
ಬೇಲೂರು: ಎಷ್ಟೋ ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಗಣನೀಯವಾಗಿ ಸಾಧನೆ ಮಾಡುತ್ತಿದ್ದಾರೆ.ಆದರೆ ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಶಾಲೆಗಳೆಂದರೆ ಅಸಡ್ಡೆ ತೋರುವ ಅಧಿಕಾರಿಗಳು ಜನಪ್ರತಿನಿಧಿಗಳೆ ಹೆಚ್ಚಾಗಿ ಸಿಗುತ್ತಾರೆ.
ಬೇರೆಯವರಂತೆ ನಮ್ಮ ಮಕ್ಕಳೂ ಸಹ ಓದಿ ವಿದ್ಯಾವಂತರಾಗಬೇಕು ಎಂದು ಕೂಲಿ ಕಾರ್ಮಿಕರ ಮಕ್ಕಳು ಹೆಚ್ಚಾಗಿ ಸರ್ಕಾರಿ ಶಾಲೆಗಳನ್ನು ಆಶ್ರಯಿಸುತ್ತಾರೆ.ಆದರೆ ಪಟ್ಟಣದ ಸಮೀಪ ಸುಮಾರು ೬ ಕಿಮೀ ದೂರವಿರುವ ನೆಟ್ಟೆಕೆರೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವ್ಯವಸ್ಥೆಯನ್ನು ಒಮ್ಮೆ ನೋಡಿ.
ಪಟ್ಟಣಕ್ಕೆ ಹೊಂದಿಕೊಂಡಂತೆ ಇಬ್ಬೀಡು ಗ್ರಾಪಂ ವ್ಯಾಪ್ತಿಯ ನೆಟ್ಟೇಕೆರೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು ೨೫-೩೦ ವಿದ್ಯಾರ್ಥಿಗಳು ಒಂದರಿಂದ ಐದನೇ ತರಗತಿಯವರೆಗೆ ವ್ಯಾಸಾಂಗ ಮಾಡುತ್ತಿದ್ದಾರೆ.
ಈ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ವರ್ಗದ ಕುಟುಂಬಗಳು ವಾಸಿಸುತ್ತಿದ್ದು ಇಲ್ಲಿ ಬಹುತೇಕರು ಸಣ್ಣಪುಟ್ಟ ಜಮೀನು ಹೊಂದಿದ್ದು ಕೂಲಿ ಕಾರ್ಮಿಕರೆ ಹೆಚ್ಚಾಗಿ ಇರುವ ಈ ಗ್ರಾಮದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರ ಸುಮಾರು ೨೫ ವರ್ಷಗಳ ಹಿಂದೆ ಸರ್ಕಾರಿ ಶಾಲೆ ಪ್ರಾರಂಭಿಸಿದ್ದು ಅಂದಿನಿಂದ ಈ ಶಾಲೆಯ ಗೋಳು ಹೇಳತೀರದಾಗಿದೆ.
ಶಾಲೆಯ ಕಟ್ಟಡದ ಗೋಡೆಗಳು ಈಗಾಗಲೇ ಸಂಪೂರ್ಣ ಬಿರುಕು ಬಿಟ್ಟಿದ್ದು ಇನ್ನು ಮೇಲ್ಚಾವಣಿ ಹಂಚುಗಳೆಲ್ಲಾ ಗಾಳಿ ಮಳೆಗೆ ಹಾರಿಹೋಗಿದ್ದು ಮಳೆ ಬಂದಾಗ ಸಂಪೂರ್ಣ ಸೋರುವುದಲ್ಲದೆ ಬೇಸಿಗೆ ಕಾಲದಲ್ಲಿ ಕನ್ನಡಿಯಂತೆ ಸೂರ್ಯನ ಕಿರಣಗಳು ಇಣುಕಿ ನೋಡುವ ಸ್ಥಿತಿ ನಿರ್ಮಾಣವಾಗಿದೆ.
ಇತ್ತೀಚಿಗೆ ಬಂದಂತ ಮಳೆಯಿಂದಾಗಿ ಸಂಪೂರ್ಣವಾಗಿ ಗೋಡೆ ಶಿಥಿಲವಾಗಿದ್ದು ಯಾವಾಗ ಬೀಳುತ್ತದೊ ಎಂಬ ಭಯದಿಂದ ಅಲ್ಲಿರುವ ಶಿಕ್ಷಕರು ಗ್ರಾಮದಲ್ಲಿರುವ ಅಂಬೇಡ್ಕರ್ ಸಮುದಾಯ ಭವನದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ವಿದ್ಯಾರ್ಥಿಗಳ ಅಳಲು : ನಮಗೆ ಇಲ್ಲಿ ಕೂರಲು ಆಗುವುದಿಲ್ಲ ಮಳೆ ಬಂದ ಸಂದರ್ಭದಲ್ಲಿ ಒಳಗಡೆ ನೀರು ನುಗ್ಗಿ ಕೆರೆಯಂತಾಗುತ್ತದೆ.ಪಾಠ ಕೇಳಲು ಚಳಿ ಯಾಗುತ್ತದೆ.ಗೋಡೆಗಳನ್ನು ಮುಟ್ಟಿದರೆ ಕಿತ್ತುಬರುವಂತಾಗುತ್ತದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಶಾಸಕರಿಗೆ ಹಾಗು ಶಿಕ್ಷಣ ಇಲಾಖೆಗೆ ಮನವಿ ಮಾಡಿದ ಗ್ರಾಮದ ಯುವಕ
ಸರ್ಕಾರಿ ಶಾಲೆಗಳನ್ನು ಉಳಿಸಬೇಕೆಂದು ಕೇವಲ ಬಾಯಿ ಮಾತಿಗೆ ಹೇಳುವವರು ಹೆಚ್ಚಾಗಿದ್ದು ನಮ್ಮ ಗ್ರಾಮದಲ್ಲಿ ಬಡಮಕ್ಕಳು ಹೆಚ್ಚಿದ್ದು ಈ ಶಾಲೆ ಮೇಲ್ಚಾವಣಿ ಸಂಪೂರ್ಣ ಕುಸಿದು ಬಿದ್ದು ಹಾಳಾಗಿದೆ.
ಈ ಶಾಲೆಯು ತುಂಬಾ ಹಳೆಯ ಕಟ್ಟಡವಾಗಿರುವುದರಿಂದ ತುಂಬಾ ತೊಂದರೆಯಾಗುತ್ತಿದೆ.ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ತೊಂದರೆಯಾಗುತ್ತಿರುವುದರಿಂದ ಒಂದು ವಾರದಿಂದ ಸಮುದಾಯ ಭವನದಲ್ಲಿ ಮಕ್ಕಳಿಗೆ ಪಾಠ ಮಾಡುವ ಸ್ಥಿತಿ ಉಂಟಾಗಿದೆ.
ಸರ್ಕಾರಿ ಶಾಲೆ ಎಂದರೆ ಅಧಿಕಾರಿಗಳಿಗೆ ಎಕೆ ಅಸಡ್ಡೆ ದಯಮಾಡಿ ಶಾಸಕರು ಈ ಬಗ್ಗೆ ಗಮನ ಹರಿಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕು.
ಇಲ್ಲದಿದ್ದರೆ ನಮ್ಮ ಕರವೇ ಸಂಘಟನೆ ವತಿಯಿಂದ ಹಾಗೂ ಗ್ರಾಮಸ್ಥರ ವತಿಯಿಂದ ಶಿಕ್ಷಣ ಇಲಾಖೆ ಮುಂಭಾಗದಲ್ಲಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಗ್ರಾಮದ ಯುವಕ ಹಾಗು ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯದರ್ಶಿ ಕಾರ್ತಿಕ್ ಎಚ್ಚರಿಕೆ ನೀಡಿದ್ದಾರೆ.





