ಸಕಲೇಶಪುರ : ತಾಲ್ಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ, ಸಡಗರ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ವಿ.ಪಿ. ವಿಶ್ವನಾಥ್, ಸ್ವಾತಂತ್ರ್ಯೋತ್ಸವವು ಕೇವಲ ಧ್ವಜಾರೋಹಣ, ಸಿಹಿ ಹಂಚಿಕೆ ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮಕ್ಕೆ ಸೀಮಿತವಾಗದೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಆಶಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದ ದಿನವಾಗಬೇಕು ಎಂದರು.

ರೈತರು ಮತ್ತು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಂಘಟಿತರಾಗಿ, ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು. ಕಾಡಾನೆ ಹಾವಳಿ, ಬೆಳೆಹಾನಿ, ವಿದ್ಯುತ್, ರಸ್ತೆ ಸೇರಿದಂತೆ ಗ್ರಾಮೀಣ ಭಾಗದ ಹಲವು ಸಮಸ್ಯೆಗಳ ಕುರಿತು ಸಂಬಂಧಿಸಿದ ಇಲಾಖೆಗಳ ಗಮನ ಸೆಳೆದು, ರೈತರ ಪರವಾಗಿ ನಿರಂತರವಾಗಿ ಧ್ವನಿ ಎತ್ತುವುದು ಸಂಘದ ಜವಾಬ್ದಾರಿಯಾಗಿದೆ. ಸ್ವಾತಂತ್ರ್ಯ ನಮಗೆ ಹಕ್ಕುಗಳನ್ನು ನೀಡಿರುವುದರ ಜತೆಗೆ ಜವಾಬ್ದಾರಿಯನ್ನೂ ನೀಡಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕಿನಲ್ಲೂ ಅಭಿವೃದ್ಧಿಯ ಬೆಳಕು ಮೂಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ನಿವೃತ್ತ ಮುಖ್ಯೋಪಾಧ್ಯಾಯ ಬಿ. ವೆಂಕಟರಮಣ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ನಮ್ಮ ಪೂರ್ವಜರು ತ್ಯಾಗ, ಹೋರಾಟ ಹಾಗೂ ಬಲಿದಾನ ಮಾಡಿದ್ದಾರೆ. ಅವರ ಹೋರಾಟದ ಫಲವಾಗಿ ಇಂದು ನಾವು ಸ್ವತಂತ್ರವಾಗಿ ಬದುಕುತ್ತಿದ್ದೇವೆ. ಆದರೆ ಗ್ರಾಮೀಣ ಪ್ರದೇಶದ ರೈತರು ಹಾಗೂ ಬೆಳೆಗಾರರು ತಮ್ಮ ಮೂಲಭೂತ ಸಮಸ್ಯೆಗಳಿಗಾಗಿ ಇಂದಿಗೂ ಹೋರಾಡಬೇಕಾದ ಪರಿಸ್ಥಿತಿ ಇದೆ ಎಂದರು.

ಈ ಭಾಗದ ಬೆಳೆಗಾರರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಬೇಕಾದರೆ ನಾವು ಮೌನವಾಗಿ ಕುಳಿತರೆ ಸಾಧ್ಯವಿಲ್ಲ. ‘ಸೈಲೆಂಟಾಗಿ ಇದ್ದೇವೆ; ಇನ್ನು ವೈಲೆಂಟಾಗಿ ಕೆಲಸ ಮಾಡಬೇಕು’ ಎಂಬ ಮನೋಭಾವದಿಂದ ಸಂಘಟಿತವಾಗಿ ಕಾರ್ಯನಿರ್ವಹಿಸಬೇಕು. ನಮ್ಮ ಸಮಸ್ಯೆಗಳನ್ನು ಸರ್ಕಾರದ ಮಟ್ಟಕ್ಕೆ ಪರಿಣಾಮಕಾರಿಯಾಗಿ ತಲುಪಿಸಿ ಪರಿಹಾರ ಕಂಡುಕೊಳ್ಳಲು ಒಗ್ಗಟ್ಟಿನ ಪ್ರಯತ್ನ ಅಗತ್ಯ. ಈ ನಿಟ್ಟಿನಲ್ಲಿ ಮಾಧ್ಯಮಗಳ ಪಾತ್ರವೂ ಮಹತ್ವದ್ದಾಗಿದ್ದು, ಗ್ರಾಮೀಣ ಭಾಗದ ರೈತರ ಧ್ವನಿಯನ್ನು ಸರ್ಕಾರದ ಮಟ್ಟಕ್ಕೆ ತಲುಪಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಹೇಳಿದರು.

ನಿವೃತ್ತ ಮುಖ್ಯೋಪಾಧ್ಯಾಯ ಹೆಚ್.ಎಸ್. ವೆಂಕಟೇಶ್ ಮಾತನಾಡಿ, ವಳಲಹಳ್ಳಿ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘವು ಸಾಮಾಜಿಕ ಕಳಕಳಿಯಿಂದ ಹಲವು ವಿಚಾರಗಳಲ್ಲಿ ಸ್ಪಂದಿಸುತ್ತಿರುವುದು ಶ್ಲಾಘನೀಯ. ಈ ಸೇವಾ ಮನೋಭಾವವನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು.

ಕಾಡಾನೆಗಳಿಂದ ಬೆಳೆ ಹಾನಿಯಾದ ಕೂಡಲೇ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ, ಹಾನಿಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ ರೈತರಿಗೆ ತ್ವರಿತವಾಗಿ ಪರಿಹಾರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಕಸ್ತೂರಿರಂಗನ್ ವರದಿಯಿಂದ ಈ ಭಾಗದ ರೈತರು ಹಾಗೂ ಗ್ರಾಮೀಣ ಜನರ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಸರ್ಕಾರದ ಗಮನ ಸೆಳೆಯಬೇಕು. ವರದಿಯನ್ನು ತಿರಸ್ಕರಿಸುವಂತೆ ಹಾಗೂ ಮರುಪರಿಶೀಲನೆ ನಡೆಸುವಂತೆ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳು ಒಗ್ಗಟ್ಟಾಗಿ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದರು.

ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎನ್. ಚಂದ್ರಶೇಖರ ತಮ್ಮ ಸುದೀರ್ಘ ಸೇವಾ ಅವಧಿಯ ಅನುಭವಗಳನ್ನು ಹಂಚಿಕೊಂಡರು. ಶಿಕ್ಷಣ ಕ್ಷೇತ್ರದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಲು ಸ್ಥಳೀಯರು ನೀಡಿದ ಸಹಕಾರವನ್ನು ಸ್ಮರಿಸಿದ ಅವರು, ತಮ್ಮ ಶಿಷ್ಯರು ಇಂದು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ. ಶಿಕ್ಷಣವು ವ್ಯಕ್ತಿಯ ಬದುಕನ್ನು ಮಾತ್ರವಲ್ಲದೆ ಇಡೀ ಸಮಾಜವನ್ನು ಬದಲಿಸುವ ಶಕ್ತಿಯಾಗಿದ್ದು, ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಎಚ್.ಡಿ.ಪಿ. ಮಾಜಿ ಸಂಘಟನಾ ಕಾರ್ಯದರ್ಶಿ ಕೆ.ಪಿ. ಕೃಷ್ಣೇಗೌಡ ಮಾತನಾಡಿ, ಕರಡಿಗಾಲ ಗ್ರಾಮದ ಸಾಗರಿಕಾ ಶಿವಣ್ಣಗೌಡ ಅವರು ಹೈನುಗಾರಿಕೆಯಲ್ಲಿ ಸಾಧನೆ ಮಾಡುವ ಮೂಲಕ ಮಾದರಿ ಕೃಷಿಕರಾಗಿ ಗುರುತಿಸಿಕೊಂಡಿರುವುದು ಸಂತಸದ ಸಂಗತಿ. ಕೃಷಿ ಮತ್ತು ಹೈನುಗಾರಿಕೆಯಂತಹ ಸ್ವಾವಲಂಬಿ ಚಟುವಟಿಕೆಗಳು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿವೆ. ಶಿಕ್ಷಣದ ಜತೆಗೆ ಕೃಷಿ, ಹೈನುಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಯುವಜನರು ಸಮಾಜಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.

ನಿವೃತ್ತ ಶಿಕ್ಷಕರು, ಸಾಧಕ ಕೃಷಿಕರಿಗೆ ಸನ್ಮಾನಸ್ವಾತಂತ್ರ್ಯೋತ್ಸವದ ಅಂಗವಾಗಿ ಹೆಚ್.ವಿ.ಹಳ್ಳಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕೆ.ಬಿ. ಚಂದ್ರೇಗೌಡ, ಬಿ. ವೆಂಕಟರಮಣ, ಹೆಚ್.ಎಸ್. ವೆಂಕಟೇಶ್, ಬಿ.ಎನ್. ಚಂದ್ರಶೇಖರ ಹಾಗೂ ಪಿ.ಹೆಚ್. ನಾಗರಾಜು ಅವರನ್ನು ಬೆಳೆಗಾರರ ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಅದೇ ರೀತಿ ಕರಡಿಗಾಲ ಗ್ರಾಮದ ಸಾಗರಿಕಾ ಶಿವಣ್ಣಗೌಡ ಅವರು ಹೈನುಗಾರಿಕೆಯಲ್ಲಿ ಗಮನಾರ್ಹ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು.ಸಾಮಾಜಿಕ ಕಳಕಳಿಯ ಹರ್ಷ ಕಲ್ಲುತೋಟಗೆ ವಿಶೇಷ ಗೌರವವಿಶೇಷ ಚೇತನರಾಗಿದ್ದರೂ ಸಾಮಾಜಿಕ ಕಳಕಳಿಯಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಹರ್ಷ ಕಲ್ಲುತೋಟ ಅವರನ್ನು ಬೆಳೆಗಾರರ ಸಂಘದ ಪದಾಧಿಕಾರಿಗಳು ಅವರ ಮನೆಗೆ ತೆರಳಿ ವಿಶೇಷವಾಗಿ ಸನ್ಮಾನಿಸಿದರು.ರೈತರು ಮತ್ತು ಬೆಳೆಗಾರರಿಗೆ ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳು, ಯೋಜನೆಗಳು ಹಾಗೂ ಕೃಷಿಗೆ ಸಂಬಂಧಿಸಿದ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ನಿರಂತರವಾಗಿ ಹಂಚಿಕೊಳ್ಳುತ್ತಿರುವ ಹರ್ಷ, ಕಾಡಾನೆಗಳ ಚಲನವಲನದ ಕುರಿತು ಮುನ್ನೆಚ್ಚರಿಕೆ ನೀಡಲು ‘ಎಲಿಫೆಂಟ್ ಅಲರ್ಟ್’ ಸೇರಿದಂತೆ ವಿವಿಧ ಗುಂಪುಗಳನ್ನು ರಚಿಸಿ ಅಗತ್ಯ ಮಾಹಿತಿಯನ್ನು ಬೆಳೆಗಾರರಿಗೆ ತಲುಪಿಸುತ್ತಿದ್ದಾರೆ.

ಸನ್ಮಾನ ಸ್ವೀಕರಿಸಿ ಮಾತನಾಡಿದ ಹರ್ಷ ಕಲ್ಲುತೋಟ, ರೈತರ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಪರಿಹಾರ ಕಂಡುಕೊಳ್ಳಲು ಸಂಘಟನೆಯೇ ಪ್ರಮುಖ ಶಕ್ತಿಯಾಗಿದೆ. ಬೆಳೆಗಾರರು ಪ್ರತಿಯೊಂದು ಹಂತದಲ್ಲೂ ಒಗ್ಗಟ್ಟಾಗಿ ತಮ್ಮ ಹಕ್ಕು ಹಾಗೂ ಸಮಸ್ಯೆಗಳ ಕುರಿತು ಧ್ವನಿ ಎತ್ತಬೇಕು. ಕಸ್ತೂರಿರಂಗನ್ ವರದಿಯ ಕುರಿತು ಸರ್ಕಾರ ಮರುಪರಿಶೀಲನೆ ನಡೆಸುವಂತೆ ಎಲ್ಲರೂ ಒಗ್ಗಟ್ಟಾಗಿ ಒತ್ತಾಯಿಸಬೇಕು. ರೈತರಿಗೆ ದೊರೆಯಬೇಕಾದ ಸೌಲಭ್ಯಗಳು, ಪರಿಹಾರ ಹಾಗೂ ಸರ್ಕಾರದ ಯೋಜನೆಗಳ ಕುರಿತು ನಿರಂತರ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು ಎಂದು ಹೇಳಿದರು.

ಸ್ವಾತಂತ್ರ್ಯದ ಆಶಯ ಗ್ರಾಮೀಣ ಬದುಕಿನಲ್ಲೂ ಸಾಕಾರವಾಗಬೇಕಾದರೆ ರೈತರು, ಬೆಳೆಗಾರರು ಹಾಗೂ ಗ್ರಾಮೀಣ ಸಮುದಾಯದ ಸಮಸ್ಯೆಗಳಿಗೆ ಪರಿಹಾರ ದೊರೆಯಬೇಕು. ಅದಕ್ಕಾಗಿ ಸಂಘಟನೆ, ಒಗ್ಗಟ್ಟು ಮತ್ತು ಸಾಮಾಜಿಕ ಕಳಕಳಿಯೊಂದಿಗೆ ಮುನ್ನಡೆಯಬೇಕು ಎಂಬ ಸಂದೇಶ ವಳಲಹಳ್ಳಿಯ ಸ್ವಾತಂತ್ರ್ಯೋತ್ಸವದಲ್ಲಿ ಮೂಡಿಬಂತು.

ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಗಾರರು, ಗ್ರಾಮಸ್ಥರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *