ಹಾಸನ : ಏಪ್ರಿಲ್ ೨೬ ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನಿಂದ ಅಭ್ಯರ್ಥಿಯಾಗಿ ಶ್ರೇಯಸ್ ಪಟೇಲ್ ಅವರು ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಸಿ. ಸತ್ಯಭಾಮ ಅವರಿಗೆ ನಾಮಪತ್ರ ಸಲ್ಲಿಸಿದರು. ನಂತರ ಬೃಹತ್ ಮೆರವಣಿಗೆಯಲ್ಲಿ ಬಹಿರಂಗ ಭಾಷಣ ಮಾಡಿದರು.

ಸೋಮವಾರದಂದು ಮೊದಲ ಎರಡು ಸೆಟ್ ನಾಮಪತ್ರವನ್ನು ಗೃಹಸಚಿವ ಜಿ. ಪರಮೇಶ್ವರ್, ಸಹಕಾರ ಸಚಿವ ಕೆ.ಎನ್. ರಾಜಣ್ಣ, ರಾಜ್ಯ ಗೃಹಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ, ಮಾಜಿ ಸಚಿವ ಬಿ. ಶಿವರಾಮ್ ಉಪಸ್ಥಿತಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಕೆ ಮಾಡಲಾಯಿತು.

ಒಟ್ಟು ನಾಲ್ಕು ಸೆಟ್ ನಾಮಪತ್ರ ಸಲ್ಲಿಸಲು ಸಿದ್ಧಪಡಿಸಿಕೊಳ್ಳಲಾಗಿದ್ದರೂ ಮೊದಲ ಎರಡು ಸೆಟ್ ನೀಡಿದ ಬಳಿಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆ ಉಳಿದೆರಡು ಸೆಟ್ ನಾಮಪತ್ರ ಸಲ್ಲಿಸಲು ಕಾಯಲಾಗಿದ್ದು, ಆದರೇ ತಡವಾಗಿ ಆಗಮಿಸಿದ್ದರಿಂದ ಅವಸರದಲ್ಲಿ ಬಂದು ಮೆರವಣಿಗೆಯಲ್ಲಿ ಪಾಲ್ಗೊಂಡರು. ಆದರೇ ಮತ್ತೊಮ್ಮೆ ನಾಮಪತ್ರ ಸಲ್ಲಿಸಲು ಸಾಧ್ಯವಾಗಲಿಲ್ಲ.

ನಗರದ ಡೈರಿ ವೃತ್ತದಿಂದ ಹೊರಟ ಬೃಹತ್ ಕಾಂಗ್ರೆಸ್ ಕಾರ್ಯಕರ್ತರ ಮೆರವಣಿಗೆಯಲ್ಲಿ ತೆರೆದ ವಾಹನದೊಳಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹಸಚಿವ ಜಿ. ಪರಮೇಶ್ವರ್, ಸಹಕಾರ ಸಚಿವ ಕೆ.ಎನ್. ರಾಜಣ್ಣ, ರಾಜ್ಯ ಗೃಹಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ, ಮಾಜಿ ಸಚಿವ ಬಿ. ಶಿವರಾಮ್, ಅಭ್ಯರ್ಥಿ ಶ್ರೇಯಸ್ ಪಟೇಲ್ ಹಾಗೂ ತಾಯಿ ಅನುಪಮಾ ಇತರರು ಭಾಗವಹಿಸಿದ್ದು, ಮೆರವಣಿಗೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಡಿಜಿ ಸೌಂಡ್ ಹಾಗೂ ಬ್ಯಾಂಡ್ ಸೆಟ್ ಗೆ ಕುಣಿದು ಕುಪ್ಪಳಿಸಿದರು.

ಅಷ್ಟೊಂದು ಬಿಸಿಲಿದ್ದರೂ ಯಾವುದನ್ನು ಲೆಕ್ಕಿಸದೇ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಇನ್ನು ಅನೇಕರು ನೆರಳಿನ ಆಶ್ರಯ ಪಡೆಯಲು ಬೃಹತ್ ಕಟ್ಟಡದ ಮೇಲೆ ಕುಳಿತುಕೊಂಡು ವೀಕ್ಷಣೆ ಮಾಡಿದರು.

ಗಂಟೆ ಗಟ್ಟಲೆ ಮೆರವಣಿಗೆ ನಡೆದಿದ್ದರಿಂದ ಬಿ.ಎಂ. ರಸ್ತೆ ಮೂಲಕ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ತುರ್ತಾಗಿ ತಲುಪಬೇಕಾದವರು ಬದಲಿ ರಸ್ತೆ ಮೂಲಕ ಅಲೆದಾಡಿ ಹೋಗಬೇಕಾಯಿತು. ಬೆಳಗಿನಿಂದ ಕಾದಿದ್ದ ಕಾಂಗ್ರೆಸ್ ಕಾರ್ಯಕರ್ತರು ಬಿ.ಎಂ. ರಸ್ತೆ ಉದ್ದಲಕ್ಕೂ ಇದ್ದ ಮದ್ಯದಂಗಡಿಗೆ ಕಾಲಿಟ್ಟರು.

ಇನ್ನು ಹೋಟೇಲ್ ಗಳು, ಬಾರ್ ಅಂಡ್ ರೆಸ್ಟೋರೆಂಟ್ ಫುಲ್ ರಶ್ ಆಗಿರುವುದು ಕಂಡು ಬಂದಿತು. ದಾರಿಗಳಲ್ಲೆ ಎಣ್ಣೆ ಬಾಡೂಟ ಸೇವಿಸಿದರು. ಇದಕ್ಕೆ ಮೊದಲು ಗೃಹ ಸಚಿವ ಜಿ. ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರು ಹಾಸನಕ್ಕೆ ಆಗಮಿಸುವ ವೇಳೆ ಶಾಂತಿಗ್ರಾಮದ ಚೆಕ್ ಪೋಸ್ಟ್ ನಲ್ಲಿ ತಡೆದು ಚುನಾವಣಾಧಿಕಾರಿಗಳು ವಾಹನಗಳ ತಪಾಸಣೆ ನಡೆಸಿ ನಂತರ ಮುಂದೆ ಹೋಗಲು ಅನುವು ಮಾಡಿಕೊಟ್ಟರು.

ಕಾಂಗ್ರೆಸ್ ನಾಯಕರು ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿ ಮುಂದೆ ಬಿ.ಎಂ. ರಸ್ತೆ ಮಧ್ಯೆ ಬಹಿರಂಗ ಭಾಷಣ ಮಾಡಿದರು.ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಹಿರಂಗ ಭಾಷಣದಲ್ಲಿ ಮಾತನಾಡಿ, ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ ಚುನಾವಣೆಯ ಕುರಿತು ಜನತೆ ನೋಡುತ್ತಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಮೊಮ್ಮಗನನ್ನು ಹಾಸನದಿಂದ ನಿಲ್ಲಿಸಿದರೇ, ಮಂಡ್ಯದಲ್ಲಿ ಮಗನನ್ನು ನಿಲ್ಲಿಸಿದ್ದಾರೆ. ತನ್ನ ಅಳಿಯನನ್ನು ಬಿಜೆಪಿಯಿಂದ ಬೆಂಗಳೂರು ಗ್ರಾಮಾಂತರದಲ್ಲಿ ನಿಲ್ಲಿಸಿದ್ದಾರೆ. ಒಂದೇ ಕುಟುಂಬದಿಂದ ಮೂವರು ನಿಲ್ಲಿಸಲಾಗಿದ್ದು, ಈ ಕ್ಷೇತ್ರಕ್ಕೆ ಬೇರೆ ಯಾರೂ ಇರಲಿಲ್ಲವೆ ಎಂದು ಪ್ರಶ್ನಿಸಿದರು.

ಈ ಹಿಂದೆ ನನ್ನ ತಮ್ಮ ಡಿ.ಕೆ. ಸುರೇಶ್ ಗೆ ಟಿಕೆಟ್ ಕೊಟ್ಟರು. ಬಿಜೆಪಿ ಜನತಾದಳವರು ಒಂದಾಗಿ ನಿಲ್ಲಿಸಿದ್ದರು. ಡಿ.ಕೆ. ಸುರೇಶ್ ಅವರು ಒಂದುವರೆ ಲಕ್ಷದ ಅಂತರದಿಂದ ಗೆದ್ದರು. ಅನಿತಾ ಕುಮಾರಸ್ವಾಮಿ ವಿರುದ್ಧ ನಮಗೆ ರಾಜಕೀಯ ಹೊಸದೇನಲ್ಲ. ಅವರ ಪಕ್ಷ, ಅಳಿಯ ಶಕ್ತಿಶಾಲಿ ಆಗಿದ್ದರೆ ಅವರ ಪಕ್ಷದಿಂದ ನಿಲ್ಲಿಸುತ್ತಿದ್ದರು ಎಂದರು. ಜೆಡಿಎಸ್ ಪಕ್ಷವು ತನ್ನ ಶಕ್ತಿ ಕಳೆದುಕೊಂಡಿದೆ. ಆಗಾಗಿ ಈ ರಾಜ್ಯದಲ್ಲಿ ಹೊಂದಾಣಿಕೆ ನಡೆಯುತ್ತಿದೆ.

ಯಾರು ಅಧಿಕಾರದಿಂದ ಇಳಿಸಿದ್ರು ಅವರ ಜೊತೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಟೀಕಿಸಿದರು. ಯಡಿಯೂರಪ್ಪ ಅವರನ್ನು ಜೈಲಿಗೆ ಕಳ್ಸಿದ್ದು ಅವರ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ನಾನು, ಜಿ.ಟಿ. ದೇವೇಗೌಡ, ಶಿವಲಿಂಗೇಗೌಡ ಮೈತ್ರಿ ಸರ್ಕಾರ ಉಳಿಸಲು, ಕುಮಾರಸ್ವಾಮಿ ಉಳಿಸಲು ಬಾಂಬೆಗೆ ಹೋಗಿದ್ದೆವು. ಈಗ ಕುಮಾರಸ್ವಾಮಿ ಹೇಳ್ತಾ ಇದ್ದಾರೆ. ಸರ್ಕಾರ ನಾವು ಬೀಳ್ಸಿದ್ರು ಎನ್ನುತ್ತಾರೆ.

ಈ ಹಾಸನಾಂಬೆ ಮೇಲೆ ಸತ್ಯ ಮಾಡಿ ಕುಮಾರಸ್ವಾಮಿ ನಿಜ ಹೇಳಬೇಕು. ನಾನು ಹಾಸನಾಂಬೆ ಮೇಲೆ ಆಣೆ ಮಾಡಿ ಹೇಳುತ್ತಿದ್ದೇನೆ. ನಾವು ತಾಯಿಗೆ ದ್ರೋಹ ಮಾಡುವ ಮಕ್ಕಳಲ್ಲ. ಹೋರಾಟ ಮಾಡುವ ಮಕ್ಕಳು. ತಾಯಿ ಹಾಸನಾಂಬೆ ಆಶೀರ್ವಾದ ಶ್ರೇಯಸ್ ಪಟೇಲ್ ಮೇಲೆ ಇದೆ. ಒಂದು ಲಕ್ಷಕ್ಕೂ ಹೆಚ್ಚಿನ ಮತಗಳಿಂದ ಶ್ರೇಯಸ್ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗೃಹಸಚಿವ ಜಿ. ಪರಮೇಶ್ವರ್ ಮಾತನಾಡಿ, ಕಾಂಗ್ರೆಸ್ ಪಕ್ಷವು ಕಳೆದ ೩೦ ವರ್ಷದ ಹಿಂದೆ ಹಾಸನ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆದ್ದಿತ್ತು. ಈ ಬಾರಿ ನಿಮ್ಮೆಲ್ಲರ ಆಶೀರ್ವಾದದಿಂದ ಶ್ರೇಯಸ್‌ಪಟೇಲ್ ಗೆಲ್ಲುತ್ತಾರೆ. ನಾವು ದೇಶದಲ್ಲಿ ಧರ್ಮ ಯುದ್ದಕ್ಕೆ ಕಾಲಿಡುತ್ತಿದ್ದು, ಕಾಂಗ್ರೆಸ್ ಪಕ್ಷ ಧರ್ಮದಿಂದ, ಜಾತಿಯಿಂದ ದೇಶವನ್ನು ಕಟ್ಟಿದೆ. ಆದರೆ ಇದೇ ದೇಶದಲ್ಲಿ ಬಿಜೆಪಿ ಧರ್ಮ, ಜಾತಿಗಳನ್ನು ಒಡೆಯುತ್ತಿದೆ ಎಂದು ದೂರಿದರು.

ಅಂಬೇಡ್ಕರ್ ಸಂವಿಧಾನವನ್ನು ನೀಡಿದ್ದಾರೆ. ಸಂವಿಧಾನ, ಪ್ರಜಾಪ್ರಭುತ್ವ ಉಳಿಸಿಕೊಳ್ಳಬೇಕಾದರೆ ಕಾಂಗ್ರೆಸ್ ಪಕ್ಷ ಗೆಲ್ಲಬೇಕು ಎಂದರು.

ಕಳೆದ ೫೦ ವರ್ಷದಿಂದ ಹಾಸನ ಜಿಲ್ಲೆಯಲ್ಲಿ ಒಂದು ಕುಟುಂಬ ರಾಜಕಾರಣ ಮಾಡುತ್ತಾ ಇದ್ದು, ಈ ಚುನಾವಣೆಯಲ್ಲಿ ಕುಟುಂಬ ರಾಜಕಾರಣ ಅಂತ್ಯವಾಗಬೇಕು. ಶ್ರೇಯಸ್‌ಪಟೇಲ್ ಅಧಿಕ ಮತಗಳಿಂದ ಗೆಲ್ಲಬೇಕು. ಬಡವರ, ರೈತರು, ಮಹಿಳೆಯರ ಪರವಾಗಿ ಕಾರ್ಯಕ್ರಮ ಕೊಟ್ಟು ನುಡಿದಂತೆ ನಡೆದಿದ್ದೇವೆ. ಇಡೀ ದೇಶದಲ್ಲಿ ಜನ ಬದಲಾವಣೆ ಬಯಸುತ್ತಿದ್ದಾರೆ, ಅದೇ ರೀತಿ ಹಾಸನ ಜಿಲ್ಲೆಯಲ್ಲೂ ಜನರು ಬದಲಾವಣೆ ಬಯಸುತ್ತಿದ್ದಾರೆ ಎಂದರು.

ಮತದಾರರ ನಿರೀಕ್ಷೆಯಂತೆ ಶ್ರೇಯಸ್ ಪಟೇಲ್ ಸ್ಪಂದಿಸಲಿದ್ದಾರೆ ಎಂದು ಭರವಸೆ ನೀಡಿದರು. ಕೃಷಿ ಸಚಿವ ಚೆಲುವರಾಯಸ್ವಾಮಿ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಯಾವ ಭಿನ್ನಾಭಿಪ್ರಾಯಗಳಿಲ್ಲ. ಹಾಸನ ಜಿಲ್ಲೆಯಲ್ಲಿ ಒಂದು ಬದಲಾವಣೆಯ ಗಾಳಿ ಬೀಸಿದ್ದು, ಶ್ರೀಕಂಠಯ್ಯ, ಪುಟ್ಟಸ್ವಾಮಿ ಗೌಡರ ಕುಟುಂಬದ ಶ್ರೇಯಸ್ ಪಟೇಲ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಲಾಗಿದ್ದು, ಹೆಚಿನ ಮತಗಳೊಂದಿಗೆ ಗೆಲ್ಲಿಸಿಕೊಂಡು ಬರುವಂತೆ ಮನವಿ ಮಾಡಿದರು.

ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಾಸ್ ಪಟೇಲ್ ತಾಯಿ ಅನುಪಮಾ ಮಹೇಶ್ ಉದ್ದೇಶಿಸಿ ಮಾತನಾಡಿ, ನನ್ನ ಮಗನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ, ಈ ಬಾರಿಯಾದರೂ ಗೆಲ್ಲಿಸಿ ಎಂದು ಕಣ್ಣೀರಿಡುತ್ತಾ ಸೆರಗೊಡ್ಡಿ ಬೇಡಿದರು. ಮೂರು ಬಾರಿ ಅವರ ಮುಂದೆ ಮಂಡಿಯೂರಿದ್ದೇವೆ. ಈ ಬಾರಿಯಾದರೂ ನನ್ನ ಮಗನನ್ನು ಗೆಲ್ಲಿಸಿಕೊಡಿ ಎಂದು ಭಾವನಾತ್ಮಕವಾಗಿ ಕೋರಿದರು.

ಪಂಚಾಯಿತಿಯಿಂದ ಪ್ರಧಾನಿವರೆಗೂ ಅವರಿಗೆ ಅಧಿಕಾರ ನೀಡಿದ್ದೀರಿ, ನನಗೆ ಇರುವುದು ಒಬ್ಬನೇ ಮಗ. ಮೂರು ಚುನಾವಣೆಗಳಲ್ಲಿ ನಮ್ಮನ್ನು ಸೋಲಿಸಿದ್ದೀರಿ. ಮೂರು ಬಾರಿ ಅವರ ಮುಂದೆ ಮಂಡಿಯೂರಿದ್ದೇವೆ. ಈ ಬಾರಿಯಾದರೂ ನನ್ನ ಮಗನನ್ನು ಗೆಲ್ಲಿಸಿಕೊಡಿ. ನನ್ನ ಮಗನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮತದಾರರಲ್ಲಿ ಮನವಿ ಮಾಡಿದರು.

ರಾಜ್ಯ ಗೃಹ ಮಂಡಳಿ ಅಧ್ಯಕ್ಷರಾದ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ನಾನು ಮಂತ್ರಿ ಆಗಬೇಕು ಎಂಬುದು ಜಿಲ್ಲೆಯ ಜನತೆಯ ಬಯಕೆ ಆಗಿದ್ದು, ಆದರೇ ನಾನು ಮಂತ್ರಿ ಆಗಬೇಕಾದರೇ ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಮೆರವಣಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ, ಕಾಂಗ್ರೆಸ್ ಎಂಪಿ ಅಭ್ಯರ್ಥಿ ಶ್ರೇಯಸ್ ಪಟೇಲ್, ಹಿರಿಯ ಕಾಂಗ್ರೆಸ್ ಮುಖಂಡ ಬಿ. ಶಿವರಾಂ, ಪಕ್ಷದ ಮುಖಂಡರಾದ ಹೆಚ್.ಕೆ. ಮಹೇಶ್, ಬನವಾಸೆ ರಂಗಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ಮುರುಳಿ ಮೋಹನ್, ಅಶೋಕ್, ಜಾವಗಲ್ ಮಂಜುನಾಥ್, ವಿನಯ್ ಗಾಂಧಿ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *