
ಹಾಸನ: ಸಂಸದರಾದ ಪ್ರಜ್ವಲ್ ರೇವಣ್ಣ ರವರು ಬಿಜೆಪಿ ಕಾರ್ಯಕರ್ತರು ನನ್ನ ಪರವಾಗಿ ಇದ್ದಾರೆ ಎಂಬ ಹೇಳಿಕೆ ಹಾಸ್ಯಸ್ಪದ ಹಾಗೂ ಖಂಡನೀಯ ಎಂದು ನಗರ ಮಂಡಲ ಅಧ್ಯಕ್ಷರಾದ ವೇಣುಗೋಪಾಲ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಭಾರತೀಯ ಜನತಾ ಪಾರ್ಟಿ ಹಾಸನ ಜಿಲ್ಲೆಯಲ್ಲಿ ಮಾನ್ಯ ಪ್ರೀತಮ್ ಗೌಡ, ಶಾಸಕರಾದ ಸಿಮೆಂಟ್ ಮಂಜು ಶಾಸಕರಾದ ಸುರೇಶ್ ಹಾಗೂ ಜಿಲ್ಲಾಧ್ಯಕ್ಷರ ಮುಂದಾಳತ್ವದಲ್ಲಿ ಸದೃಢವಾಗಿ ಬೆಳೆದಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅವಕಾಶ ನೀಡಿದಲ್ಲಿ ಗೆಲುವು ನಮ್ಮದೇ ಎಂಬ ವಿಶ್ವಾಸ ನಮ್ಮ ಕಾರ್ಯಕರ್ತರಲ್ಲಿದೆ ಎಂದರು.
ಈ ವಿಷಯವಾಗಿ ಕೇಂದ್ರದಿಂದ ಬಂದಂತಹ ನಾಯಕರಿಗೆ ಹಾಗೂ ರಾಜ್ಯದ ನಾಯಕರಿಗೆ ನಮ್ಮ ಹಾಸನ ಜಿಲ್ಲೆಯ ಕಾರ್ಯಕರ್ತರು ಅನೇಕ ಬಾರಿ ಮನವಿ ಮಾಡಿದ್ದಾರೆ ಮತ್ತು ಆ ವಿಶ್ವಾಸವನ್ನು ಸಹ ಅವರಿಗೆ ನೀಡಲಾಗಿದೆ.
ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯ ವಿಚಾರ ಕಾರ್ಯ ಕರ್ತರ ಮಟ್ಟಿಗೆ ಇನ್ನೂ ಖಚಿತಗೊಂಡಿಲ್ಲ ನಮಗೆ ರಾಜ್ಯದ ಅಥವಾ ಜಿಲ್ಲೆಯ ಯಾವ ನಾಯಕರು ಸಹ ಮೈತ್ರಿಯ ಬಗ್ಗೆ ಸ್ಪಷ್ಟನೆ ನೀಡಿಲ್ಲ.
ಒಂದೊಮ್ಮೆ ನಾವು ಮೈತ್ರಿ ಯಾದಲ್ಲಿ ನಮ್ಮ ಬಿಜೆಪಿ ನಾಯಕರುಗಳ ಮುಂದಾಳತ್ವದಲ್ಲಿ ನಾವು ಬಿಜೆಪಿ ಹಾಗು ನರೇಂದ್ರ ಮೋದಿಯವರನ್ನು ಗೆಲ್ಲಿಸುವುದಕ್ಕೆ ಮತವನ್ನು ಕೇಳುತ್ತೇವೆ ಹೊರತು ನಾವು ನೇರವಾಗಿ ಸಂಸದ ಪ್ರಜ್ವಲ್ ರೇವಣ್ಣ ಅವರ ಜೊತೆ ಹೋಗುವುದಿಲ್ಲ. ಪಕ್ಷದ ಬಹುತೇಕ ಮಂದಿ ನಮ್ಮ ಈ ವಿಚಾರದೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಇದೆ ವೇಳೆ ಗ್ರಾಮಾಂತರ ಮಂಡಲದ ಪ್ರಮುಖರಾದ ಬೀರನಹಳ್ಳಿ ಮಂಜು ಉಪಸ್ಥಿತರಿದ್ದರು.
