
ಅರೇಹಳ್ಳಿ: ಬೇಲೂರು ತಾಲೂಕಿನ ಅರೇಹಳ್ಳಿಯ ಕೇಶವನಗರ ಗ್ರಾಮದಲ್ಲಿರುವ ಸಾರ್ವಜನಿಕರು ತಿರುಗಾಡುವ ಕಿರಿದಾದ ಕಾಲುದಾರಿಯಲ್ಲಿ ಒಂದರ ಹಿಂದೆ ಮತ್ತೊಂದು ಎಂಬಂತೆ ಎರಡು ದೈತ್ಯ ಕಾಡಾನೆಗಳು ಭಾನುವಾರ ಸಂಜೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಭೀತಿಯನ್ನುಂಟು ಮಾಡಿದವು.
ಸಹಜವಾಗಿ ಮಕ್ಕಳೆಲ್ಲಾ ಆ ಹೊತ್ತಿನಲ್ಲಿ ಮನೆ ಮುಂದೆ ಆಟವಾಡುವಂತಹ ಸಮಯ. ಅದೃಷ್ಠವಶಾತ್ ಶಾಲೆಗಳಿಗೆ ಬೇಸಿಗೆ ರಜೆ ಇದ್ದ ಕಾರಣ ಹಲವು ಮಕ್ಕಳು ಸಂಬಂದಿಕರ ಮನೆಗೆ ತೆರಳಿದ್ದರಿಂದ ಆನೆ ತೆರಳುತ್ತಿದ್ದ ರಸ್ತೆಯಲ್ಲಿ ಮಕ್ಕಳು ಎದುರಾಗಲಿಲ್ಲ.
ಕೂಲಿ ಕಾರ್ಮಿಕ ವಿರಾಜ್ ಎಂಬ ವ್ಯಕ್ತಿ ಬಿಸಿಲಿದ್ದ ಕಾರಣಕ್ಕಾಗಿ ವಿಶ್ರಾಂತಿ ತೆಗೆದುಕೊಳ್ಳಲು ಮನೆಯ ಹೊರಗಡೆ ಖುರ್ಚಿಯಲ್ಲಿ ಕುಳಿತಿದ್ದರು. ನಾಯಿ ನಿರಂತರವಾಗಿ ಬೊಗಳುತ್ತಿದ್ದನ್ನು ಕೇಳಿಸಿಕೊಂಡ ಕ್ಷಣ ಮಾತ್ರದಲ್ಲಿ ಕೇವಲ ಹತ್ತದಿನೈದು ಅಡಿ ಅಂತರದಲ್ಲಿ ಆನೆ ನಿಂತಿರುವುದನ್ನು ಕಂಡು ಹೌಹಾರಿದರು.
ಈ ವ್ಯಕ್ತಿಯನ್ನು ನೋಡಿದ ಕಾಡಾನೆಯುತನ್ನ ಸೊಂಡಲನ್ನೆತ್ತಿದ್ದನ್ನು ಗಮನಿಸಿ ತಕ್ಷಣ ಮನೆಯೊಳಗಡೆ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿರುವುದರಿಂದ ಅರಣ್ಯ ಇಲಾಖೆ ಹಾಗೂ ಸರಕಾರ ಕಾಡಾನೆಗಳನ್ನು ಸ್ಥಳಾಂತರಿಸುವುರ ಮೂಲಕ ಶಾಶ್ವತ ಪರಿಹಾರ ಒದಗಿಸಬೇಕಾಗಿದೆ.




