
ಅರೇಹಳ್ಳಿ : ಹುಟ್ಟು ಹಬ್ಬದ ಸಂಭ್ರಮಾಚರಣೆಗೆ ಹಣವನ್ನು ದುಂದುವೆಚ್ಚ ಮಾಡದೆ ಸಮಾಜದ ಅಭಿವೃದ್ಧಿಗಾಗಿ ಹಣವನ್ನು ಬಳಸಿಕೊಳ್ಳಬೇಕು ಎಂದು ಬೇಲೂರಿನ ಶ್ರೀ ಲಕ್ಷ್ಮಿ ಮಂಗಳವಾದ್ಯ ಮತ್ತು ಕಲಾ ಸೇವಾ ಟ್ರಸ್ಟ್ ಅಧ್ಯಕ್ಷ ನರಸಿಂಹಸ್ವಾಮಿ ಹೇಳಿದರು.
ಬೇಲೂರು ತಾಲೂಕಿನ ಅರೇಹಳ್ಳಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀ ಲಕ್ಷ್ಮಿ ಮಂಗಳವಾದ್ಯ ಮತ್ತು ಕಲಾ ಸೇವಾ ಟ್ರಸ್ಟ್ ಬೇಲೂರು ಇವರ ವತಿಯಿಂದ ದಿವಂಗತ ಬಿ.ಸಿ ಮಂಜುನಾಥ್ರವರ ಜನ್ಮದಿನದ ಸ್ಮರಣಾರ್ಥ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಸಮಾಜದ ಒಳಿತಿಗಾಗಿ ಸಂಪಾದನೆಯ ಒಂದಷ್ಟು ಅಂಶವನ್ನು ಕೊಡುಗೆಯಾಗಿ ನೀಡಬೇಕಾದದ್ದು ನಮ್ಮ ಕರ್ತವ್ಯ. ಹುಟ್ಟುಹಬ್ಬದ ಆಚರಣೆಯು ಸದಾ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಬೇಕಾದರೆ ಸಮಾಜಕ್ಕೆ ಕೈಲಾದಷ್ಟು ಕೊಡುಗೆಯನ್ನು ನೀಡಬೇಕು.
ಮುಂದಿನ ದಿನಗಳಲ್ಲಿ ದಿವಂಗತ ಬಿ.ಸಿ ಮಂಜುನಾಥ್ರವರ ಹೆಸರಿನಲ್ಲಿ ಇನ್ನಷ್ಟು ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗೆ ಆಯೋಜಿಸುವ ಯೋಜನೆಯಿದೆ. ಚಿತ್ರಕಲಾ ಸ್ಪರ್ಧೆಯು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ. ಪ್ರಥಮ 1000,ದ್ವಿತೀಯ 750 ಹಾಗೂ ತೃತೀಯ 500 ರೂ. ಬಹುಮಾನವನ್ನು ನೀಡಲಾಗುತ್ತಿದ್ದು ಭಾಗವಹಿಸಿದ ಎಲ್ಲರಿಗೂ ಅಭಿನಂದನಾ ಪತ್ರವನ್ನು ನೀಡಲಾಗುವುದು ಎಂದರು.
ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಖಂಡ ಬಿ.ಎಂ ಸಂತೋಷ್ ಮಾತನಾಡಿ, ನಮ್ಮ ತಂದೆ ಮೃತಪಟ್ಟು 2 ವರ್ಷಗಳು ಕಳೆದಿದೆ. ಅವರ ಸ್ಮರಣಾರ್ಥ ಕಳೆದ ವರ್ಷ ಹಳೇಬೀಡು ಶಾಲೆಯಲ್ಲಿ ಇದೇ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಸುಮಾರು 120 ವಿದ್ಯಾರ್ಥಿಗಳು ಭಾಗವಹಿಸುವುದರ ಮೂಲಕ ಕಾರ್ಯಕ್ರಮ ಯಶಸ್ವಿಗೊಂಡಿತ್ತು. ಮಕ್ಕಳ ಬಗೆ ಅತಿಯಾದ ಪ್ರೀತಿ ಹೊಂದಿದ್ದ ನಮ್ಮ ತಂದೆಯವರು ಆಸೆ ಪಟ್ಟಂತೆ ನಿಮ್ಮಲ್ಲಿರುವ ಕೌಶಲ್ಯವನ್ನು ಚಿತ್ರಕಲೆಯ ಮೂಲಕ ಹೊರಹಾಕುವುದರ ಜೊತೆಗೆ ಓದಿನಲ್ಲಿಯೂ ಸಹ ಯಶಸ್ಸು ಗಳಿಸಿ ಎಂದರು.
ಈ ವೇಳೆ ಟ್ರಸ್ಟ್ ನಿರ್ದೇಶಕ ಎಸ್.ಆರ್ ಮೋಹನ್, ಶಿಕ್ಷಕಿ ಶಬಾನಾ ಬಾನು, ಭರತ್ ಹಾಗೂ ಇನ್ನಿತರರು ಇದ್ದರು.
