
ದೊಡ್ಡಯರಗನಾಳು ಗ್ರಾಮದಲ್ಲಿ ‘ಬೆಳೆ ವಿಮಾ ಯೋಜನೆಗಳ ಅರಿವು’ ಕಾರ್ಯಕ್ರಮ.
ಹಾಸನ: ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಅಡಿಯಲ್ಲಿ ಬರುವ ಕೃಷಿ ಮಹಾವಿದ್ಯಾಲಯ, ಕಾರೇಕೆರೆ, ಹಾಸನದ ವತಿಯಿಂದ ಆಯೋಜಿಸಲಾದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24ರ ಅಂಗವಾಗಿ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳಿಂದ ದೊಡ್ದಯರಗನಾಳು ಗ್ರಾಮದಲ್ಲಿ ‘ಬೆಳೆ ವಿಮಾ ಯೋಜನೆಗಳ ಅರಿವು’ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಕೃಷಿ ಅರ್ಥಶಾಸ್ತ್ರ ತಜ್ಞರಾದ ಡಾ. ಗಗನಾ ಎಮ್ ಡಿ ರವರು ಆಗಮಿಸಿದ್ದರು.ಕಾರ್ಯಕ್ರಮದಲ್ಲಿ ಬೆಳೆ ವಿಮಾ ಯೋಜನೆಗಳಾದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಹಾಗೂ ತೆಂಗಿನಕಾಯಿ ತಾಳೆ ವಿಮಾ ಯೋಜನೆಯ ಬಗ್ಗೆ ವಿದ್ಯಾರ್ಥಿಯಾದ ಮಲ್ಲಿಕಾರ್ಜುನ್ ರವರು ತಿಳಿಸಿದರು.
ವಿವಿಧ ಅಪಾಯಗಳಿಂದ ಆಗುವ ಬೆಳೆ ನಷ್ಟ ಹಾಗೂ ಬೆಳೆ ನಾಶದಿಂದ ಬಳಲುವ ರೈತರ ಆರ್ಥಿಕ ಸಂಕಷ್ಟಗಳನ್ನು ಕಡಿಮೆಗೊಳಿಸುವ ಉದ್ದೇಶದಿಂದ ಈ ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು. ಯೋಜನೆಯಡಿಯಲ್ಲಿ ಒಳಗೊಳ್ಳುವ ಅಪಾಯಗಳು ಹಾಗೂ ಯೋಜನೆಯ ಅರ್ಹತೆಗಳ ಬಗ್ಗೆ ತಿಳಿಸಲಾಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಡಾ. ಗಗನ ಎಮ್ ಡಿ ರವರು ಯೋಜನೆಯಲ್ಲಿ ರೈತರು ಪಾವತಿಸಬೇಕಾದ ಪ್ರೀಮಿಯಮ್ ದರಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಅನೇಕ ಸಂಖ್ಯೆಯಲ್ಲಿ ಗ್ರಾಮದ ರೈತರು ಹಾಜರಿದ್ದು ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
