
ಹಾಸನ: ಫೆಬ್ರವರಿ – ಮಾರ್ಚ್ ತಿಂಗಳ ೨೦ ದಿನಗಳ ಅವಧಿಯಲ್ಲಿ ಇಡೀ ರಾಜ್ಯದ್ಯಂತ ಕನ್ನಡ ಸಾಹಿತ್ಯದಲ್ಲಿ ಒಂದು ಹೊಸ ಅಧ್ಯಾಯ ರಚಿಸಲಾಯಿತು ಅದೇ ಮಕ್ಕಳ ಸಾಹಿತ್ಯ ಸಂಭ್ರಮ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಎ. ಪ್ರಶಾಂತಬಾಬು ಹೇಳಿದರು.
ನಗರದ ಭಾರತ ಜ್ಞಾನ ವಿಜ್ಞಾನ ಸಮಿತಿಯು ಎವಿಕೆ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಮಕ್ಕಳ ಸಾಹಿತ್ಯ ಸಂಭ್ರಮ ಯಶಸ್ವಿಗೊಳಿಸಿದ ಸಂಪನ್ಮೂಲ ವ್ಯಕ್ತಿಗಳಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಿಗೆ ಅಭಿನಂದನಾ ಪತ್ರ ವಿತರಿಸಿ ಮಾತನಾಡಿ, ಕಲೆ ಮತ್ತು ಸಾಹಿತ್ಯಕ್ಕೆ ಇರುವ ದೊಡ್ಡ ಶಕ್ತಿ ಎಂದರೇ ಅದು ಎಲ್ಲವನ್ನು ಒಳಗೊಳ್ಳುವ ಗುಣ ಅದಕ್ಕೆ ಹೆಣ್ಣು ಗಂಡು ಎನ್ನುವ ಭೇದವಿಲ್ಲ.
ಬಡವ ಶ್ರೀಮಂತ ಎನ್ನುವ ಭೇದವಿಲ್ಲ ದೇಶ ಭಾಷೆಗಳ ಗಡಿಗಳಿಲ್ಲ ಹಾಗಾಗಿ ಕಲೆ ಮತ್ತು ಸಾಹಿತ್ಯ ಮನುಷ್ಯ ಕುಲವನ್ನು ಸೌಹಾರ್ದದ ನೆರಳಿನಲ್ಲಿ ಕಟ್ಟಬಲ್ಲ ಅತಿ ದೊಡ್ಡ ಆಕರಗಳು ಈ ಆಕರಗಳನ್ನ ಎಳೆಯ ವಯಸ್ಸಿನಲ್ಲೇ ಮಕ್ಕಳಲ್ಲಿ ಬೇರೂರಿಸಿದರೆ ನೆಲಕ್ಕೊಂದು ಸಾಂಸ್ಕೃತಿಕ ಪ್ರತಿಭೆಯನ್ನು ಕೊಟ್ಟಂತಾಗುತ್ತದೆ ಎಂದರು.
ಈ ಪರಿಕಲ್ಪನೆಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಆರ್.ಡಿ.ಪಿ.ಆರ್. ಜೊತೆಗೂಡಿ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ನಡೆಸಿದ ಬೃಹತ್ ಮಕ್ಕಳ ಹಬ್ಬವೇ ಮಕ್ಕಳ ಸಾಹಿತ್ಯ ಸಂಭ್ರಮ ಎಂದು ವಿಶ್ಲೇಷಿಸಿದರು.
ಆರ್.ಡಿ.ಪಿ.ಆರ್. ಪ್ರತೀ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥಾಲಯಗಳನ್ನು ತೆರೆದಿದೆ, ಅದಕ್ಕೆ ಬೇಕಾಗಿರುವ ಮೂಲಭೂತ ಪರಿಕರಗಳನ್ನು ಕೂಡ ಒದಗಿಸಿದೆ ಆದರೂ ಗ್ರಂಥಾಲಯಗಳಿಗೆ ಮಕ್ಕಳಾಗಲಿ, ಜನರಾಗಲಿ ಬರುತ್ತಿಲ್ಲ ಏಕೆ ಎಂದು ಯೋಚಿಸುವಾಗ ಕಂಡುಕೊಂಡ ಸತ್ಯ ಗ್ರಂಥಾಲಯಗಳಲ್ಲಿ ಮಕ್ಕಳಿಗೆ ಬೇಕಾದ ಪುಸ್ತಕವಿಲ್ಲ ಎಂಬುದು ಆಗಿದೆ.
ಕನ್ನಡ ಸಾಹಿತ್ಯದಲ್ಲಿ ಶ್ರೀಮಂತ ಸಾಹಿತ್ಯವಿದ್ದರೂ ಮಕ್ಕಳ ಸಾಹಿತ್ಯ ಬಹಳ ಕಡಿಮೆ ಇರುವುದು ಕಂಡುಬಂದಿದೆ. ಹಾಗಾಗಿ ಮಕ್ಕಳ ಸಾಹಿತ್ಯ ರಚನೆ ಮಕ್ಕಳಿಂದಲೇ ಮಾಡಿಸಬೇಕು ಎಂದು ಮನಗಂಡು ಬಿ.ಜಿ.ವಿ.ಎಸ್. ಮಕ್ಕಳಲ್ಲಿಯೇ ಸಾಹಿತ್ಯ ಸೃಷ್ಟಿಸಿ ಪುಸ್ತಕ ಮಾಡಿ ಗ್ರಂಥಾಲಯಗಳಿಗೆ ತುಂಬಬೇಕು ಎಂಬ ಮಹದಾಸೆಯಿಂದ ಮಕ್ಕಳ ಸಾಹಿತ್ಯ ಸಂಭ್ರಮವನ್ನು ಆರ್ ಡಿ ಪಿ ಆರ್ ನೇತೃತ್ವದಲ್ಲಿ ಆಯೋಜಿಸಿತ್ತು.
ಕೇವಲ ೨೦ ದಿನಗಳಲ್ಲಿ ರಾಜ್ಯಾದ್ಯಂತ ೭೩ ಗ್ರಾಮ ಪಂಚಾಯಿತಿಗಳಲ್ಲಿ ಸುಮಾರು ೮೦೦೦ ಮಕ್ಕಳು ಒಂದುವರೆ ಸಾವಿರ ಶಿಕ್ಷಕರು ಕೂಡಿಕೊಂಡು ೨೦,೦೦೦ ಪುಟಗಳ ಮಕ್ಕಳ ಸಾಹಿತ್ಯವನ್ನು ಮಕ್ಕಳು ಒಂದು ಸಾವಿರ ಪುಟಗಳ ಮಕ್ಕಳ ಸಾಹಿತ್ಯವನ್ನು ಶಿಕ್ಷಕರು ರಚಿಸಿರುವುದು ಕನ್ನಡ ಸಾಹಿತ್ಯದ ಒಂದು ಮಹತ್ವ ಘಟ್ಟವೇ ಹೌದು ಎಂದ ಅವರು ಮಕ್ಕಳ ಸಾಹಿತ್ಯ ಸಂಭ್ರಮ ಮಕ್ಕಳಲ್ಲಿ ಮಾತ್ರವಲ್ಲದೆ ಪಂಚಾಯಿತಿ ಅಧಿಕಾರಿಗಳಲ್ಲೂ ಕೂಡ ಸಾಹಿತ್ಯದ ಘಮವನ್ನು ಸೃಷ್ಟಿಸಿದ್ದಂತೂ ಸತ್ಯ ಎಂದು ಹೇಳಿದರು.
ಭಾರತ ಜ್ಞಾನ ವಿಜ್ಞಾನ ಸಮಿತಿಯ ಗೌರವಾಧ್ಯಕ್ಷೆ ಡಾ|| ಎ. ಸಾವಿತ್ರಿ ಮಾತನಾಡಿ, ವೈಜ್ಞಾನಿಕ ಮನೋವೃತ್ತಿ, ಪರಿಸರ ಕಾಳಜಿ, ಆರೋಗ್ಯದ ಚಿಂತನೆ ಹಾಗೂ ಸಾಂವಿಧಾನಿಕ ಮೌಲ್ಯಗಳು ಮಾನವೀಯ ಅಂತಃಕರಣದ ಮುತ್ತುರತ್ನಗಳು ಇವನ್ನು ಜನತೆಯಲ್ಲಿ ಅಚ್ಚೊತ್ತಿಸಲು ಸಾಹಿತ್ಯ ಪರಿಣಾಮಕಾರಿ ಮಾಧ್ಯಮ ಅದರಲ್ಲೂ ಮಕ್ಕಳಲ್ಲಿ ಸಾಹಿತ್ಯದ ಅಭಿವ್ಯಕ್ತಿಯನ್ನ ಎಳೆಯದರಲ್ಲಿಯೇ ಚಿಗುರಿಸಿದರೇ ಆ ಮಗು ಆದರ್ಶ ನಾಗರಿಕನಾಗುವುದರಲ್ಲಿ ಸಂಶಯವಿಲ್ಲ ಎಂದರು.
ಕೇವಲ ಒಂದು ತಿಂಗಳಲ್ಲಿ ಹಾಸನ ಜಿಲ್ಲೆಯ ಎಂಟು ತಾಲೂಕಿನ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ಸುಮಾರು ೯೦೦ ಮಕ್ಕಳಿಗೆ ಸಾಹಿತ್ಯದ ಬೇರೆ ಬೇರೆ ಮಜಲುಗಳಲ್ಲಿ ಬರೆಯುವ ಕೌಶಲ್ಯ ಮೂಡಿಸಿ ಸಾಹಿತ್ಯ ಸೃಷ್ಟಿಸಲು ಕಾರಣಕರ್ತರಾದ ಎಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳ ಸಾಹಿತ್ಯ ಸಂಭ್ರಮದ ಜಿಲ್ಲಾ ಸಂಚಾಲಕಿ ಪ್ರಮೀಳಾ, ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ, ರಾಜ್ಯ ಸಂಪನ್ಮೂಲ ವ್ಯಕ್ತಿ ತನ್ವೀರ್, ಬಿಜಿವಿಎಸ್ ಜಿಲ್ಲಾಧ್ಯಕ್ಷ ಎಚ್.ಟಿ ಗುರುರಾಜು, ಲಾಶಿಕ್ಷಕ ಬಿ.ಎಸ್.ದೇಸಾಯಿ, ಖ್ಯಾತ ಸಾಹಿತಿ ಕಲಾವಿದ ಗ್ಯಾರಂಟಿ ರಾಮಣ್ಣ, ಎವಿಕೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಉಪಸ್ತಿತರಿದ್ದು ಶುಭಾಶಯ ಕೋರಿದರು.
ಬಿಜಿವಿಎಸ್ ಜಿಲ್ಲಾ ಉಪಾಧ್ಯಕ್ಷೆ ಸೌಭಾಗ್ಯ ಕಾರ್ಯಕ್ರಮ. ನಿರೂಪಿಸಿದರು, ಬಿಜಿವಿಎಸ್ ಹಾಸನ ತಾಲ್ಲೂಕು ಕಾರ್ಯದರ್ಶಿ ವನಜಾಕ್ಷಿ ಮೊದಲಿಗೆ ಎಲ್ಲರನ್ನು ಸ್ವಾಗತಿಸಿ ಬಿಜಿವಿಎಸ್ ತಾಲ್ಲೂಕು ಅಧ್ಯಕ್ಷೆ ಆರ್. ರಾಧಾ ವಂದಿಸಿದರು.
