
ಅರೇಹಳ್ಳಿ: ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಬ್ಯಾದನೆ ಗ್ರಾಮದಲ್ಲಿ ಶ್ರೀಚೌಡೇಶ್ವರಿ ದೇವಿ ದೇವಸ್ಥಾನ ಸೇವಾ ಸಮಿತಿಯಿ ವತಿಯಿಂದ ಚೌಡೇಶ್ವರಿ ದೇವಿ ಸನ್ನಿಧಿಯಲ್ಲಿ ವಾರ್ಷಿಕ ಪೂಜಾ ಮಹೋತ್ಸವವನ್ನುಏರ್ಪಡಿಸಲಾಗಿತ್ತು.
ಈ ವೇಳೆ ಅನಂತರಾಮ ಶಾಸ್ತ್ರಿ ಮಾತನಾಡಿ ಮೂರು ದಿನಗಳ ಕಾಲ ಜರುಗುವ ಪೂಜಾ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ದೇವಾಲಯ ಹಾಗೂ ಅಮೃತೇಶ್ವರ ದೇವಾಲಯದ ಪೂಜೆ, ಸ್ವಸ್ತಿ ಪುಣ್ಯಹ , ಅಭಿಷೇಕ, ಅಲಂಕಾರ ಅರ್ಚನೆ, ಮಹಾಗಣಪತಿ ನವಗ್ರಹ ಪುರಸ್ಸರ, ದುರ್ಗಾ ಹೋಮ ಮತ್ತು ನಮಸ್ಕಾರ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಜರುಗುವುದು. ಪೂಜಾ ಕಾರ್ಯಕ್ರಮದ ಕೊನೆಯದಿನ ಮಹಾಪೂಜೆ, ಬಲಿ ಪೂಜೆ, ಮಹಾ ಮಂಗಳಾರತಿ ನಂತರ ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಗುವುದು ಎಂದರು.
ಗ್ರಾಮಸ್ಥ ಪ್ರದೀಪ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಸಹ ಎಲ್ಲರ ಸಹಕಾರದಿಂದ ಪೂಜೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಪೂಜೋತ್ಸವದಲ್ಲಿ ಚೌಡೇಶ್ವರಿ ದೇವಿ ದೇವಸ್ಥಾನ ಸಮಿತಿಯ ಎಲ್ಲಾ ಪದಾಧಿಕಾರಿಗಳು, ದೇವಿ ಅರ್ಚಕರು, ಸ್ಥಳೀಯರು ಹಾಗೂ ಸುತ್ತ ಮುತ್ತಲ ಗ್ರಾಮದ ಭಕ್ತಾಧಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಎಂದರು.



