ಹಾಸನ : ಹೆಚ್.ಡಿ. ರೇವಣ್ಣ ಬಿಡುಗಡೆಗೆ ಆಗ್ರಹ, ಜೆಡಿಎಸ್ ಬೃಹತ್ ಪ್ರತಿಭಟಿಸಿ ಡಿ.ಕೆ. ಶಿವಕುಮಾರ್ ಪ್ರತಿಕೃತಿ ದಹನಡಿಸಿ ವಿರುದ್ಧವೇ ಘೋಷಣೆ ಕೂಗಿ ಆಕ್ರೋಶಹಾಸನ : ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿ ಮತ್ತು ಮಾಜಿ ಸಚಿವರಾದ ಹೆಚ್.ಡಿ. ರೇವಣ್ಣ ಅವರನ್ನು ತಕ್ಷಣ ಬಿಡುಗಡೆ ಮಾಡಲು ಆಗ್ರಹಿಸಿ ಜೆಟಡಿಎಸ್ ಪಕ್ಷದಿಂದ ಡಿ.ಕೆ.ಶಿ ಪ್ರತಿಕೃತಿ ದಹಿಸಿ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಡಿಸಿ ವಿರುದ್ಧವೇ ಘೋಷಣೆ ಕೂಗಿ ಆಕ್ರೋಶವ್ಯಕ್ತಪಡಿಸಿದ ಘಟನೆ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ನಡೆದು ಪ್ರತಿಭಟನಾಗಾರರನ್ನು ಪೊಲೀಸರು ಹೊರಕಳುಹಿಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಡಿ.ಕೆ. ಶಿವಕುಮಾರ್ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದು ದಹಿಸಿ ಆಕ್ರೋಶವ್ಯಕ್ತಪಡಿಸಿದರು.

ನಂತರ ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ಬಂದ ಅವರು, ಪೆನ್‌ಡ್ರೈವ್ ಹಂಚಿಕೆ ಪ್ರಕರಣ ಸಂಬಂದ ಈಗಾಗಲೇ ಜೆಡಿಎಸ್ ಪಕ್ಷ ಹಾಗೂ ನಮ್ಮ ನಾಯಕರು ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿರುವುದು ಸರಿಯಷ್ಟೆ. ಅಲ್ಲದೆ ಈ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ತನಿಖೆ ನಡೆಸಿ ಕಠಿಣ ಕ್ರಮಕ್ಕೂ ಆಗ್ರಹ ಮಾಡಲಾಗಿದೆ.

ಪ್ರಕರಣವನ್ನು ರಾಜ್ಯ ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶ ಮಾಡಿರುವುದನ್ನೂ ನಾವು ಸ್ವಾಗತ ಮಾಡಿದ್ದೇವೆ. ಆದರೆ ಆರಂಭದಲ್ಲೇ ತನಿಖೆ ಹಾದಿ ತಪ್ಪುತ್ತಿದೆ ಎಂದು ನಿನ್ನೆಯಷ್ಟೇ ನಾವು ಆರೋಪ ಸಹ ಮಾಡಿದ್ದೇವೆ ಎಂದರು.

ಈ ನಡುವೆ ಕರ್ನಾಟಕ ಸರ್ಕಾರ ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಮತ್ತು ಹಣದ ಬಲದಿಂದ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದರ ಜೊತೆಗೆ ಪೆನ್ ಡ್ರೈವ್ ಹಂಚಿಕೆ ಪ್ರಕರಣವನ್ನೇ ಮುಂದಿಟ್ಟುಕೊಂಡು ದ್ವೇಷ ರಾಜಕೀಯದ ಮೂಲಕ ಜೆಡಿಎಸ್ ಪಕ್ಷ ಹಾಗೂ ನಾಯಕರನ್ನು ಹಣಿಯುವ ಷಡ್ಯಂತ್ರ ಮಾಡಿರುವುದು ಜಗಜ್ಜಾಹೀರವಾಗಿದೆ ಎಂದು ದೂರಿದರು.

ಈ ಹಿನ್ನೆಲೆಯಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು.

ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ಕ್ರಮ ಜರುಗಿಸಬೇಕು. ಅಲ್ಲದೆ ಇವರೊಂದಿಗೆ ಪೆನ್ ಟ್ರೈವ್ ಹಂಚಿಕೆಯಲ್ಲಿ ಭಾಗಿಯಾಗುವ ಮೂಲಕ ಮಹಿಳೆಯರು, ಹೆಣ್ಣು ಮಕ್ಕಳ ಮಾನ ಹರಾಜಾಗುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಡಿಸಿಎಂ ಸೇರಿದಂತೆ ಮಾಜಿ ಸಂಸದ, ರಾಜಕೀಯ ಲಾಭಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಹಾರುವ ಜಾಯಮಾನ ಹೊಂದಿರುವ ಎಲ್.ಆರ್. ಶಿವರಾಮೇಗೌಡ, ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶ್ರೇಯಸ್ ಪಟೇಲ್, ಕಾರು ಚಾಲಕ ಕಾರ್ತಿಕ್, ಹೊಳೆನರಸೀಪುರ ಪುರಸಭೆ ಮಾಜಿ ಅಧ್ಯಕ್ಷ ಪುಟ್ಟರಾಜು ಅಲಿಯಾಸ್ ಪುಟ್ಟಿ ಅವರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿ, ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಆಗ್ರಹಪಡಿಸುತ್ತೇವೆ ಎಂದು ಹೇಳಿದರು.

ಅಲ್ಲದೆ ಹಾಲಿ ನಡೆಯುತ್ತಿರುವ ಎಸ್‌ಐಟಿ ತನಿಖೆ ಹಾದಿ ತಪ್ಪುತ್ತಿರುವುದರಿಂದ ಪ್ರಕರಣದ ಸತ್ಯಾಸತ್ಯತೆ ಹೊರ ಬರುವುದು ಅನುಮಾನವಾಗಿದ್ದು, ಕೂಡಲೇ ಇದನ್ನು ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಲು ಆದೇಶ ಮಾಡಬೇಕು. ಇಲ್ಲವೇ ಸಿಬಿಐ ತನಿಖೆಗೆ ವಹಿಸಬೇಕು ಎಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದರು.

ಇದೇ ವೇಳೆ ಸುಮಾರು ೪೦ ವರ್ಷಗಳ ರಾಜಕೀಯ ಇತಿಹಾಸದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಸಾರ್ವಜನಿಕ ಸೇವೆಯ ಜೊತೆಗೆ ಹಾಸನ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ದುಡಿದು ತಮ್ಮದೇ ಅವಿಸ್ಮರಣೀಯ ಕೊಡುಗೆ ಸಲ್ಲಿಸಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರನ್ನು ರಾಜಕೀಯವಾಗಿ ಹಣಿಯುವ ಏಕೈಕ ದುರುದ್ದೇಶದಿಂದ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಿರುವ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸುವುದಾಗಿ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್. ಲಿಂಗೇಶ್, ಶಾಸಕರಾದ ಸಿ.ಎನ್. ಬಾಲಕೃಷ್ಣ, ಎ. ಮಂಜು, ಮಾಜಿ ಶಾಸಕ ಹೆಚ್.ಕೆ. ಕುಮಾರಸ್ವಾಮಿ, ಬೇಲೂರು ತಾಲೂಕು ಅಧ್ಯಕ್ಷ ತೋಚ. ಅನಂತ ಸುಬ್ಬರಾಯ, ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ಹೇಳಿದರು. ಪ್ರತಿಭಟನೆ ಕೊನೆಯಲ್ಲಿ ಡಿಸಿ ವಿರುದ್ಧ ಘೋಷಣೆ ಕೂಗಿದ ಹಿನ್ನಲೆಯಲ್ಲಿ ಪೊಲೀಸರು ಪ್ರತಿಭಟನಗಾರರನ್ನು ಶಾಂತ ರೀತಿಯಲ್ಲಿ ಜಿಲ್ಲಾಧಿಕಾರಿಗಳ ಕಾಂಪೌಂಡಿನಿಂದ ಹೊರ ಕಳುಹಿಸಿದರು.

ಈ ವೇಳೆ ಜೆಡಿಎಸ್ ಕಾರ್ಯಕರ್ತರು ಕೈಲಿ ಹಿಡಿದಿದ್ದ ಬ್ಯಾನರ್ ಮತ್ತು ನಾಮಫಲಕವನ್ನು ಎಸೆದು ಚಪ್ಪಳಿಯಲ್ಲಿ ಹೊಡೆದರು.

ಪ್ರತಿಭಟನೆಯಲ್ಲಿ ಜೆಡಿಎಸ್ ಹಾಸನ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಆಲೂರು ತಾಲೂಕು ಅಧ್ಯಕ್ಷ ಮಂಜೇಗೌಡ, ಮಾಧ್ಯಮ ವಕ್ತಾರ ಹೊಂಗೆರೆ ರಘು, ಮುಖಂಡರಾದ ಗಿರೀಶ್, ಸಿ.ಆರ್. ಶಂಕರ್, ಸುಮಾ, ಪ್ರೇಮಮ್ಮ, ಬಿದರಿಕೆರೆ ಜಯರಾಂ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *