
ಚನ್ನರಾಯಪಟ್ಟಣ: ತಾಲೂಕಿನ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸಿ ಎನ್ ಬಾಲಕೃಷ್ಣ ಅವರ ಹುಟ್ಟು ಹಬ್ಬದ ಅಂಗವಾಗಿ ನಾಡಪ್ರಭು ಕೆಂಪೇಗೌಡ ವೇದಿಕೆ ವತಿಯಿಂದ ಪಟ್ಟಣದ ಮಾತೃಭೂಮಿ ವೃದ್ಧಾಶ್ರಮದಲ್ಲಿ ಕೇಕ್ ಕತ್ತರಿಸುವ ಮೂಲಕ ಸರಳವಾಗಿ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು.
ಮಾತೃಭೂಮಿ ವೃದ್ಧಾಶ್ರಮದ ಹಿರಿಯ ಜೀವಗಳಿಗೆ ಬೆಳಗಿನ ಉಪಹಾರ ವಿತರಣೆ ಮಾಡಿ ಮಾತನಾಡಿದ ಶಾಸಕರಾದ ಸಿ ಎನ್ ಬಾಲಕೃಷ್ಣರವರು ನನ್ನ ಹುಟ್ಟು ಹಬ್ಬವನ್ನು ತುಂಬಾ ಅರ್ಥಪೂರ್ಣವಾಗಿ ಹಾಗೂ ಸರಳವಾಗಿ ಮಾತೃಭೂಮಿ ವೃದ್ಧಾಶ್ರಮದಲ್ಲಿ ಆಚರಣೆ ಮಾಡಿಕೊಂಡಿರುವುದು ನನ್ನ ಮನಸ್ಸಿಗೆ ತುಂಬಾ ಸಂತೋಷವನ್ನು ಉಂಟುಮಾಡಿದೆ, ನನ್ನ ಹುಟ್ಟು ಹಬ್ಬವನ್ನು ಇಂತಹ ಹಿರಿಯ ಜೀವಗಳ ಸಮ್ಮುಖದಲ್ಲಿ ಹುಟ್ಟು ಹಬ್ಬದ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವ ನಾಡಪ್ರಭು ಕೆಂಪೇಗೌಡ ವೇದಿಕೆಯ ಅಧ್ಯಕ್ಷರಾದ ಆನಂದ್ ಅವರಿಗೆ ಹಾಗೂ ಕೆಂಪೇಗೌಡ ವೇದಿಕೆಯ ಪದಾಧಿಕಾರಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಮುಂದಿನ ದಿನಗಳಲ್ಲಿ ಮಾತೃಭೂಮಿ ವೃದ್ರಾಶ್ರಮಕ್ಕೆ ಹೆಚ್ಚಿನ ರೀತಿಯ ಸಹಕಾರ ಮಾಡುವುದಾಗಿ ಭರವಸೆ ನೀಡಿದರು.
ಕಾಳೆನಹಳ್ಳಿ ಆನಂದ್ ಮಾತನಾಡಿ ನಮ್ಮ ಜನಪ್ರಿಯ ಹ್ಯಾಟ್ರಿಕ್ ಶಾಸಕರಾದ ಬಾಲಣ್ಣನವರಿಗೆ ತಾಯಿ ಚಾಮುಂಡೇಶ್ವರಿ ಹಾಗೂ ಒಳಗೆರಮ್ಮ ಆಯಸ್ಸು, ಆರೋಗ್ಯ, ಅಧಿಕಾರವನ್ನು ಕೊಟ್ಟು ಈ ತಾಲೂಕಿನ ಜನತೆಯ ಸೇವೆ ಮಾಡುವ ಶಕ್ತಿಯನ್ನು ನೀಡಲಿ, ಶ್ರವಣಬೆಳಗೊಳ ಕ್ಷೇತ್ರದ ಅಭಿವೃದ್ಧಿಗಾಗಿ ದಿನದ 18 ಗಂಟೆಗಳ ಕಾಲ ನಿರಂತರವಾಗಿ ಶ್ರಮಿಸುತ್ತಿರುವ ಬಡವರಬಂಧು, ದೀನ ದಲಿತರ ಆಶಾಕಿರಣ, ನೊಂದವರ ಧ್ವನಿಯಾದ ಬಾಲಣ್ಣನವರಿಗೆ ಇನ್ನು ಹೆಚ್ಚಿನ ಶಕ್ತಿಯನ್ನು ನೀಡಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಶಾಸಕರಾದ ಸಿ ಎನ್ ಬಾಲಕೃಷ್ಣ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸಿ ಕೆ ಕುಸುಮಾರಾಣಿ, ನಾಡಪ್ರಭು ಕೆಂಪೇಗೌಡ ವೇದಿಕೆಯ ಸಂಸ್ಥಾಪಕ ರಾಜ್ಯ ಅಧ್ಯಕ್ಷರಾದ ಕಾಳೆನಹಳ್ಳಿ ಆನಂದ್, ಜೈಹಿಂದ್ ನಾಗಣ್ಣ ಹಾಗೂ ಡಿ ಕಾಳೆನಹಳ್ಳಿ ಗ್ರಾಮಸ್ಥರು ಹಾಜರಿದ್ದರು.





