
ಚನ್ನರಾಯಪಟ್ಟಣ: ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಮಟ್ಟದ ಜೆಡಿಎಸ್ ಪಕ್ಷ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ನನಗೂ ಫ್ರೀ,ನಿನಗೂ ಫ್ರೀ ಎಂದು ಹೇಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಎಲ್ಲರಿಗೂ ಬರಗಾಲವನ್ನು ಫ್ರೀ ಕೊಡುತ್ತಿದ್ದಾರೆ ಎಂದು ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವ್ಯಂಗ್ಯವಾಡಿದರು.
ಶ್ರವಣಬೆಳಗೊಳದ ಹೊರವಲಯದ ಎಪಿಎಂಸಿ ಆವರಣದಲ್ಲಿ ಜೆಡಿಎಸ್- ಬಿಜೆಪಿಯ ಶ್ರವಣಬೆಳಗೊಳ ಹೋಬಳಿ ಮಟ್ಟದ ಮುಖಂಡರು ಹಾಗೂ ಕಾರ್ಯಕರ್ತರ ಜಂಟಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ಗ್ಯಾರಂಟಿಗಳಿಂದ ರೈತರ ಆರ್ಥಿಕ ಪರಿಸ್ಥಿತಿ ತತ್ತರಿಸಿ ಹೋಗಿದೆ. ಸರಿಯಾಗಿ ವಿದ್ಯುತ್ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ ಎಲ್ಲೆಡೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ ಜನತೆ ರೋಸಿ ಹೋಗಿದ್ದಾರೆ ಕೆರೆಗಳು ಬತ್ತಿ ಹೋಗಿದ್ದು ಅಂತರ್ಜಲ ಪಾತಾಳಕ್ಕೆ ಇಳಿದಿದೆ ಎಂದರು.
ಕಾಂಗ್ರೆಸ್ ಸರ್ಕಾರ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣದಂತೆ ನಡೆದುಕೊಳ್ಳುತ್ತಿದ್ದು, ಅಭಿವೃದ್ಧಿಯಲ್ಲಿ ಹಿನ್ನಡೆ ಕಾಣುತ್ತಿದ್ದೇವೆ ಕಾವೇರಿ ಕೊಳ್ಳದ ನೀರಾವರಿ ಯೋಜನೆಗಳು ಸಹ ಸ್ಥಗಿತಗೊಂಡಿವೆ, ರೈತರು ಹೊಲಗದ್ದೆಗಳಲ್ಲಿ ಬೆಳೆಯುವ ಕಾಂಗ್ರೆಸ್ ಗಿಡವನ್ನು ಕಿತ್ತು ಹಾಕುತ್ತಾರೆ ಹಾಗೆಯೇ ಈ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಿತ್ತು ಹಾಕಬೇಕು ಎಂದು ಹೇಳಿದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಎಚ್ ಡಿ ದೇವೇಗೌಡರ ಸಹಕಾರ ಪಡೆದು ಕೇಂದ್ರ ಸರ್ಕಾರದಿಂದ 16500 ಕೋಟಿ ಅನುದಾನವನ್ನು ತರಲಾಗಿದೆ ಇದು ನಾನು ಮಾಡಿರುವ ಸಾಧನೆ ಅಲ್ಲವೇ ಎಂದು ಕೇಳಿದರು,ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ಬರಲು ರಾಜ್ಯದ 28 ಲೋಕಸಭಾ ಸ್ಥಾನಗಳನ್ನು ಗೆಲ್ಲಬೇಕು ಹಾಸನ ಲೋಕಸಭಾ ಕ್ಷೇತ್ರದ ಮತದಾರರು ನನ್ನನ್ನು ಬೆಂಬಲಿಸಬೇಕು ಎಂದು ಕೋರಿದರು.
ಇದೇ ಸಂದರ್ಭದಲ್ಲಿ ಎಚ್ ಡಿ.ದೇವೇಗೌಡ, ಎಚ್ ಡಿ ರೇವಣ್ಣ ,ಸಿ.ಎನ್.ಬಾಲಕೃಷ್ಣಮಾತನಾಡಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಮಾಜಿ ಮಂತ್ರಿ ಎಚ್ ಡಿ ರೇವಣ್ಣ, ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ, ಶಾಸಕರಾದ ಸಿ ಎನ್ ಬಾಲಕೃಷ್ಣ,ಜೆಡಿಎಸ್ ಪಕ್ಷದ ಮುಖಂಡರಾದ ದೇವರಾಜೇಗೌಡ, ಪರಮ ಕೃಷ್ಣಗೌಡ, ಎಸ್.ಬಿ.ಜಗದೀಶ್, ಅಣತಿ ಆನಂದ್,ಶ್ರೀಕಂಠಪ್ಪ, ಕೆ.ಆರ್.ರಮೇಶ್, ವಡ್ಡರಹಳ್ಳಿ ಗಣೇಶ್ ಗೌಡ,ರಾಚೇನಹಳ್ಳಿ ರತೀಶ್, ಸ್ನೇಹಜೀವಿ ಮಂಜು, ಹೊಸೂರ್ ಚೇತನ್, ಎಳನೀರು ಉದ್ಯಮಿ ಜಗದೀಶ್, ಸಾಗರ್,ಪ್ರವೀಣ್, ಲೋಕೇಶ್, ಮಹೇಶ್,ರೂಪೇಶ್, ಪಿ.ಕೆ. ಮಂಜೇಗೌಡ, ನವೀನ್ ಕುಮಾರ್ ಸೇರಿದಂತೆ ಇತರರು ಹಾಜರಿದ್ದರು.
