ಹಾಸನ: ಭಯೋತ್ಪಾದನೆ ಮತ್ತು ದೇಶವಿರೋಧಿ ಘೋಷಣೆ ಮಾಡಿರುವವರ ವಿರುದ್ಧ ಕಠೋರ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭಯೋತ್ಪಾದನೆ ವಿರೋಧಿ ಹೋರಾಟ ಸಮಿತಿಯಿಂದ ಪ್ರತಿಭಟಿಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು.

ನಗರದ ಎನ್.ಆರ್. ವೃತ್ತದಲ್ಲಿ ಕರ್ಪೂರ ಹಚ್ಚಿ ದೇಶದ್ರೋಹಿ ವಿರುದ್ಧ ಘೋಷಣೆ ಕೂಗಿದರು. ನಂತರ ಬಿ.ಎಂ. ರಸ್ತೆ ಮೂಲಕ ಡಿಸಿ ಕಛೇರಿ ಆವರಣಕ್ಕೆ ತೆರಳಿದ ಅವರು, ವಿಶ್ವಹಿಂದೂ ಪರಿಷತ್ತು ವಿಭಾಗ ಸಹಸಂಯೋಜಕರಾದ ಪ್ರಬಂಜನ್ ಮಾಧ್ಯಮದೊಂದಿಗೆ ಮಾತನಾಡಿ, ವಿಧಾನಸೌಧದಲ್ಲಿ ಭಾರತ ವಿರೋಧಿ ಘೋಷಣೆ ಕೂಗಿರುವಂತಹ ವಿಷಯವು ಅತೀ ಕಳವಳಕಾರಿಯಾಗಿರುವಂತಹ ವಿಷಯವಾಗಿರುತ್ತದೆ.

ಇದು ದೇಶದ ಭದ್ರತೆಗೆ ಮತ್ತು ಸಾರ್ವಭೌಮತೆಗೆ ಕುಂದುತರುವಂತಹ ಘೋಷಣೆ ಆಗಿರುತ್ತದೆ. ಘೋಷಣೆ ಕೂಗಿರುವಂತಹ ವ್ಯಕ್ತಿಗಳನ್ನು ಬಂಧಿಸಿದ್ದರೂ ಸಹ ಅವರುಗಳನ್ನು ಈ ದೇಶದ ಅತಿ ಕಠೋರ ಕಾನೂನು ಆದ ಕೋಕಾ ಮತ್ತು ಇತರೆ ಕಾನೂನು ಚೌಕಟ್ಟಿನೊಳೆಗೆ ತಂದು ದೇಶದ್ರೋಹಿಗಳನ್ನು ಶಿಕ್ಷೆಗೆ ಒಳಪಡಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದರು.

ಅದೇ ರೀತಿ ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ಭಯೋತ್ಪಾದಕನೊಬ್ಬ ಬಾಂಬ್ ಸ್ಫೋಟಿಸಿರುವುದು ಆತಂಕದ ವಿಷಯವಾಗಿರುತ್ತದೆ. ಈ ಭಯೋತ್ಪಾದನೆಯು ಕರ್ನಾಟಕ ಜನತೆಯನ್ನು ಭಯದಿಂದ ಮುಳುಗುವಂತೆ ಮಾಡಿದೆ. ಸಮಗ್ರ ಕರ್ನಾಟಕದ ಜನತೆಯು ಈ ದುಷ್ ಕೃತ್ಯವನ್ನು ಕಠೋರವಾಗಿ ಖಂಡಿಸುತ್ತದೆ. ಈ ಕೃತ್ಯವನ್ನು ಮಾಡಿರುವಂತಹ ಭಯೋತ್ಪಾದಕರನ್ನು ಶೀಘ್ರವಾಗಿ ಬಂಧಿಸಿ ಅವರುಗಳಿಗೆ ಗಲ್ಲುಶಿಕ್ಷೆಗೆ ಒಳಪಡಿಸುವಂತಹ ಕೆಲಸವಾಗಬೇಕು.

ಈ ಕೃತ್ಯಗಳಿಗೆ ಸಂಬಂಧಿಸಿದಂತೆ ಈಗ ಇರುವ ಕರ್ನಾಟಕ ರಾಜ್ಯ ಸರ್ಕಾರವು ಮೃದುಧೋರಣೆ ತೋರುತ್ತಿರುವುದು ಆತಂಕದ ವಿಷಯವಾಗಿರುತ್ತದೆ. ಈ ಕಾರಣದಿಂದ ಎರಡೂ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರಕ್ಕೂ ಮತ್ತು ಕೇಂದ್ರ ಸರ್ಕಾರಕ್ಕೂ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕೆಂದು ಆಗ್ರಹಿಸಿ ಮನವಿ ಮಾಡುವುದಾಗಿ ಹೇಳಿದರು.

ಪ್ರತಿಭಟನೆಯಲ್ಲಿ ಭಯೋತ್ಪಾದನೆ ವಿರೋಧಿ ಹೋರಾಟ ಸಮಿತಿಯ ಮುಖಂಡರಾದ ವಿಜಯಕುಮಾರ್, ವಿಶ್ವಹಿಂದೂ ಪರಿಷತ್ತುನ ಜಿಲ್ಲಾಧ್ಯಕ್ಷ ಅನೂಪ್, ಶರತ್, ವಿಕಾಶ್, ಭಜರಂಗದಳದ ಅಭಿ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಮುಖಂಡರಾದ ಕಿರಣ್, ವೇಣುಗೋಪಾಲ್, ನಗರಸಭೆ ಮಾಜಿ ಅಧ್ಯಕ್ಷ ಆರ್. ಮೋಹನ್, ವೇಧವತಿ, ದಿನೇಶ್ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *