ಲಿ ‘ಬಿಗ್ ಬಾಸ್’ ಶೋ ವೀಕ್ಷಿಸುತ್ತಿದ್ದಾಗ, ಪತ್ನಿ ಹರಿಣಿ ವರಾಂಡದಲ್ಲಿ ವಾಕಿಂಗ್ ಮಾಡುವ ನೆಪದಲ್ಲಿ ಅವರಿಬ್ಬರ ಕೊಲೆಗೆ ಯೋಜನೆ ರೂಪಿಸಿದ್ದಳು ಎಂದು ವಿಚಾರಣೆಯಲ್ಲಿ ಗೊತ್ತಾಗಿದೆ.ಪೊಲೀಸರ ಪ್ರಕಾರ, ಹರಿಣಿ ಮತ್ತು ಆಕೆಯ ಪ್ರಿಯಕರ ವಿನಯ್ ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆ ಎಂಬ ಕಾರಣಕ್ಕೆ ಅಭಿನಂದನ್‌ನನ್ನು ಮುಗಿಸಲು ಸಂಚು ಹೂಡಿದ್ದರು. ಹರಿಣಿ ಪತಿಯಿಂದ ವಿಚ್ಛೇದನ ಪಡೆದು ವಿನಯ್ ಜೊತೆ ವಾಸಿಸಲು ಒತ್ತಾಯಿಸುತ್ತಿದ್ದಳು ಎನ್ನಲಾಗಿದೆ.
ವರದಿಗಳ ಪ್ರಕಾರ, 2021ರಲ್ಲಿ ಅಭಿನಂದನ್ – ಹರಿಣಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದಂಂಪತಿಗಳ ನಡುವೆ ಕಳೆದ ಕೆಲವು ವರ್ಷಗಳಿಂದ ಮನಸ್ತಾಪವಿತ್ತು. ಹೀಗಾಗಿ ಕಳೆದ ಎರಡು ವರ್ಷಗಳಿಂದ ಇಬ್ಬರೂ ಪ್ರತ್ಯೇಕ ಕೊಠಡಿಗಳಲ್ಲಿ ಮಲಗುತ್ತಿದ್ದರು. ಡಿಸೆಂಬರ್ 2024 ರಲ್ಲಿ ಹರಿಣಿಗೆ ಸ್ನ್ಯಾಪ್‌ಚಾಟ್ (Snapchat) ಮೂಲಕ ವಿನಯ್ ಪರಿಚಯವಾಗಿ, ನಂತರ ಅದು ಅಕ್ರಮ ಸಂಬಂಧಕ್ಕೆ ತಿರುಗಿತ್ತು ಎಂದು ವರದಿ ತಿಳಿಸಿದೆ.
ಪತ್ನಿ ಬೇರೊಬ್ಬ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದಾಳೆ ಎಂಬ ಅನುಮಾನ ಅಭಿನಂದನ್‌ಗೆ ಬಂದಿತ್ತು. ಕೊಲೆ ನಡೆಯುವ 15 ದಿನಗಳ ಮೊದಲು ಆಕೆಯ ಕಾಲ್ ಡಿಟೇಲ್ಸ್ (CDR) ಪಡೆಯಲು ಅಭಿನಂದನ್ ಪೊಲೀಸರನ್ನು ಸಂಪರ್ಕಿಸಿದ್ದರು.
ಈ ವಿಚಾರವಾಗಿ ದಂಪತಿ ನಡುವೆ ಪದೇ ಪದೇ ಜಗಳಗಳು ನಡೆಯುತ್ತಿದ್ದವು ಎನ್ನಲಾಗಿದೆ.ಎರಡು ದಿನಗಳ ಮುನ್ನವೇ ನಡೆದಿತ್ತು ಸಂಚು ಅಭಿನಂದನ್ ತನ್ನ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆ ಎನ್ನುವ ಕಾರಣಕ್ಕೆ ಆತನನ್ನು ಮುಗಿಸುವ ಯೋಜನೆಯನ್ನು ಹರಿಣಿ ಪ್ರಿಯಕರನ ಜತೆ ಸೇರಿಕೊಂಡು ರೂಪಿಸಿದ್ದಳು. ಆಗಸ್ಟ್ 14 ರಂದು (ಕೊಲೆ ನಡೆಯುವ 2 ದಿನಗಳ ಮುನ್ನ) ದಂಪತಿಗಳ ನಡುವೆ ಜಗಳವಾಗಿತ್ತು. ಪತ್ನಿ ಮೇಲೆ ಅಭಿನಂದನ್ ಹಲ್ಲೆ ನಡೆಸಿದ್ದರು ಎನ್ನಲಾಗಿದೆ.
ಇದಾದ ಬಳಿಕ ಮರುದಿನ ಪತ್ನಿಯನ್ನು ಆಕೆಯ ಪೋಷಕರ ಮನೆಗೆ ಬಿಟ್ಟು, ತಮ್ಮ ತಾಯಿಯನ್ನು ಭೇಟಿಯಾಗಲು ತೆರಳಿದ್ದರು. ಭಾನುವಾರ ಸಂಜೆ ಮತ್ತೆ ಪತ್ನಿಯನ್ನು ಕರೆದುಕೊಂಡು ಮನೆಗೆ ಮರಳಿದ್ದರು. ಆದರೆ, ಅಷ್ಟರಲ್ಲಾಗಲೇ ಹರಿಣಿ ಪ್ರಿಯಕರ ವಿನಯ್ ಸಹಾಯದಿಂದ ಪತಿಯನ್ನು ಮುಗಿಸಲು ನಿರ್ಧರಿಸಿದ್ದಳು.ಈ ಬಗ್ಗೆ ಮಾಹಿತಿ ನೀಡಿದ ಈಶಾನ್ಯ/ಉತ್ತರ ಪಶ್ಚಿಮ ವಿಭಾಗದ ಡಿಸಿಪಿ ನಾಗೇಶ್, “ಶುಕ್ರವಾರದ ಗಲಾಟೆಯ ನಂತರ ಹರಿಣಿ ವಿನಯ್ ಜೊತೆ ಮಾತನಾಡಿ ಕೊಲೆಗೆ ಅಂತಿಮ ಪ್ಲಾನ್ ರೂಪಿಸಿದ್ದರು. ಕೃತ್ಯ ಎಸಗುವಾಗ ಕೈಗುರುತು ಬೀಳದಿರಲು ಹರಿಣಿ ಮುಂಚಿತವಾಗಿಯೇ ಎರಡು ಜೋಡಿ ಹ್ಯಾಂಡ್ ಗ್ಲೌಸ್‌ಗಳನ್ನು ಖರೀದಿಸಿದ್ದಳು” ಎಂದು ತಿಳಿಸಿದ್ದಾರೆ.
ಕೊಲೆ ನಡೆದ ಭಾನುವಾರವೇ (ಆ.16) ಮನೆಯಲ್ಲಿದ್ದ ಸಿಟಿವಿ (CCTV) ಕ್ಯಾಮೆರಾಗಳನ್ನು ಆಫ್ ಮಾಡಲಾಗಿತ್ತು. ರಾತ್ರಿ 11 ಗಂಟೆಗೆ ಪ್ರಿಯಕರ ವಿನಯ್ ಮನೆಗೆ ಬಂದಾಗ, ಹರಿಣಿ ಆತನನ್ನು ಗ್ಯಾರೇಜ್ ಪಕ್ಕದ ಗ್ಯಾಲರಿಯಲ್ಲಿ ಇರಲು ಹೇಳಿದ್ದಳು. ಅಭಿನಂದನ್ ಮತ್ತು ಮಗು ಮಲಗಿದ ಬಳಿಕ ಹರಿಣಿ, ಪ್ರಿಯಕರ ವಿನಯ್ ಇಬ್ಬರೂ ಹ್ಯಾಂಡ್ ಗ್ಲೌಸ್ ಧರಿಸಿ ಅಭಿನಂದನ್ ಇದ್ದ ಕೊಠಡಿಗೆ ತೆರಳಿದ್ದಾರೆ.
ಹಲ್ಲೆ ನಡೆಸಿ ಕುತ್ತಿಗೆ ಹಿಸುಕಿ, ಉಸಿರುಗಟ್ಟಿಸಿ ಸಾಯಿಸಿದ್ದಾರೆ ಈ ವೇಳೆ ಉಂಟಾದ ಸದ್ದಿಗೆ ಪಕ್ಕದಲ್ಲೇ ಮಲಗಿದ್ದ 5 ವರ್ಷದ ಮಗು ಎಚ್ಚರಗೊಂಡಿದೆ. ಹೀಗಾಗಿ ಮುಂದೆ ಸಮಸ್ಯೆ ಆಗಬಾರದೆನ್ನುವ ನಿಟ್ಟಿನಲ್ಲಿ ತನ್ನ ಮಗುವನ್ನೇ ಹರಿಣಿ ಉಸಿರುಗಟ್ಸಿಸಿ ಸಾಯಿಸಿದ್ದಾಳೆ.ಸೋಮವಾರ (ಆ.17) ಬೆಳಗ್ಗೆ ಹರಿಣಿಯೇ ಸ್ವತಃ ಪೊಲೀಸರಿಗೆ ಕರೆ ಮಾಡಿ, ತನ್ನ ಪತಿ ಮತ್ತು ಮಗು ಸ್ಪಂದಿಸುತ್ತಿಲ್ಲ ಎಂದು ನಾಟಕವಾಡಿದ್ದಳು.
ಸ್ಥಳಕ್ಕೆ ಆಗಮಿಸಿದ ಪೊಲೀಸ್ ತಂಡ ಪರಿಶೀಲಿಸಿದಾಗ ಇಬ್ಬರೂ ಶವವಾಗಿ ಪತ್ತೆಯಾಗಿದ್ದರು.ಪೊಲೀಸರು ತನ್ನದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ.
