
ಹಾಸನ: ಸಮಾಜದಲ್ಲಿ ಬೇರೂರಿದ್ದ ಅಸಮಾನತೆಯನ್ನು ಹೋಗಲಾಡಿಸಲು ಉಕ್ಕಿನ ಮನುಷ್ಯ ಡಾ. ಬಾಬು ಜಗಜೀವನ ರಾಮ್ ಅವರ ಶ್ರಮ ಅಪಾರವಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಡಾ. ಬಾಬು ಜಗಜೀವನ ರಾಮ್ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ತಳ ಸಮುದಾಯವನ್ನು ಮೇಲೆತ್ತುವ ಸಲುವಾಗಿ ಬಾಬು ಜಗಜೀವನ ರಾಮ್ ಹಲವಾರು ಕಾರ್ಯಕ್ರಮ ನೀಡಿದ್ದು, ಹಸಿರು ಕ್ರಾಂತಿಯ ಹರಿಕಾರರಾಗಿ, ಬಡವರ ಕೂಲಿ ಕಾರ್ಮಿಕರ ಪರವಾಗಿ ಅನೇಕ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ ಕೀರ್ತಿ ಬಾಬು ಜಗಜೀವನ್ ರಾಮ್ ಅವರಿಗೆ ಸಲ್ಲುತ್ತದೆ ಎಂದರು.
ಬಾಬು ಜಗಜೀವನ್ ರಾಮ್ ಅವರ ಹಾದಿಯಲ್ಲಿ ಎಲ್ಲರೂ ನಡೆದು ಸಮ ಸಮಾಜ, ಅರ್ಥಪೂರ್ಣ ಸಾಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡೋಣ ಎಂದು ಕರೆ ನೀಡಿದರು. ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ.
ಮಾಜಿ ಉಪಪ್ರಧಾನಿಗಳಾಗಿ ಹಾಗೂ ಕಾರ್ಮಿಕ ಖಾತೆಯ ಸಚಿವರಾಗಿ ಉತ್ತಮ ಕಾರ್ಯಕ್ರಮಗಳನ್ನು ನಮಗೆಲ್ಲಾ ನೀಡಿದ್ದಾರೆ ಎಂದರು. ಹಸಿರು ಕ್ರಾಂತಿಯ ಹರಿಕರರಾಗಿ ಜನರಿಗೆ ಹತ್ತಿರವಾಗಿದ್ದರು ಎಂದು ಹೇಳಿದರು.
ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡಿ ಜಗಜೀವನ್ ರಾಮ್ ಅವರ ಅವರ ತತ್ವ ಆದರ್ಶದ ಬಗೆ ಜನರಿಗೆ ತಿಳಿಸುವ ಕೆಲಸ ಮಾಡೋಣ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ ಮಾತನಾಡಿ, ಬಾಬು ಜಗಜೀವನ್ ರಾಮ್ ಅವರು ೧೯೪೫ರಲ್ಲಿ ಕಾರ್ಮಿಕ ಖಾತೆಯ ಸಚಿವರಾಗಿ ನೇಮಕವಾಗಿದ್ದಾಗ ಕಾರ್ಮಿಕರ ಪರವಾಗಿ ಅನೇಕ ಕಾಯಿದೆ ಹಾಗೂ ಯೋಜನೆಗಳನ್ನು ಜಾರಿಗೆ ತಂದರು. ಆರ್ಥಿಕವಾಗಿ, ಸಾಮಾಜಿಕವಾಗಿ ಕಾರ್ಮಿಕ ಕಾರ್ಮಿಕರು ಕೂಡ ಮುನ್ನೆಲೆಗೆ ಬರಬೇಕು ಎಂಬ ದೃಷ್ಟಿಯಿಂದ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿದರು.
ಬಾಬು ಜಗಜೀವನ ರಾಮ್ ಅವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು ಈ ಭಾರತ ದೇಶದ ಪ್ರತಿನಿಧಿಯಾಗಿ ಬಡವರ ಪ್ರತಿನಿಧಿಯಾಗಿ ಸಂವಿಧಾನದ ಆಶಯದಂತೆ ಕೆಲಸ ಮಾಡಿ ಬಡವರಿಗೆ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಕಲ್ಪಿಸಿಕೊಡುವ ಸಲುವಾಗಿ ಕೆಲಸ ಮಾಡಿದ್ದಾರೆ ಅದರ ಪರಿಣಾಮವಾಗಿಯೇ ಇಂದು ನಾವು ನೀವೆಲ್ಲರೂ ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದರು.
ಕನಿಷ್ಠ ಕೂಲಿ ಕಾಯ್ದೆ, ರಾಜ್ಯ ಕಾರ್ಮಿಕ ವಿಮಾ ಕಾಯ್ದೆ, ತೋಟಗಾರಿಕಾ ಕಾರ್ಮಿಕರ ವಿಮಾ ಕಾಯ್ದೆ, ಸೇರಿದಂತೆ ಅನೇಕ ಕಾಯ್ದೆಗಳನ್ನು ತಂದು ಬಡವರನ್ನು ಮೇಲೆತ್ತುವ ಕೆಲಸ ಮಾಡಿದ್ದಾರೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರು ಪ್ರಮುಖ ಸಮಿತಿಗಳಲ್ಲಿ ಕೆಲಸ ಮಾಡಿರುವ ಬಾಬು ಜಗಜೀವನ ರಾಮ್ ದೇಶದಲ್ಲಿ ಬರಗಾಲ ಬಂದು ಆಹಾರಕ್ಕೆ ತೊಂದರೆಯಾದಾಗ ಹಸಿರು ಕ್ರಾಂತಿ ಮೂಲಕ ದೇಶದ ಜನರ ಹಸಿವು ನೀಗಿಸುವ ಕೆಲಸ ಮಾಡಿದ್ದಾರೆ ಎಂದು ಕಿವಿಮಾತು ಹೇಳಿದರು.
ನೀರಾವರಿ ಸಚಿವರಾಗಿ ಅಂದಿನ ಕಾಲದಲ್ಲಿ ಉತ್ತಮ ಬಿತ್ತನೆ ಬೀಜ ಪೂರೈಕೆ, ಮಾರುಕಟ್ಟೆ ವ್ಯವಸ್ಥೆ, ರಸಗೊಬ್ಬರಗಳ ಸಮಗ್ರ ಪೂರೈಕೆ ಹೀಗೆ ಎಲ್ಲಾ ಆಯಾಮಗಳಲ್ಲಿಯೂ ಯೋಚಿಸಿ ಕೃಷಿ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ತಂದಿದ್ದಾರೆ. ಪ್ರಮುಖವಾಗಿ ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದು ಭೂ ರೈತರಿಗೆ ಭೂಮಿಯನ್ನು ಒದಗಿಸುವ ಕೆಲಸ ಮಾಡಿದ್ದಾರೆ ಎಂದು ಸಲಹೆ ನೀಡಿದರು.
ಬಾಬೂ ಜಗಜೀವನ ರಾಮ್ ಅವರ ಆಶಯ ಹಾಗೂ ದೂರದೃಷ್ಟಿಯನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಬಾಬು ಜಗಜೀವನ ರಾಮ್ ಅವರ ಸಾಧನೆಗಳ ಕಿರು ಹೊತ್ತಿಗೆ ಯನ್ನು ಜನರಿಗೆ ಹಂಚುವ ಮೂಲಕ ಅವರ ಸಾಧನೆಗಳನ್ನು ಹೆಸರಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಈ. ಕೃಷ್ಣೇಗೌಡ, ಡಿ.ಎಫ್.ಓ. ಸೌರಭ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ್, ಹಾಗೂ ಸಮುದಾಯದ ಮುಖಂಡರು ಸೇರಿದಂತೆ ಇತರರು ಉಪಸ್ಥಿತರಿದ್ದರು.



