
ಹಾಸನ: ರಾಹುಲ್ ಗಾಂಧಿ ಪ್ರಚಾರಕ್ಕೆ ಬಂದರೇ ನಾನೂರು ಸ್ಥಾನವಲ್ಲ ಐನೂರು ಸ್ಥಾನವನ್ನು ಗೆಲ್ಲುತ್ತೇವೆ. ಅವರು ಬಂದರೇ ಏನು ಬದಲಾವಣೆ ಆಗುವುದಿಲ್ಲ ಎಂದು ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿಶ್ವಾಸವ್ಯಕ್ತಪಡಿಸಿದರು.
ನಗರದ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದಲ್ಲಿ ರಾಹುಲ್ ಗಾಂಧಿ ಪ್ರವಾಸ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಅವರು ಬಂದಿದ್ದು ಗೊತ್ತಾಗಲ್ಲ, ಹೋಗಿದ್ದು ಗೊತ್ತಾಗಲ್ಲ, ರಾಹುಲ್ ಗಾಂದಿ ಬಂದರೆ ನಾನೂರು ಅಲ್ಲ ಐನೂರು ಸ್ಥಾನ ಗೆಲ್ತೇವೆ. ನಾವು ಅವರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಜನರು ಮೋದಿಯವರು ಮೂರನೆ ಬಾರಿಗೆ ಗೆಲ್ಲಬೇಕು ಎಂದು ಬಯಸಿದ್ದಾರೆ. ಹಾಗಾಗಿ ಅವರ ಸಹಕಾರದೊಂದಿಗೆ ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡುತ್ತೇವೆ.
ಮಂಡ್ಯದಲ್ಲಿ ರಾಹುಲ್ ಗಾಂದಿ ಪ್ರವಾಸ ವಿಚಾರವಾಗಿ ಮಾತನಾಡಿ, ಅವರು ಬಂದ ಕೂಡಲೆ ಬದಲಾಗುತ್ತೆ ಎನ್ನೋದು ಸುಳ್ಳು. ರಾಹುಲ್ ಗಾಂಧಿ ವರ್ಚಸ್ಸು ದಿನೇ ದಿನೆ ಕಡಿಮೆ ಆಗ್ತಿದೆ. ಅವರ ನಡವಳಿಕೆ, ಯೋಜನೆ, ಯೋಚನೆ ದೇಶಕ್ಕೆ ಪೂರಕವಾಗಿಲ್ಲ. ಜನರು ಎಲ್ಲವನ್ನು ನೋಡುತ್ತಿದ್ದು, ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಜಗತ್ತಿಗೆ ಗೊತ್ತಾಗಲ್ಲ ಎನ್ನೋ ಪರಿಸ್ಥಿತಿ ಇಲ್ಲ.ರಾಜ್ಯಕ್ಕೆ ಯಾರು ಬೇಕು? ದೇಶಕ್ಕೆ ಯಾರು ಬೇಕು ಎಂದು ಜನರು ಯೋಚನೆ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ಈ ರಾಜ್ಯ ಸರ್ಕಾರದ ವಿರುದ್ದ ನಿಲ್ಲೋ ಕಾಲ ಬರುತ್ತದೆ ಎಂದು ಭವಿಷ್ಯ ನುಡಿದರು.
ಲೋಕಸಭಾ ಚುನಾವಣೆಯಲ್ಲಿ ಹಾಸನದ ವಿವಿಧ ಭಾಗಗಳಲ್ಲಿ ಅದ್ಭುತವಾಗಿ ಪ್ರಚಾರ ನಡೆಯುತ್ತಿದ್ದು, ಹೆಣ್ಣು ಮಕ್ಕಳೇ ಸ್ವಯಂ ಸ್ಪೂರ್ತಿಯಿಂದ ಬಂದು ಪ್ರಚಾರ ಮಾಡುತ್ತಿದ್ದಾರೆ. ಖಂಡಿತಾ ನೂರಕ್ಕೆ ನೂರು ದೇವರು ಫಲ ಕೊಡೊ ವಿಶ್ವಾಸ ಇದೆ. ಕುಮಾರಣ್ಣ ಚನ್ನರಾಯಪಟ್ಟಣದಲ್ಲಿ ರೋಡ್ ಶೋ ಹಾಗು ಬೃಹತ್ ಸಬೆ ನಡೆಸುತ್ತಾರೆ. ಕೇಂದ್ರ ಸಚಿವರು ನಾರಾಯಣಸ್ವಾಮಿ ಹಾಗು ಮಾಜಿ ಸಚಿವ ಮಾಧುಸ್ಚಾಮಿ ಅವರು ನನ್ನೊಟ್ಡಿಗೆ ಪ್ರಚಾರ ನಡೆಸುತ್ತಾರೆ ಎಂದರು.
ನರೇಂದ್ರ ಮೋದಿಯವರು ೨೦ ಅಥವಾ ೨೧ಕ್ಕೆ ಚಿಕ್ಕಬಳ್ಳಾಪುರ ಹಾಗು ಇತರೆಡೆ ಪ್ರವಾಸ ಇದೆ ಎಂದು ಹೇಳಿದ್ದಾರೆ. ಅವರ ಪ್ರವಾಸ ನೋಡಿಕೊಂಡು ಯಡಿಯೂರಪ್ಪ ಅವರು ನಮ್ಮ ಜಿಲ್ಲೆಯಲ್ಲಿ ಪ್ರಚಾರ ಮಾಡ್ತಾರೆ. ಮೋದಿಯವರ ಪ್ರವಾಸ ಕಾರ್ಯಕ್ರಮವು ಇನ್ನು ಅಂತಿಮ ಆಗಿರುವುದಿಲ್ಲ. ಚಿಕ್ಕಬಳ್ಳಾಪುರ, ಅರಸೀಕೆರೆ ತುಮಕೂರು ಸೇರಿ ನಾಲ್ಕು ಸ್ಥಳದಲ್ಲಿ ಕಾರ್ಯಕ್ರಮ ನಡೆಸೋ ಬಗ್ಗೆ ಚರ್ಚೆ ಆಗುತ್ತಿದೆ. ನಾವೂ ಕೂಡ ಅರಸೀಕೆರೆಗೆ ಬಂದರೆ ಚಿತ್ರದುರ್ಗ, ತುಮಕೂರು, ಹಾಸನ ಕವರ್ ಆಗುತ್ತದೆ ಎಂದು ಹೇಳಿದ್ದೇವೆ. ಅವರ ಪ್ರವಾಸ ಅಂತಿಮ ಆದಾಗ ಗೊತ್ತಾಗಲಿದೆ ಎಂದು ಹೇಳಿದರು.
ಇದಕ್ಕೆ ಮೊದಲು ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಪ್ರಚಾರಕ್ಕೆಂದು ಬಂದಿದ್ದ ಮಹಿಳೆಯರಲ್ಲಿ ಕೆಲ ಸಮಯ ಚರ್ಚಿಸಿದರು.
ಇದೆ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಗಿರೀಶ್ ಚನ್ನವೀರಪ್ಪ, ಮಾಧ್ಯಮ ವಕ್ತಾರ ಹೊಂಗೆರೆ ರಘು, ಗಿರೀಶ್, ಪ್ರೇಮಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.
