
ಬೇಲೂರು: ವಾರ್ಡ್ ನಂ 5 ಮತ್ತು 6 ರಲ್ಲಿ ಕೋಳಿ ಅಂಗಡಿಗಳನ್ನು ತೆರೆಯಲು ಅನುಮತಿ ಕೊಡಬಾರದು ಎಂದು ಸ್ಥಳೀಯ ನಾಗರೀಕರು ಪುರಸಭೆ ಮುಖ್ಯಾಧಿಕಾರಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಾಂಡುರಂಗ ದೇವಸ್ಥಾನ ಸಮಿತಿ ಅಧ್ಯಕ್ಷ ಭಗವಾನ್ ಮಾತನಾಡಿ, ಪಟ್ಟಣದ ಅಂಬೇಡ್ಕರ್ ಸಮುದಾಯದ ಬಳಿ ಇದ್ದ ಕೋಳಿ ಅಂಗಡಿಗಳನ್ನು ತೆರೆವುಗೊಳಿಸಿರುವುದು ಶ್ಲಾಘನೀಯ
ಆದರೆ ಕೋಳಿ ಅಂಗಡಿ ಮಾಲೀಕರು ನ್ಯಾಯಾಲಯದ ಮೊರೆ ಹೋಗಿ ಮತ್ತೆ ಕೋಳಿ ಅಂಗಡಿ ತೆರೆಯಲು ಪ್ರಯತ್ನಿಸುತ್ತಿದ್ದಾರೆ ಮತ್ತು 5,6ನೇ ವಾರ್ಡ್ ನ ಖಾಸಗಿ ವ್ಯಕ್ತಿಗಳ ಜಾಗದಲ್ಲಿ ಕೋಳಿ ಅಂಗಡಿ ತೆರೆಯಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
5,6ನೇ ವಾರ್ಡ್ ಗಳಲ್ಲಿ ಹಲವಾರು ದೇವಸ್ಥಾನಗಳು ಮತ್ತು ಶಾಲೆಗಳು ಇರುವ ಕಾರಣ ಕೋಳಿ ಅಂಗಡಿ ತೆರೆಯಲು ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದರು.
6 ನೇ ವಾರ್ಡಿನ ನಿವಾಸಿ ಪ್ರಕಾಶ್ ಮಾತನಾಡಿ, ಕೋಳಿ ಅಂಗಡಿಗಳಿಂದ ಹೋಳೆಬೀದಿಯಲ್ಲಿರುವ ಚರಂಡಿಗಳು ಗಬ್ಬುನಾರುತ್ತಿವೆ. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪಾರಿಣಾಮ ಉಂಟಾಗುತ್ತಿದೆ ಎಂದರು.
ಗೃಹಪಯೋಗಿ ಅಂಗಡಿ ಮಾಲೀಕ ಅಬ್ದುಲ್ ಖಾದರ್ ಮಾತನಾಡಿ, ಮೀನಿನ ಮಾರ್ಕೆಟ್ ಬಳಿ ಕೋಳಿ ಅಂಗಡಿಗಳನ್ನು ತೆರೆಯಲು ಪುರಸಭೆಯಿಂದ ಮಳಿಗೆಗಳನ್ನು ನಿರ್ಮಿಸಿದ್ದರು ಅಲ್ಲಿಗೆ ಸ್ಥಳಾಂತರ ಮಾಡಲು ಕೋಳಿ ಅಂಗಡಿ ಮಾಲೀಕರು ಮುಂದಾಗಲಿಲ್ಲ, 5,6ನೇ ವಾರ್ಡ್ ಗಳಲ್ಲಿ ಕೋಳಿ ಅಂಗಡಿ ತೆರೆದರೆ ಪುರಸಭೆ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪುರಸಭೆ ಮುಖ್ಯಾಧಿಕಾರಿ ಇಂದು ಮಾತನಾಡಿ, ಕೋಳಿ ಅಂಗಡಿ ತೆರೆಯಲು ಅನುಮತಿ ನೀಡುವುದಿಲ್ಲ, ನಗರದ ಸ್ವಚ್ಛತೆ ಕಾಪಾಡಲು ಪುರಸಭೆ ಮೊದಲ ಆದ್ಯತೆ ನೀಡುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ 5 ಮತ್ತು 6 ನೇ ವಾರ್ಡಿನ ನಿವಾಸಿಗಳಾದ ವಿನೀಶ್, ಚಂದ್ರೆಗೌಡ, ಗಣೇಶ್, ಪ್ರಮೋದ್, ವೀರೇಂದ್ರ, ಸುಬ್ರಮಣ್ಯ, ಕೇಶವಮೂರ್ತಿ, ಹಾಗೂ ರುಕ್ಮಿಣಿ ಪಾಂಡುರಂಗಸ್ವಾಮಿದೇವಸ್ಥಾನ, ಕನ್ನಿಕಾ ಪರಮೇಶ್ವರಿ ದೇವಸ್ಥಾನ, ವೀರಾಂಜನೇಯ, ದೇವಸ್ಥಾನ, ಹೊಯ್ಸಳ ಮತ್ತು ಬಾಪುಜಿ ಶಾಲೆಗಳ ಮುಖ್ಯಸ್ಥರು ಇದ್ದರು.
ಬೇಲೂರಿನ ವಾರ್ಡ್ ನಂ 5 ಮತ್ತು 6 ರಲ್ಲಿ ಕೋಳಿ ಅಂಗಡಿಗಳನ್ನು ತೆರೆಯಲು ಅನುಮತಿ ಕೊಡಬಾರದು ಎಂದು ಸ್ಥಳೀಯ ನಾಗರೀಕರು ಪುರಸಭೆ ಮುಖ್ಯಾಧಿಕಾರಿ ಇಂದು ಅವರಿಗೆ ಮನವಿ ಸಲ್ಲಿಸಿದರು.
ಪ್ರಮುಖರಾದ ಭಗವಾನ್, ಅಬ್ದುಲ್ ಖಾದರ್, ಪ್ರಕಾಶ್ ಇದ್ದರು.
