
ಬೇಲೂರು. ಮೇ.೧೧”ಬಸವೇಶ್ವರ ವಿಚಾರಧಾರೆಗಳಿಂದ ಮಾತ್ರ ಸಾಮರಸ್ಯ ದೇಶ ಕಟ್ಟಲು ಸಾದ್ಯ” :- ಇತ್ತೀಚಿನ ದಿನದಂದು ದೇಶದಲ್ಲಿ ಜಾತಿ- ಜಾತಿ ಮತ್ತು ಧರ್ಮ- ಧರ್ಮದಲ್ಲಿ ಕೋಮು ಸೌಹಾರ್ದತೆ ಕ್ಷೀಣಿಸುತ್ತಾ ಸಾಮರಸ್ಯದ ಬದುಕು ವಿನಾಶವಾಗುತ್ತಿದೆ. ಈ ನಿಟ್ಟಿನಲ್ಲಿ ೧೨ ನೇ ಶತಮಾನದಲ್ಲಿ ಬಸವಾದಿ ಶರಣರು ನೀಡಿದ ವಿಚಾರಧಾರೆಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡರೆ ಮಾತ್ರ ಸಾಮರಸ್ಯದಿಂದ ಕೂಡಿದ ಸದೃಡ ದೇಶವನ್ನು ಕಟ್ಟಲು ಸಾದ್ಯವೆಂದು ಬೇಲೂರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಕರೆ ನೀಡಿದರು.
ಪಟ್ಟಣದ ಅಂಬೇಡ್ಕರ್ ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡ ವಿಶ್ವ ಗುರು ಬಸವಣ್ಣನವರ ಜಯಂತಿ ಮತ್ತು ಕಾಯಕಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜೀವನದಲ್ಲಿ ಬೆಳಕು ಮೂಡಲು ಇವತ್ತು ಬಸವಣ್ಣನವರ ಚಿಂತನೆ, ಸಂದೇಶ, ವಚನಗಳ ಅಧ್ಯಯನ ಅಗತ್ಯ. ಇದರಿಂದ ಜಗತ್ತಿನ ಭವಿಷ್ಯ ಜ್ಞಾನದತ್ತ ಬದಲಾವಣೆ ಆಗಲಿದೆ. ರಾಷ್ಟ್ರವು ಶಕ್ತಿಯುತವಾಗಲಿದೆ. ಬಸವಣ್ಣ ಅವರ ವಚನಗಳ ಜ್ಞಾನ ಭಂಡಾರವನ್ನು ಇವತ್ತು ವಿದೇಶಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಆದರೆ ನಮ್ಮ ಭಾರತೀಯರು ಅಂತಹ ಸಕಾರತ್ಮ ಕಾರ್ಯಕ್ಕೆ ಇನ್ನೂ ಆಸಕ್ತಿ ಮೂಡಿಸಿಕೊಂಡಿಲ್ಲ.
ಇನ್ನಾದರೂ ಭಾರತೀಯರು ಬುದ್ದ, ಬಸವ ಮತ್ತು ಅಂಬೇಡ್ಕರ್ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದ ಅವರು ಆ ದಿನದಂದು ಮಾಹನ್ ಪುರುಷರ ಜಯಂತಿ ದಿನ ಭಾವಚಿತ್ರವಿಟ್ಟು ದೀಪ ಹಚ್ಚಿ , ಹೂವು ಹಾಕಿ ನಮಿಸುವುದರಿಂದ ಮನುಷ್ಯನ ಜೀವನ ಸಾರ್ಥಕತೆ ಆಗುವುದಿಲ್ಲ. ಬದಲಾಗಿ ಅವರ ವಚನ, ತತ್ತ್ವ ಸಿದ್ಧಾಂತಗಳನ್ನು ಎಲ್ಲರೂ ಓದಿ ಅರ್ಥ ಮಾಡಿಕೊಂಡು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ಅವರಿಗೆ ನಾವು ಗೌರವ ಕೊಟ್ಟಂತಾಗುತ್ತದೆ ಎಂದ ಅವರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಈ ನಿಟ್ಟಿನಲ್ಲಿ ೧೨ ನೇ ಶತಮಾನದ ಬಸವಾದಿ ಶಿವ ಶರಣರ ವಿಚಾರಗಳನ್ನು ತಿಳಿಸುವ ಮತ್ತು ವಚನ ಸಾಹಿತ್ಯ ಉಳಿಸುವ ಅಗಮ್ಯ ಕೆಲಸ ಮಾಡುತ್ತಿದೆ.
ಬೇಲೂರು ಶರಣ ಸಾಹಿತ್ಯ ಪರಿಷತ್ತು ಕೂಡ ಮುಂದಿನ ದಿನದಂದು ವಚನಗಳ ಮಹತ್ವದ ಬಗ್ಗೆ ಶಾಲಾ ಕಾಲೇಜುಗಳಲ್ಲಿ ವಿಶೇಷ ಉಪನ್ಯಾಸ, ವಿದ್ಯಾರ್ಥಿಗಳಿಂದ ವಚನ ಕಂಠಪಾಠ ಸ್ಪರ್ಧೆಯನ್ನು ಹಮ್ಮಿಕೊಳ್ಳಲು ಮುಂದಾಗಿದೆ.
ಇಂದು ನಡೆದ ಬಸವೇಶ್ವರ ಜಯಂತಿ ಕೇವಲ ಕಾರ್ಯಕ್ರಮವಾಗಿಯೇ ಉಳಿಯಬಾರದು ಎಂಬ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರಿಗೆ ಕಾಯಕಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದು ನಿಜಕ್ಕೂ ಸಂತೋಷ ತಂದಿದೆ ಎಂದರು.
ಬೇಲೂರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಗೌರವಾಧ್ಯಕ್ಷ ಹಾಗೂ ಹಿರಿಯ ವಕೀಲರಾದ ಸಿ.ಎಂ.ನಿಂಗರಾಜ್ ಮಾತನಾಡಿ, ವಚನ ಮತ್ತು ವಿಚಾರಧಾರೆ ಮೂಲಕ ಕೂಡಿ ಬಾಳುವ ಸಂಸ್ಕೃತಿ ಕಲಿಸಿಕೊಟ್ಟವರು ಬಸವಣ್ಣ. ಸಮಾಜಕ್ಕೆ ಅವರು ಯಾವತ್ತೂ ಕತ್ತರಿಯಾಗಲಿಲ್ಲ. ಬೆಸೆಯುವ ಸೂಜಿಯಂತಿದ್ದರು. ನುಡಿದಂತೆ ನಡೆಯುವ ಮೂಲಕ ಎಲ್ಲರನ್ನೂ ಒಳಗೊಳ್ಳುತ್ತಿದ್ದರು. ಆದರೆ, ಇಂದು ಅವರ ಹೆಸರಿನಲ್ಲಿ ಸಮಾಜ ಒಡೆಯುವಂಥ ದುಸ್ಸಾಹಸ ನಡೆಯುತ್ತಿದೆ ಎಂದು ವಿಷಾದಿಸಿದ ಅವರು ದೇಶದಲ್ಲಿ ಜ್ಞಾನದ ಕೊರತೆಯಿಂದ ಜನರಲ್ಲಿ ಹೆಚ್ಚಾಗುತ್ತಿದೆ. ಇದು ಹೀಗೆ ಮುಂದುವರಿದರೆ ದೇಶದ ಪರಿಸ್ಥಿತಿ ಶೋಚನೀಯವಾಗಲಿದೆ.
ಪ್ರತಿಯೊಬ್ಬರ ಜೀವನ ಉನ್ನತಿಗಾಗಿ ಬಸವಣ್ಣನವರ ವಚನಗಳ ಅಧ್ಯಯನ ಮಾಡಬೇಕು. ಗುರು ಹಿರಿಯರ ಮಾರ್ಗದರ್ಶನ ಪಾಲನೆ ಮಾಡಬೇಕು. ಕಾಯಕವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು.
ಇದರಿಂದಲೇ ಪ್ರತಿಯೊಬ್ಬರ ಬಾಳು ಅಂಧಕಾರದಿಂದ ಬೆಳಕಿನ ಕಡೆಗೆ ಸಾಗಲಿದೆ. ಜತೆಗೆ ಸಕಾರತ್ಮಕವಾಗಿ ದೇಶ ಬಲಗೊಳ್ಳಲಿದೆ. ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹೆಬ್ಬಾಳು ಹಾಲಪ್ಪನವರು ಮತ್ತು ಅವರ ತಂಡ ಮುಂದಿನ ದಿನದಂದು ಇನ್ನೂ ಹೆಚ್ಚಿನ ಸಾಮಾಜಿಕಮುಖಿ ಮತ್ತು ಜನಪರ ಕೆಲಸಗಳನ್ನು ನಡೆಸಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಪುರಸಭಾ ಪೌರ ಕಾರ್ಮಿಕರಾದ ವಿಶ್ವನಾಥ ಮತ್ತು ಆರೋಗ್ಯ ಇಲಾಖೆಯ ಸಹಾಯಕರಾದ ಸರೋಜಮ್ಮ ಇವರಿಗೆ ಬಸವೇಶ್ವರ ಜಯಂತಿ ಅಂಗವಾಗಿ ಕಾಯಕಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉಳಿದಂತೆ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಉಪಾಧ್ಯಕ್ಷ ಬಿ.ಎಲ್.ರಾಜೇಗೌಡ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಶಿರೇಖಾ, ಯುವ ಘಟಕದ ಅಧ್ಯಕ್ಷ ಆರ್.ಎಸ್.ಮಹೇಶ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಚಂದನ್ ಕುಮಾರ್, ಉಪಾಧ್ಯಕ್ಷರಾದ ಮ.ಶಿವಮೂರ್ತಿ, ಗೀತಾ ಶಿವರಾಜ್, ಮಾ.ನ.ಮಂಜೇಗೌಡ, ಹಳೇಬೀಡು ಹೋಬಳಿ ಘಟಕದ ಅಧ್ಯಕ್ಷೆ ವಿನುತ ಧನಂಜಯ್, ತಾಲ್ಲೂಕು ಯುವ ಘಟಕದ ಅಧ್ಯಕ್ಷ ಗೆಂಡೇಹಳ್ಳಿ ಚೇತನ್, ಯುವ ಕವಿ ನಿರಂಜನ್ ಬೇಲೂರು, ಸಾಹಿತಿ ಮಧು ಮಾಲತಿ ರುದ್ರೇಶ್, ಗಮಕ ಕವಿಯತ್ರಿ ಇಂದಿರಮ್ಮ, ಪತ್ರಕರ್ತ ಗಣೇಶ್ , ಮಲ್ಲಿಕಾರ್ಜುನ ಇನ್ನೂ ಮುಂತಾದವರು ಹಾಜರಿದ್ದರು.
ಬಾಕ್ಸ್ ನ್ಯೂಸ್. :- ೧೨ ನೇ ಶತಮಾನದಲ್ಲಿ ನಡೆದ ಸ್ತ್ರೀ ಸಮಾನತೆ, ವಚನ ಸಾಹಿತ್ಯ, ಸಾಮಾಜಿಕ ಕ್ರಾಂತಿ ಇಡೀ ವಿಶ್ವದಲ್ಲೇ ದಾಖಲೆ ನಿರ್ಮಿಸಿದ ಕಾರಣದಿಂದಲೇ ಬಸವಣ್ಣನವರು ವಿಶ್ವ ಗುರು ಎಂಬ ಖ್ಯಾತಿಗೆ ಪಾತ್ರರಾಗಲು ಸಾದ್ಯವಾಗಿದೆ.ವಿಶೇಷವಾಗಿ ಸಮಾಜದಲ್ಲಿ ಅಡಗಿದ್ದ ಅನಿಷ್ಟ ಪದ್ಧತಿಯನ್ನು ಹೋಗಲಾಡಿಸಲು ಅವರು ನಡೆಸಿದ ಚಳುವಳಿ ನಿಜಕ್ಕೂ ಅಗಮ್ಯವಾಗಿದೆ. ಕನ್ನಡ ಸಾಹಿತ್ಯ ಎಂದಿಗೂ ವಚನ ಸಾಹಿತ್ಯವನ್ನು ಹೊರತುಪಡಿಸಿ ಸಾಹಿತ್ಯ ಉಹಿಸಲು ಸಾದ್ಯವಿಲ್ಲ ಎಂದು ಬೇಲೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಎಲ್.ರಾಜೇಗೌಡ ಹೇಳಿದರು.
