ಬೇಲೂರು : ಮಾರ್ಚ್. ೨೦”ಕನ್ನಡ ಭಾಷೆಯಲ್ಲಿನ ಪದ ಸಂಪತ್ತು ಅನ್ಯ ಭಾಷೆಗಳಲ್ಲಿ ಕಾಣಲು ಸಾದ್ಯವಿಲ್ಲ” ಕನ್ನಡ ಭಾಷೆ ಪುರಾತನ ಲಿಪಿ ಸಾಹಿತ್ಯವನ್ನು ಹೊಂದಿರುವ ಭಾಷೆಯಲ್ಲಿನ ಪದ ಸಂಪತ್ತು ಅನ್ಯ ಭಾಷೆಯಲ್ಲಿ ಕಾಣಲು ಸಾದ್ಯವಿಲ್ಲ ಎಂದು ಕನ್ನಡ ಸಂಸ್ಕೃತಿ ಸೇವಾ ಭಾರತಿ ಸಂಸ್ಥಾಪಕ ಅಧ್ಯಕ್ಷ ನಾಗರಾಜ್ ಓಂಕಾರ ಪ್ರಿಯ ಹೇಳಿದರು.

ಪಟ್ಟಣದ ಹೊರ ವಲಯದಲ್ಲಿನ ವೈಡಿಡಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಕನ್ನಡ ಸಂಸ್ಕೃತಿ ಸೇವಾ ಭಾರತಿ ಮತ್ತು ವೈಡಿಡಿ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕನ್ನಡ ಪದ ಸಂಪತ್ತು ವಿಶೇಷ ಉಪನ್ಯಾಸ ಕಮ್ಮಟ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇತ್ತೀಚಿನ ದಿನದಂದು ಕನ್ನಡ ಭಾಷೆಯಲ್ಲಿ ಉಚ್ಚಾರಣೆ ಮತ್ತು ಪದ ಬಳಕೆ ನಿಜಕ್ಕೂ ಶೋಚನೀಯ. ಇದ್ದರಿಂದ ಭಾಷೆಯ ಬಗ್ಗೆ ಎಷ್ಟು ಅಭಿಮಾನವಿದೆ ಎಂಬ ಬಗ್ಗೆ ತಿಳಿಯಬೇಕಿದೆ.ಎಲ್ಲಾ ಭಾಷೆಗಿಂತ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆಯಾಗಿದೆ. ಇಲ್ಲಿನ ನೆಲ ಎಲ್ಲಾ ಭಾಷೆ ಮತ್ತು ಧರ್ಮಗಳನ್ನು ಐಕ್ಯತೆಯಿಂದ ನೋಡುವ ಗುಣವನ್ನು ಹೊಂದಿದೆ.

ವಿದ್ಯಾರ್ಥಿಗಳು ಕೇವಲ ಪಠ್ಯ ಪುಸ್ತಕಗಳ ಓದಿಗಷ್ಟೇ ಸಮಯ ಮೀಸಲಿಡದೆ ಸಾಮಾಜಿಕ ಮೌಲ್ಯಗಳನ್ನು ಕಲಿಸುವ ಪುಸ್ತಕಗಳನ್ನು ಓದಿ ನಾಡು, ನುಡಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು, ಕನ್ನಡ ವರ್ಣಮಾಲೆ. ವ್ಯಾಕರಣ ವಿಶೇಷತೆಯಿಂದ ಕೂಡಿದೆ ಈ ನಿಟ್ಟಿನಲ್ಲಿ ನಾವುಗಳು ‌ಇಡೀ‌ ನಾಡಿನಲ್ಲಿ ಕನ್ನಡ ಪದ ಸಂಪತ್ತು ವಿಶೇಷ ಉಪನ್ಯಾಸ ಕಮ್ಮಟ ಏರ್ಪಡಿಸಿ ಉಪನ್ಯಾಸ ‌ನೀಡುತ್ತಾ ಬಂದಿದೆ ಎಂದರು.

ಸಮಾರಂಭ ಉದ್ಘಾಟನೆ ನಡೆಸಿ ಮಾತನಾಡಿದ ವೈಡಿಡಿ ಕಾಲೇಜು ಸಮಿತಿ ಸದಸ್ಯ ಹಾಗೂ ಪತ್ರಕರ್ತ ಹೆಬ್ಬಾಳು ಹಾಲಪ್ಪ, ಕನ್ನಡ ಭಾಷೆ ೨೫೦೦ ವರ್ಷದ ಪುರಾತನ ಲಿಪಿ ಭಾಷೆ ಜೊತೆಗೆ ಶಾಸ್ತ್ರೀಯ ಸ್ಥಾನ ಮಾನ ಹೊಂದಿದೆ.ಸಾವಿರಾರು ವರ್ಷದ ಗತ ಭಾಷೆಗೆ ಇದೇ ತಾಲ್ಲೂಕಿನಲ್ಲಿ ಲಭ್ಯವಾದ ಹಲ್ಮಿಡಿ ಶಾಸನ ಪೂರಕವಾಗಿದೆ.

ಎಂಟು ಜ್ಞಾನಪೀಠ ಪ್ರಶಸ್ತಿ ತಂದ ಹೆಗ್ಗಳಿಕೆಗೆ ಕನ್ನಡ ಪಾತ್ರವಾಗಿದೆ. ಇತ್ತೀಚಿನ ದಿನದಂದು ಕೆಲವರು ಕನ್ನಡ ಭಾಷೆ ನಾಶವಾಗುತ್ತದೆ ಎನ್ನುತ್ತಾರೆ ಆದರೆ. ಅಧುನಿಕ ‌ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕನ್ನಡದ ಬಳಕೆ ಹೆಚ್ಚಾಗುತ್ತಿದೆ ಎಂದ ಅವರು ಕನ್ನಡದಲ್ಲಿ ಜನಪದ. ಜೈನ. ಶರಣ ಮತ್ತು ದಾಸ ಸಾಹಿತ್ಯ ಹಾಗೂ ನವೋದಯ ಕಾವ್ಯ ಸಾಹಿತ್ಯ ಕನ್ನಡದ ಭಾಷೆ ಬೆಳೆವಣಿಗೆ ಅಪಾರ ಕೊಡುಗೆ ನೀಡುತ್ತಾ ಬಂದಿದೆ.ಇದ್ದರಿಂದ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಕೀಳಿರುಮೆ ಬಿಟ್ಟು ಮಾತೃ ಭಾಷೆಯ ಪ್ರೀತಿ ಅಭಿಮಾನ ಬೆಳೆಸಿಕೊಳ್ಳಬೇಕಿದೆ.

ಈ ನಿಟ್ಟಿನಲ್ಲಿ ಕನ್ನಡ ಸಂಸ್ಕೃತಿ ಸೇವಾ ಭಾರತಿಯ ಸಂಸ್ಥಾಪಕ ಅಧ್ಯಕ್ಷರಾದ ನಾಗರಾಜ್ ಓಂಕಾರ ಪ್ರೀಯ ಅವರು ಇಡೀ ರಾಜ್ಯಾದ್ಯಂತ ಸಂಚರಿಸಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ ಪದ ಸಂಪತ್ತು ಬಗ್ಗೆ ಉಪನ್ಯಾಸ ‌ನೀಡಿ‌ ಜಾಗೃತಿ ಮೂಡಿಸುತ್ತಿರುವುದು ನಿಜಕ್ಕೂ ಸಂತಸ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ವೈಡಿಡಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಹೆಚ್.ಎಂ.ಮಹೇಶ್, ಕಾಲೇಜು ಅಧೀಕ್ಷಕ ಕೇಶವ ಕಿರಣ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಎಲ್.ರಾಜೇಗೌಡ ಸೇರಿದಂತೆ ಕಾಲೇಜು ಕನ್ನಡ ಪ್ರಾಧ್ಯಾಪಕರು ಮತ್ತು ಉಪನ್ಯಾಸಕರು ಹಾಜರಿದ್ದರು.

ಬಾಕ್ಸ್ ನ್ಯೂಸ್ :- ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರು ಕನ್ನಡ ಪುಸ್ತಕಗಳನ್ನು ಓದು ಹವ್ಯಾಸವನ್ನು ಬೆಳೆಸಿಕೊಳ್ಳಬೇಕಿದೆ. ಆಗ ಮಾತ್ರ ಕನ್ನಡ ಭಾಷೆಯ ಬಲವರ್ಧನೆಗೆ ಪೂರಕಚಾಗುತ್ತದೆ. ಹೆಚ್ಚು ಯುವ ಸಮುದಾಯದ ಈ ಬಗ್ಗೆ ಅಲೋಚನೆ ನಡೆಸಬೇಕು ಎಂದು ಬೇಲೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಎಲ್.ರಾಜೇಗೌಡ ಹೇಳಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *