
ಹಾಸನ: ಹೇಮಾವತಿ ಜಲಾಶಯದಿಂದ ಏಕಾಏಕಿ ಎಡದಂಡೆ ನಾಲೆ ಮೂಲಕ ನೀರು ಹರಿಸುತ್ತಿದ್ದು, ತುಮಕೂರಿಗೆ ನೀರು ಹರಿಸುವಂತೆ ನಮ್ಮ ಹಾಸನ ಜಿಲ್ಲೆಗೂ ತಕ್ಷಣ ನೀರು ಬಿಡಬೇಕೆಂದು ಆಗ್ರಹಿಸಿ ಜೆಡಿಎಸ್ ಪಕ್ಷದಿಂದ ಅಪರ ಜಿಲ್ಲಾಧಿಕಾರಿ ಶಾಂತಲಾ ಅವರಿಗೆ ಮನವಿ ಸಲ್ಲಿಸಿದರು.
ಮಾಜಿ ಶಾಸಕ ಕೆ.ಎನ್. ಲಿಂಗೇಶ್ ಮತ್ತು ಹೆಚ್.ಡಿ.ಸಿ.ಸಿ. ಬ್ಯಾಂಕ್ ಮಾಜಿ ಅಧ್ಯಕ್ಷ ಹೊನ್ನವಳ್ಳಿ ಸತೀಶ್ ಮಾಧ್ಯಮದೊಂದಿಗೆ ಮಾತನಾಡಿ, ಜಾತ್ಯಾತೀತ ಜನತಾ ದಳ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ನೀರಿನ ಸಮಸ್ಯೆ ಬಗ್ಗೆ ಅರಿವು ಮೂಡಿಸುವ ಮನವಿಯನ್ನು ಕೊಡಲಾಗಿದೆ. ಪ್ರಸ್ತೂತ ಬರಗಾಲ ನೀರಿಲ್ಲ. ದನ ಕರುಗಳಿಗೆ ಕುಡಿಯಲು ನೀರಿಲ್ಲದೇ ಬರದ ಪರಿಸ್ಥಿತಿಯಲ್ಲಿ ಹಾಸನ ಜಿಲ್ಲೆ ಹಾಗೂ ಹಳ್ಳಿಗಳಲ್ಲಿ ಕುಡಿಯುವ ನೀರು ಬಹಳಷ್ಟು ಸಮಸ್ಯೆ ಎದುರಾಗಿದೆ.
ಕಳೆದ ವರ್ಷ ಮತ್ತು ಈ ವರ್ಷ ಮಳೆಯ ಅಭಾವದಿಂದ ಹಾಸನ ಜಿಲ್ಲೆಯಲ್ಲೂ ಬರ ಪರಿಸ್ಥಿತಿ ತಲೆ ದೋರಿದ್ದು, ಈಗಾಗಲೇ ರಾಜ್ಯ ಸರ್ಕಾರ ಜಿಲ್ಲೆಯ ಎಂಟೂ ತಾಲೂಕುಗಳನ್ನೂ ಬರಪೀಡಿತ ಎಂದು ಘೋಷಣೆ ಮಾಡಿದೆ. ಹೇಮಾವತಿ ಜಲಾಶಯದಲ್ಲಿ ಪ್ರಸ್ತುತ ನೀರು ಸಂಗ್ರಹ ಮಟ್ಟ ಕಳೆದ ವರ್ಷಕ್ಕೆ ಹೋಲಿಸಿದರೆ ತುಂಬಾ ಕಡಿಮೆ ಇದೆ.
ಕಳೆದ ವರ್ಷ ಇದೇ ದಿನ ೨೦.೬೩೫ ಟಿಎಂಸಿ ನೀರಿತ್ತು. ಈ ವರ್ಷ ೧೨.೬೫೨ ಟಿಎಂಸಿ ನೀರಿದೆ. ಇದರಲ್ಲಿ ಬಳಕೆ ಮಾಡಬಹುದಾದ ನೀರು ಕೇವಲ ೮.೨೮೦ ಟಿಎಂಸಿ ಮಾತ್ರ. ನೀರಿನ ಪ್ರಮಾಣ ಕಡಿಮೆ ಇದ್ದರೂ ಕೂಡ ಕಳೆದ ಹತ್ತು ದಿನಗಳಿಂದಲೂ ಎಡದಂಡೆ ಮೂಲಕ ಹೇಮಾವತಿ ಜಲಾಶಯದಿಂದ ಏಕಾಏಕಿ ನೀರು ಹರಿಸಲಾಗುತ್ತಿದೆ. ಇದು ನಮಗೆ ಆತಂಕ ತರಿಸಿದೆ ಎಂದರು.
ಪ್ರಸ್ತುತ ಜಿಲ್ಲೆಯಲ್ಲೂ ತೀವ್ರ ಬರಗಾಲ ಪರಿಸ್ಥಿತಿ ಇದೆ. ಅಂತರ್ಜಲ ಕೊರತೆಯಿಂದಾಗಿ ಅನೇಕ ಕಡೆಗಳಲ್ಲಿ ಕುಡಿಯವ ನೀರಿನ ಸಮಸ್ಯೆ ತಲೆದೋರಿದೆ. ಮಳೆ ಒಂದು ತಿಂಗಳಲ್ಲಿ ಬರುವುದೋ, ಎರಡು ತಿಂಗಳಲ್ಲಿ ಬರುವುದೋ ಗೊತ್ತಿಲ್ಲ. ಹೀಗಿದ್ದರೂ ಹೇಮಾವತಿ ಜಲಾಶಯದಿಂದ ನೀರು ಹರಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಹಾಸನ ನಗರ ಸೇರಿದಂತೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಇರುವುದರಿಂದ ನಮಗೆ ಸಮಸ್ಯೆಯಾಗಲಿದೆ ಎಂದು ಆತಂಕವ್ಯಕ್ತಪಡಿಸಿದರು.
ಹಾಲಿ ಹರಿಯುತ್ತಿರುವ ನೀರನ್ನು ನಮ್ಮ ಜಿಲ್ಲೆ ವ್ಯಾಪ್ತಿಯಲ್ಲಿ ಕೆರೆ-ಕಟ್ಟೆ ತುಂಬಲು ಅವಕಾಶ ಮಾಡಿಕೊಡಬೇಕು ಎಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ. ಹೇಮಾವತಿ ಜಲಾಶಯದಲ್ಲಿ ನೀರು ಸಂಗ್ರಹ ಪ್ರಮಾಣ ಕಡಿಮೆ ಇದ್ದ ಕಾರಣ ಕಳೆದ ಸಾಲಿನಲ್ಲಿ ಅಚ್ಚುಕಟ್ಟು ಭಾಗದಲ್ಲಿ ಯಾವುದೇ ನೀರಾವರಿ ಬೆಳೆಗೆ ನೀರು ನೀಡಲಿಲ್ಲ ಎಂದು ಹೇಳಿದರು.
ಇದರಿಂದ ಲಕ್ಷಾಂತರ ರೈತರು ಬೆಳೆ ಕಳೆದುಕೊಳ್ಳಬೇಕಾಯಿತು. ನೀರಿಲ್ಲದೆ ಬೆಳೆ ನಷ್ಟ ಅನುಭವಿಸಿದ ರೈತರಿಗೆ ರಾಜ್ಯ ಸರ್ಕಾರ ಸೂಕ್ತ ಪರಿಹಾರವನ್ನೂ ನೀಡಲಿಲ್ಲ. ಇದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಈವರೆಗೂ ರೈತರ ಹಿತ ಕಾಯದ ಸರ್ಕಾರ, ಇದೀಗ ಕುಡಿಯುವ ನೀರಿಗೂ ಸಮಸ್ಯೆ ತಂದೊಡ್ಡಲು ಮುಂದಾಗಿದೆ. ಮಳೆಗಾಲ ಆರಂಭವಾಗುವವರೆಗೂ ಹೇಮಾವತಿ ಜಲಾಶಯದಲ್ಲಿ ನೀರನ್ನು ಉಳಿಸಬೇಕು ಎಂದು ಈ ಮೂಲಕ ಸಮಸ್ತ ಹಾಸನ ಜಿಲ್ಲೆಯ ಜನರ ಪರವಾಗಿ ಮನವಿ ಮಾಡಿಕೊಳ್ಳುತ್ತೇವೆ.
ಇನ್ನು ಎರಡು ದಿನಗಳ ಒಳಗೆ ಮಳೆ ಬರುತ್ತದೆ ಎಂದು ಜಿಲ್ಲಾಡಳಿತಕ್ಕೆ ಕನಸ್ಸು ಬಿದ್ದಿದೆ. ಅವರ ಕನಸ್ಸು ನನಸಾಗಲಿ. ಆದರೇ ತುಮಕೂರಿಗೆ ನೀರು ಕೊಡುವಂತೆ ನಮಗೂ ನೀರು ಕೊಡಲಿ. ಸರ್ವಾಧಿಕಾರಿ ದೋರಣೆ ವಿರುದ್ಧ ಜೆಡಿಎಸ್ ಇಡೀ ಜಿಲ್ಲೆಯ ರೈತರ ಪರವಾಗಿ ಸರಕಾರಕ್ಕೆ ಆಗ್ರಹಿಸಿ ತತ್ ಕ್ಷಣ ಬೇರೆ ಜಿಲ್ಲೆಗೆ ನೀರು ಹರಿಸುವುದನ್ನು ನಿಲ್ಲಿಸಬೇಕು.
ಕುಡಿಯುವ ನೀರಿಗೆ ಸಮಸ್ಯೆ ಆಗಲ್ಲ ಎಂದು ಡಿಸಿ ಅವರಿಗೆ ಕನಸ್ಸು ಬಿದ್ದಿದ್ದರೇ ನಮಗೂ ಕೂಡ ನೀರು ಕೊಡಿ ಎಂಬುದು ಒತ್ತಾಯಿಸಿ ರಾಜ್ಯಸರಕಾರಕ್ಕೆ ಜಿಲ್ಲಾಡಳಿತ ಮೂಲಕ ಮನವಿ ಸಲ್ಲಿಸಲಾಗಿದೆ. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೇ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಟ ಮಾಡುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಜಿಲ್ಲಾ ಮಾಧ್ಯಮ ವಕ್ತಾರ ಹೊಂಗೆರೆ ರಘು, ಜೆಡಿಎಸ್ ಪಕ್ಷದ ಮುಖಂಡರಾದ ಕಮಲ್ ಕುಮಾರ್, ಲಕ್ಷ್ಮಣ್, ಸಯ್ಯಾದ್ ಅಕ್ಬರ್, ಸಯ್ಯಾದ್ ಅನ್ಸರ್, ಅಕ್ಮಲ್, ನಿರ್ಮಲಾ ಇತರರು ಉಪಸ್ಥಿತರಿದ್ದರು.
