
ಬೇಲೂರು.ಮೇ.೮“ಸಮ ಸಮಾಜದ ನಿರ್ಮಾಣದಲ್ಲಿ ಬಸವಣ್ಣನವರ ಪಾತ್ರ ಅನನ್ಯ” ;-೧೨ ನೇ ಶತಮಾನದಲ್ಲಿ ಸಮಾಜದಲ್ಲಿ ಅಡಗಿದ್ದ ಜಾತೀಯತೆ, ಮೇಲು-ಕೀಳು ಮೂಢನಂಬಿಕೆ, ಕಂದಾಚಾರಗಳನ್ನು ನಿರ್ಮೂಲನೆಗೆ ಶ್ರಮಿಸಿದ ವಿಶ್ವ ಗುರು ಬಸವಣ್ಣನವರು ಸಮ ಸಮಾಜದ ಪಿತಾಮಹ ಎಂದು ವಿದ್ಯಾ ವಿಕಾಸ್ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರಂಗನಾಥ್ ಹೇಳಿದರು.
ಪಟ್ಟಣದ ಮೂಡಿಗೆರೆ ರಸ್ತೆಯಲ್ಲಿನ ವಿದ್ಯಾ ವಿಕಾಸ್ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಬೇಲೂರು ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಂಡ ವಿಶ್ವ ಬಸವಣ್ಣನವರ ಜಯಂತಿ ಅಂಗವಾಗಿ ವಚನ ವಿಶ್ಲೇಷಣಾ ಕಾರ್ಯಕ್ರಮವನ್ನು ಉದ್ಘಾಟನೆ ನಡೆಸಿ ಮಾತನಾಡಿದ ಅವರು
ಅಂದಿನ ಜಡ್ಡುಗಟ್ಟಿದ ಸಮಾಜದಲ್ಲಿಯೇ ಬಸವಣ್ಣನವರು ಅನುಭವ ಮಂಟಪವನ್ನು ಸ್ಥಾಪಿಸಿ ತಳ ಸಮುದಾಯಗಳಿಗೆ ಅವಕಾಶವನ್ನು ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದಾರೆ.
ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಅಂಕ-ಡೊAಕುಗಳನ್ನು ತಿದ್ದಲು ಪ್ರಯತ್ನಿಸಿದ್ದಾರೆ. ಬಸವಣ್ಣನವರ ಆದರ್ಶ ಇಂದಿನ ಸಮಾಜಕ್ಕೆ ಪ್ರಸ್ತುತವಾದ ಹಿನ್ನಲೆಯಲ್ಲಿ ಸರ್ವರು ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕಿದೆ.
ವಿಶೇಷವಾಗಿ ಕರ್ನಾಟಕ ಜಾನಪದ ಪರಿಷತ್ತು ಬಸವೇಶ್ವರ ಜಯಂತಿ ಮುನ್ನವೇ ಅವರ ವಚನಗಳ ವಿಶ್ಲೇಷಣಾ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದು ನಿಜಕ್ಕೂ ಅಗಮ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಬೇಲೂರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಮಾತನಾಡಿ, ೧೨ ನೇ ಶತಮಾನದಲ್ಲಿ ಬಸವಾದಿ ಶಿವ ಶರಣರು ಕನ್ನಡ ಸಾಹಿತ್ಯಕ್ಕೆ ನೀಡಿದ ವಚನ ಸಾಹಿತ್ಯ ಕೇವಲ ದೇವರು ದಿಂಡಿರುಗಳ ಬಗ್ಗೆ ಮಾತ್ರ ಸೀಮೀತವಾಗದೆ, ಜನಸಾಮಾನ್ಯರ ಜೀವನಕ್ಕೆ ಹಾಸು ಹೊಕ್ಕಾಗಿರುವ ಮತ್ತು ಸೂಕ್ಷ್ಮ ಸಮಸ್ಯೆಗಳ ಎಳೆಗಳಿಂದ ಸಮಾಜವನ್ನು ಮಾರ್ಮಿಕವಾಗಿ ತಿದ್ದುವ ಕೆಲಸವನ್ನು ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬಸವಣ್ಣನವರು ನಡೆಸಿದ ಭಕ್ತಿ ಚಳುವಳಿ, ಸಾಮಾಜಿಕ ಚಳುವಳಿ ಹಾಗೂ ವಚನ ಚಳುವಳಿ ವಿಶ್ವದಲ್ಲಿ ದಾಖಲೆಯಾಗಿದೆ. ಇಷ್ಟಾದರೂ ಇಂದಿನ ಸಮಾಜದಲ್ಲಿ ಜಾತಿ ಪದ್ದತಿ ಮತ್ತು ಧರ್ಮ-ಧರ್ಮಗಳ ನಡುವಿನ ಸಂಘರ್ಷ ತೀವ್ರತೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮಾಹನ್ ಪುರುಷರು ನೀಡಿದ ತತ್ವಗಳನ್ನು ಶಾಲಾ-ಕಾಲೇಜು ಯುವ ಜನಾಂಗಕ್ಕೆ ತಿಳಿಸುವ ಕೆಲಸವನ್ನು ಮಾಡಬೇಕಿದೆ.
ತಾಲ್ಲೂಕು ಜಾನಪದ ಪರಿಷತ್ತು ಈ ನಿಟ್ಟಿನಲ್ಲಿ ಕೈಗೊಳ್ಳುತ್ತಿರುವ ಜನಪರ ಕಾರ್ಯಕ್ರಮ ಅನನ್ಯವಾಗಿದೆ ಎಂದರು. ಬೇಲೂರು ತಾಲ್ಲೂಕು ಜಾನಪದ ಪರಿಷತ್ತು ಅಧ್ಯಕ್ಷ ವೈ.ಸಿ.ಸಿದ್ದೇಗೌಡ ಮಾತನಾಡಿ, ಶರಣರು ನೀಡಿದ ವಚನ ಸಂಪತ್ತು ಅಮೂಲ್ಯ ಕನ್ನಡನಾಡಿನ ಸಾಹಿತ್ಯ ಭಂಡಾರವಾಗಿದೆ. ಇಂತಹ ವಚನಗಳನ್ನು ಪ್ರತಿಯೊಬ್ಬರು ದಿನಕ್ಕೆ ಒಂದು ವಚನವನ್ನು ಕಲಿಯುವ ಪ್ರಯತ್ನ ನಡೆಸಿದರೆ ನಮ್ಮ ಕಾರ್ಯಕ್ರಮ ಸಾರ್ಥಕ ಭಾವನೆ ಪಡೆಯುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಾವಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜು ಸಹಾಯಕ ಪ್ರಾಧ್ಯಾಪಕ ವೈ.ಹೆಚ್.ಮಹೇಶ್, ಕಾಲೇಜು ಪ್ರಾಂಶುಪಾಲ ಡಾ,ಎಂ.ಎಂ.ಮಹೇಶ್,ಸಾಹಿತಿ ಇಂದಿರಮ್ಮ, ಮದಘಟ್ಟ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಬೊಮ್ಮಡಿಹಳ್ಳಿ ಕುಮಾರಸ್ವಾಮಿ, ಉಪನ್ಯಾಸಕ ಧನಂಜಯ್, ಬಿ.ಎಲ್.ಮೋಹನ್, ಸುಜಯ್ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದ ಕಾರ್ಯಕ್ರಮದಲ್ಲಿ ಕು|| ಬಿ.ಕೆ.ಸ್ವರ, ಕು|| ಎಸ್ ಅಕ್ಷಿತ ಸ್ವಿತ್‌ಲಿನ್ ಮತ್ತು ಐಜೆ ವಿಶ್ವಾಸ್ ಇವರನ್ನು ಅಭಿನಂದನೆ ಸಲ್ಲಿಸಲಾಯಿತು.
ಬಾಕ್ಸ್ ನ್ಯೂಸ್ : ಕರ್ನಾಟಕ ಜಾನಪದ ಪರಿಷತ್ತು ಬೇಲೂರು ತಾಲ್ಲೂಕು ಘಟಕದಿಂದ ವಿದ್ಯಾ ವಿಕಾಸ ಕಾಲೇಜಿನಲ್ಲಿ ಹಮ್ಮಿಕೊಂಡ ವಿಶ್ವ ಗುರು ಬಸವಣ್ಣನವರ ವಚನ ವಿಶ್ಲೇಷಣಾ ಕಾರ್ಯಕ್ರಮದಲ್ಲಿ ಪಾತೀಮಾ, ಮೌಲ್ಯ, ಪಾರನಾಬಾನು, ವರ್ಷಿಣಿ, ಅಮೂಲ್ಯ, ಜ್ಞಾನೇಶ್ ವಚನಗಳ ಗೀತೆಗಳನ್ನು ಪ್ರಸ್ತುತ ಪಡಿಸಿದರು.
