
ಹಾಸನ: ಮಾಜಿ ಸಿ.ಎಂ ಕುಮಾರಸ್ವಾಮಿ ಅವರಿಗೆ ಹೃದಯ ಶಸ್ತ್ರ ಚಿಕಿತ್ಸೆ ಹಿನ್ನೆಲೆ ಚಿಕಿತ್ಸೆ ಯಶಸ್ವಿ ಆಗಲೆಂದು ಪ್ರಾರ್ಥಿಸಿ ನಗರದ ಎಂ.ಜಿ. ರಸ್ತೆಯ ಬಳಿ ಇರುವ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಆವರಣದಲ್ಲಿರುವ ಶ್ರೀ ಗಣಪತಿ ದೇವಾಲಯದಲ್ಲಿ ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರು ಗುರುವಾರ ವಿಶೇಷ ಪೂಜೆ ಸಲ್ಲಿಸಿದಲ್ಲದೇ ಹಿಡುಗಾಯಿ ಹೊಡೆದರು.
ಬೆಳಗ್ಗೆಯಿಂದಲೇ ನೂರಾರು ಸಂಖ್ಯೆಯ ಜೆಡಿಎಸ್ ಕಾರ್ಯಕರ್ತರು ಹಾಗೂ ಎಚ್ಡಿಕೆ ಅಭಿಮಾನಿಗಳು ಜಮಾಯಿಸಿ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿ ದೇವಾಲಯದ ಮುಂದೆ ಈಡುಗಾಯಿ ಹೊಡೆದು ಭಕ್ತಿ ಸಮರ್ಪಣೆ ಮಾಡಿ, ಕುಮಾರಸ್ವಾಮಿ ಅವರ ಆರೋಗ್ಯ ಸುಧಾರಣೆಗೆ ಪ್ರಾರ್ಥಿಸಿದರು.
ಈ ವೇಳೆ ಜಿಲ್ಲಾ ಜೆಡಿಎಸ್ ವಕ್ತಾರ ಹೊಂಗೆರೆ ರಘು ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಮಾದರಿ ಮುಖ್ಯಮಂತ್ರಿಯಾಗಿ ಎಚ್ಡಿ ಕುಮಾರಸ್ವಾಮಿ ಅವರು ನೀಡಿರುವ ಕೊಡುಗೆ ಅಪಾರವಾಗಿದೆ. ಆದರೆ ಇಂದು ಅವರಿಗೆ ಮೂರನೇ ಬಾರಿಗೆ ಹೃದಯ ಶಸ್ತ್ರ ಚಿಕಿತ್ಸೆ ನಡೆಯುತ್ತಿದ್ದು ಅವರ ಆರೋಗ್ಯ ಸುಧಾರಣೆಗೆ ದೇವರಲ್ಲಿ ಮೊರೆ ಇಟ್ಟಿದ್ದೇವೆ ಎಂದರು.
ಆರೋಗ್ಯ, ಶಿಕ್ಷಣ, ನೀರಾವರಿ ಸೇರಿದಂತೆ ಇನ್ನೂ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ರಾಜ್ಯದ ಜನರಿಗೆ ನೀಡುವ ಮೂಲಕ ಇತರರಿಗೆ ಮಾದರಿ ಆಗಿರುವ ಎಚ್ಡಿ ಕುಮಾರಸ್ವಾಮಿ ಅವರಿಗೆ ಇಂದು ನಡೆಯುತ್ತಿರುವ ಶಸ್ತ್ರ ಚಿಕಿತ್ಸೆ ಯಶಸ್ವಿ ಆಗಲಿ, ಆದಷ್ಟು ಬೇಗ ಗುಣಮುಖರಾಗಲಿ ಎಂದು ಆಶಿಸಿದರು.
ಕೇವಲ ರಾಜಕೀಯವಾಗಿ ಮಾತ್ರವಲ್ಲದೆ ವೈಯಕ್ತಿಕವಾಗಿ ಕೂಡ ಅನೇಕರಿಗೆ ಸಹಾಯಸ್ಥ ಚಾಚಿರುವ ಕೊಡುಗೈ ದಾನಿ ಕುಮಾರಸ್ವಾಮಿ ಅವರ ಕೊಡುಗೆ ಈ ರಾಜ್ಯಕ್ಕೆ, ಹಾಸನ ಜಿಲ್ಲೆಗೆ ಇನ್ನೂ ಅತೀ ಅಗತ್ಯವಾಗಿದೆ ಆದುದರಿಂದ ದೇವರು ಅವರಿಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ ಮಾತನಾಡಿ, ಜನಪರ ನಾಯಕ, ಜನಪರ ಕಾಳಜಿ ಉಳ್ಳ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರಿಗೆ ಮೂರನೇ ಬಾರಿಗೆ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿರುವುದು ನಮ್ಮೆಲ್ಲರಿಗೂ ಬೇಸರದ ವಿಚಾರವಾಗಿದೆ, ಅವರಿಗೆ ಬೇಗ ಆರೋಗ್ಯ ಸುಧಾರಿಸಿ ಮತ್ತೆ ರಾಜ್ಯಕ್ಕೆ, ಈ ದೇಶಕ್ಕೆ ಕೊಡುಗೆ ನೀಡುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ರಾಜ್ಯದ ರೈತರ ಸಾಲ ಮನ್ನಾ ಮಾಡಿ, ಶಿಕ್ಷಣ ಕ್ಷೇತ್ರದಲ್ಲೂ ಹೊಸ ಕ್ರಾಂತಿಕಾರಕ ಬದಲಾವಣೆ ತಂದು ಸಾಕಷ್ಟು ಕೊಡಿಗೆ ನೀಡಿರುವ ಕುಮಾರಸ್ವಾಮಿ ಅವರು ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದರು
ಇದೆ ವೇಳೆ ಜೆಡಿಎಸ್ ಮುಖಂಡರು ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಎಸ್. ಅನಿಲ್ ಕುಮಾರ್, ಜಿ.ಪಂ. ಮಾಜಿ ಉಪಾಧ್ಯಕ್ಷ ಸ್ವಾಮಿಗೌಡ, ನಗರಸಭೆ ಸದಸ್ಯ ಚಂದ್ರೇಗೌಡ, ತಾ.ಪಂ ಮಾಜಿ ಅಧ್ಯಕ್ಷ ಕುಮಾರ್, ಮುಖಂಡರಾದ, ಅಗಿಲೆ ಮೊಗಣ್ಣಗೌಡ, ರುದ್ರಪ್ಪ, ಸಂಗಂ, ಸಮೀರ್ ಖಾನ್, ಯೋಗೇಶ್, ಅನಿಲ್, ಕುಮ್ಮಿ ,ವಿಜಿ , ರಾಮಣ್ಣ , ಬಾಲಕೃಷ್ಣ, ದಾಸೇಗೌಡ , ದರ್ಮಣ್ಣ , ಚಂದ್ರಿಕಾ, ನಿರ್ಮಲಾ ಇತರರು ಭಾಗವಹಿಸಿದ್ದರು.



