
ಬೇಲೂರು : ಇತಿಹಾಸ ಪ್ರಸಿದ್ಧ ಕೋಟೆ ಬಾಗಿಲು ಅಂಜನೇಯ ಸ್ವಾಮಿ ಸನ್ನಿಧಾನ ಎಂದೇ ಪ್ರಸಿದ್ದವಾಗಿರುವ ಸೀತಾರಾಮಾಂಜನೇಯ ದೇಗುಲದಲ್ಲಿ ೫೦ ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಬೆಳಗ್ಗೆಯಿಂದ ಸೀತಾರಾಮಾಂಜನೇಯನಿಗೆ ವಿಶೇಷವಾದ ಅಭಿಷೇಕ ,ಹೋಮ,ಹಾಗೂ ಸಾಮೂಹಿಕ ನವಗ್ರಹ ಹೋಮ ಹಾಗೂ ತಿಲಕ ಹೋಮವನ್ನು ಆಯೋಜಿಸುವ ಮೂಲಕ ವಿಶೇಷ ಪೂಜೆ ವಿಧಿ ವಿಧಾನಗಳನ್ನು ಶ್ರೀ ವೇದಬ್ರಹ್ಮ ಕೆಆರ್ ಮಂಜುನಾಥ್ ಹಾಗೂ ಪ್ರಧಾನ ಅರ್ಚಕರಾದ ನಂಜುಂಡಸ್ವಾಮಿ ಅವರ ನೇತೃತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಇದೇ ಪ್ರಥಮಬಾರಿಗೆ ಮದ್ರಾಸಿನ ಸರೋಜ ಹಾಗೂ ಉಪೆಂದ್ರ ದಂಪತಿಗಳು ಅಯೋದ್ಯೆಯಲ್ಲಿನ ಶ್ರೀ ಬಾಲರಾಮನ ಮೂರ್ತಿ ಹಾಗೂ ಲಕ್ಷ್ಮಣ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಬಂದಂತ ಮುತ್ತೈದೆಯರಿಂದ ತೊಟ್ಟಿಲ ಸೇವೆ ನೆರವೇರಿಸಿ ಪೂಜಿಸಲಾಯಿತು.ಈ ವೇಳೆ ಮಾತನಾಡಿದ ಸೀತಾರಾಮಾಂಜನೇಯ ದೇಗುಲದ ಅಧ್ಯಕ್ಷರಾದ ರಘುಪತಿ ಈ ಹಿಂದೆ ನಮ್ಮ ತಂದೆಯವರು ದೇವಾಲಯವನ್ನು ಕಟ್ಟಿ ವಿಶೇಷ ಪೂಜಾವಿಧಿ ವಿಧಾನಗಳನ್ನು ನೆರವೇರಿಸಿಕೊಂಡು ಬಂದಿದ್ದರು.
ಅದರಂತೆ ಇಡೀ ತಾಲೂಕಿನಲ್ಲಿ ಊರ ಬಾಗಿಲ ಸೀತಾರಾಮಾಂಜನೇಯ ಎಂದು ಹೆಸರು ಪಡೆದಿದೆ.ಅದರಂತೆ ನಮ್ಮ ಭಜನಾ ಮಂಡಳಿಗೆ ೫೦ ನೇ ವರ್ಷದ ಸುವರ್ಣ ಸಂಭ್ರಮದ ಹೊಸ್ತಿಲಲ್ಲಿದ್ದು ಪ್ರತಿವರ್ಷದಂತೆ ಈ ವರ್ಷವೂ ಸಹ ರಾಮನವಮಿ ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಸುಮಾರು ೧೫ ದಿನಗಳ ಕಾಲ ವಿಶೇಷ ಪೂಜೆ ,ಭರತನಾಟ್ಯ,ಹರಿಕಥೆ,ಗಮಕ ಸೇರಿದಂತೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಹತ್ತು ಹಲವಾರು ಕಾರ್ಯಕ್ರಮ ಆಯೋಜಿಸಲಾಗಿದೆ. ಜಾತಿ ಮತ ಭೇದವಿಲ್ಲದೆ ಎಲ್ಲಾ ಭಕ್ತರು ಆಗಮಿಸಿ ಭಗವಂತನ ಕೃಪೆಗೆ ಪಾತ್ರರಾಗುತ್ತಿದ್ದಾರೆ ಎಂದರು.
ವೇದಬ್ರಹ್ಮ ಕೆ ಆರ್ ಮಂಜುನಾಥ್ ಮಾತನಾಡಿ ರಾಮನವಮಿಯನ್ನು ವಿಶೇಷವಾಗಿ ಈ ಬಾರಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.ಅದರಲ್ಲೂ ಸಹ ಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಬಾಲರಾಮ ಲಕ್ಷ್ಮಣರ ಮೂರ್ತಿಯನ್ನು ತಂದು ಇಲ್ಲಿ ತೊಟ್ಟಿಲಲ್ಲಿ ಲಾಲಿ ಹಾಡುವ ಮೂಲಕ ಅವರನ್ನು ಪೂಜಿಸಲಾಗುತ್ತಿದೆ.ಈ ಬಾರಿ ಬರಗಾಲ ಮತ್ತು ಮಳೆ ಇಲ್ಲದ ಹಿನ್ನಲೆಯಲ್ಲಿ ಶ್ರೀರಾಮ ಹಾಗೂ ಆಂಜನೇಯ ಮೂರ್ತಿಗೆ ವಿಶೇಷ ಸಂಕಲ್ಪ ಮಾಡಲಾಗಿದೆ ಎಂದರು.ಈ ವೇಳೆನೂರಾರು ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ವಿಶೇಷವಾದ ರಾಮ ಸಂಕೀರ್ತನಾ ಕೀರ್ತನೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ದೇಗುಲದ ಉಪಾಧ್ಯಕ್ಷ ಮುರುಳಿ,ಪ್ರಧಾನ ಅರ್ಚಕರಾದ ನಂಜುಂಡಸ್ವಾಮಿ ಹಾಗು ಶ್ರೀರಾಮ ಲಕ್ಷ್ಮಣ ವಿಗ್ರಹ ದಾನಿಗಳಾದ ಸರೋಜ ಉಪೇಂದ್ರರಾವ್ ಹಾಗು ಕಸಾಪ ಮಾಜಿ ಅಧ್ಯಕ್ಷ ಮ,ಶಿವಮೂರ್ತಿ ಇತರರು ಹಾಜರಿದ್ದರು.




