
ಬೇಲೂರು,ಮೇ.೧೦“ಶಿಲ್ಪಕಲಾ ನಾಡಿನಲ್ಲಿ ಭಕ್ತಿಭಾವದಿಂದ ಕೂಡಿದ ಬಸವ ನಾಮ ಸ್ಮರಣೆ”
ವಿಶ್ವಗುರು, ಸಾಂಸ್ಕೃತಿಕ ನಾಯಕ, ವಿಭೂತಿ ಪುರುಷ, ಸಾಮಾಜಿಕ ಕ್ರಾಂತಿ ಹರಿಕಾರ ಹೀಗೆ ನಾನಾ ಹೆಸರುಗಳಿಂದ ಖ್ಯಾತಿಯಾದ ಜಗಜ್ಯೋತಿ ಬಸವೇಶ್ವರ ಜಯಂತಿ ಮಹೋತ್ಸವನ್ನು ಇಲ್ಲಿನ ವೀರಶೈವ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಭಕ್ತಿ ಭಾವದಿಂದ ಆಚರಿಸುವ ಮೂಲಕ ಬಸವ ನಾಮ ಸ್ಮರಣೆ ಮಾಡಿದರು.
ಬಸವ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಬೇಲೂರು ಶಾಸಕ ಹೆಚ್.ಕೆ.ಸುರೇಶ್, ಸಮಾಜದಲ್ಲಿ ಬೇರು ಬಿಟ್ಟಿದ್ದ ಮೌಢ್ಯತೆಯನ್ನು ತೊಡೆದು ಹಾಕಲು ಅವಿರತ ಶ್ರಮಿಸಿದ ಸಮಾನತೆಯ ಹರಿಕಾರ ಬಸವಣ್ಣನವರ ವಿಚಾರಧಾರೆಗಳನ್ನು ಪ್ರತಿಯೊಬ್ಬರು ಕೂಡ ಅಳವಡಿಸಿಕೊಳ್ಳುವ ಮೂಲಕ ಇಂತಹ ಬಸವ ಜಯಂತಿ ಕಾರ್ಯಕ್ರಮಗಳ ಅರ್ಥಪೂರ್ಣತೆಗೆ ಸಾಕ್ಷಿಯಾಗಬೇಕು ಎಂದ ಅವರು ಪ್ರಸ್ತುತ ಸಮಾಜದಲ್ಲಿ ಧರ್ಮಗಳ ನಡುವೆ ಆಶಾಂತಿ ಉಂಟಾಗುತ್ತಿದ್ದು, ಬಸವಣ್ಣನವರು ನೀಡಿದ ದಯೆಯೇ ಧರ್ಮದ ಮೂಲವಯ್ಯ ಎಂಬ ತತ್ವವನ್ನು ಅಳವಡಿಸಿದರೆ ಮಾತ್ರ ನಾಡಿನಲ್ಲಿ ಸಾಮರಸ್ಯವನ್ನು ಕಾಣಲು ಸಾಧ್ಯವಾಗುತ್ತದೆ.ಜಾತಿ ಪದ್ದತಿ, ಲಿಂಗ ತಾರತಮ್ಯಗಳಂತಹ ಸಾಮಾಜಿಕ ಅನಿಷ್ಟ ಆಚರಣೆಗಳ ವಿರುದ್ದ ಹೋರಾಟ ನಡೆಸಿದ ಬಸವಾದಿ ಶರಣರು ಇಂದಿನ ಸಮಾಜಕ್ಕೆ ಪ್ರಸ್ತುತವಾಗಿದ್ದಾರೆ.ಅಂದಿನ ಕಾಲದಲ್ಲಿಯೇ ಅಂರರ್ಜಾತಿ ವಿವಾಹ ನಡೆಸಿ ಸಮಾಜಕ್ಕೆ ಮಾದರಿಯಾದ ಬಗ್ಗೆ ತಿಳಿಸಿದರು.
ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ,ಬಸವಣ್ಣನವರು ಎಲ್ಲಕ್ಕಿಂತ ಮಿಗಿಲಾಗಿ ಶೋಷಣೆ ರಹಿತ ಸಮಾನತೆಯ ಸಮಾಜದ ಸೃಷ್ಟಿಗಾಗಿ ಹೋರಾಡಿದ ಸಾಮಾಜಿಕ ಹರಿಕಾರ ಬಸವಣ್ಣನವರು ಇಡೀ ವಿಶ್ವದ ಜ್ಯೋತಿಯಾಗಿ ಜಗಜ್ಯೋತಿ ಬಸವಣ್ಣ ಎಂಬ ಹೆಸರಿನಿಂದ ಖ್ಯಾತಿ ಹೊಂದಿದ್ದಾರೆ ಎಂದ ಅವರು ೧೨ ನೇ ಶತಮಾನದಲ್ಲಿ ಕರ್ನಾಟಕದಲ್ಲಿ ನಡೆದ ಸಾಮಾಜಿಕ ಧಾರ್ಮಿಕ ಕ್ರಾಂತಿ ವಿಶ್ವದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದು, ಜಡ್ಡುಗಟ್ಟಿದ ಸಮಾಜದಲ್ಲಿನ ಅರ್ಥರಹಿತ ಅಚಾರ-ವಿಚಾರಗಳಿಂದ ಮೇಲು-ಕೀಳು ಎಂಬ ಭಾವನೆಗಳಿಂದ ಸ್ತ್ರೀ ಪುರುಷ ಎಂಬ ಲಿಂಗಬೇದ ತಾರತಮ್ಯದಿಂದ ಶ್ರೀಮಂತ ಬಡವ ಎಂಬ ಅಂತರದ ಸಂಘರ್ಷ ದಿಂದ ಸಾಮಾಜಿಕ ವ್ಯವಸ್ಥೆ ರೋಸಿ ಹೋಗಿತ್ತು. ಇದರ ವಿರುದ್ದ ತಮ್ಮ ವಿಶಿಷ್ಟವಾ ಮಾನವೀಯ ಮೌಲ್ಯಗಳ ಆಧಾರದ ಮೇರೆಗೆ ನೈತಿಕ ಸೂತ್ರಗಳ ಹಿನ್ನಲೆಯಲ್ಲಿ ಹೋರಾಟ ನಡೆಸಿದ ವಿಶ್ವ ಗುರು ಬಸವಣ್ಣವರು ಸಮಾಜದಲ್ಲಿ ಸಮಾನತೆಗೆ ಶ್ರಮಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ವೀರಶೈವ ಸಂಘದ ಅಧ್ಯಕ್ಷ ಬಿ.ಎಂ.ರವಿಕುಮಾರ್, ವೀರಶೈವ ರುದ್ರಭೂಮಿ ಟ್ರಸ್ಟ್ ಅಧ್ಯಕ್ಷ ಸಿ.ಎಂ.ನಿಂಗರಾಜ್, ಪುಷ್ಪಗಿರಿ ಮಹಾಸಂಸ್ಥಾನ ಕಾರ್ಯದರ್ಶಿ ಗ್ರಾನೈಟ್ ರಾಜಶೇಖರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇ.ಹೆಚ್.ಲಕ್ಷ್ಮಣ್, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ತಾಲ್ಲೂಕು ವೀರಶೈವ ಯುವ ಘಟಕದ ಅಧ್ಯಕ್ಷ ಗೆಂಡೇಹಳ್ಳಿ ಚೇತನ್ ಹಾಗೂ ಮುಖಂಡರಾದ ಬಿ.ಎಂ.ದೋಡ್ಡವೀರೇಗೌಡ, ಕನಾಯನ್ಕಾನಹಳ್ಳಿ ಮಹಾದೇವ್, ಉಮೇಶ್, ಅದ್ದೂರಿ ಚಂದ್ರಶೇಖರ್, ತಾಲ್ಲೂಕು ಕಸಪಾ ಅಧ್ಯಕ್ಷ ಬಿ.ಎಲ್.ರಾಜೇಗೌಡ, ಹೆಚ್ ಎಂ ದಯಾನಂದ್ ಮಾಜಿ ಅಧ್ಯಕ್ಷ ಮ.ಶಿವಮೂರ್ತಿ, ದಿನೇಶ್, ಪುಟ್ಟಸ್ವಾಮಿ, ಕೇಬಲ್ ರಾಜಣ್ಣ. ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪವರ್ತಯ್ಯ, ಬೆಣ್ಣೂರು ರೇಣುಕುಮಾರ್,ನಾಗೇಶ್, ತೀರ್ಥಂಕರ್,ಎಂ.ಜೆ.ನಿಂಗರಾಜ್ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.
