
ಹಾಸನ: ವಿವಿಧ ಬೇಡಿಕೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಡೇರಿಸುವ ಮೂಲಕ ಅಗತ್ಯ ಕ್ರಮವಹಿಸಿ ನ್ಯಾಯ ಒದಗಿಸುವಂತೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ನೇತೃತ್ವದಲ್ಲಿ ವಿವಿಧ ಕಾರ್ಮಿಕ ವಿಭಾಗದವರು ಡಿಸಿ ಕಛೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಸಿಐಟಿಯು ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ ಮಾಧ್ಯಮದೊಂದಿಗೆ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪ್ರಮುಖ ಹಕ್ಕೋತ್ತಾಯಗಳೆಂದರೇ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸಿ, ಬಡವರಿಗೆ ಬದುಕಲು ಅವಕಾಶ ಕಲ್ಪಿಸುವ ನೀತಿಗಳನ್ನು ಜಾರಿಗೆ ತರಬೇಕು. ರೈತ ವಿರೋಧಿ ಕೃಷಿ ಕಾನೂನುಗಳನ್ನು ವಾಪಸ್ ಪಡೆದು ಕೃಷಿ ಬೆಳೆಗಳಿಗೆ ಲಾಭದಾಯಕ ಬೆಂಬಲ ಬೆಲೆ ಖಾತರಿಪಡಿಸಿ ಎಪಿಎಂಸಿ ವ್ಯವಸ್ಥೆಯನ್ನು ಬಲಗೊಳಿಸಬೇಕು. ಗೊಬ್ಬರ ಒಳಗೊಂಡಂತೆ ಕೃಷಿ ಇಡುವಳಿಗಳಿಗೆ ಸಬ್ಸಿಡಿ ಕಡಿತಗೊಳಿಸುವ ನೀತಿಗಳನ್ನು ಕೈಬಿಟ್ಟು ದೇಶದ ಐಕ್ಯತೆಯನ್ನು ಛಿದ್ರಗೊಳಿಸುವ, ಸೌಹಾರ್ದತೆಯನ್ನು ಹಾಳುಮಾಡುವ ಕೃತ್ಯಗಳನ್ನು ಹಾಗು ಶಕ್ತಿಗಳನ್ನು ನಿಗ್ರಹಿಸಬೇಕು. ಸಂವಿಧಾನದ ಧರ್ಮನಿರಪೇಕ್ಷ ಮೌಲ್ಯಗಳನ್ನು ಸಂರಕ್ಷಿಸಬೇಕು ಎಂದರು.
ರೈಲ್ವೆ, ವಿದ್ಯುತ್ ಒಳಗೊಂಡು ಎಲ್ಲಾ ಸಾರ್ವಜನಿಕ ಕ್ಷೇತ್ರಗಳ ಎಲ್ಲಾ ಸ್ವರೂಪದ ಖಾಸಗಿಕರಣವನ್ನು ಕೈಬಿಡಬೇಕು. ಸಾರ್ವಜನಿಕ ರಂಗದ ಕೈಗಾರಿಕೆ ಹಾಗು ಸೇವೆಗಳನ್ನು ಬಲಪಡಿಸಬೇಕು. ಎನ್.ಪಿ.ಎ. ರದ್ದುಮಾಡಿ. ಶಿಕ್ಷಣವನ್ನು ದುಬಾರಿಗೊಳಿಸುವ ಹಾಗು ಜಾರಿಗೊಳಿಸಬಾರದು. ಅವೈಜ್ಞಾನಿಕ ಹೊಸ ಸಿಕ್ಷಣ ನೀತಿಯನ್ನು ಜಾರಿಗೊಳಿಸಿ ಕನಿಷ್ಟ ವೇತವನ್ನು ಅಕುಶಲ ಕಾರ್ಮಿಕರಿಗೆ ರೂ ೩೧,೦೦೦ ಹಾಗು ಹೆಚ್ಚಿನ ಕೌಶಲ್ಯದ ಪ್ರತಿ ಹಂತಕ್ಕೆ ಶೇ ೧೫% ಹೆಚ್ಚಳದೊಂದಿಗೆ ನಿಗದಿಪಡಿಸಬೇಕು. ಗ್ರಾಹಕ ಬೆಲೆ ಸೂಚ್ಯಾಂಕದ ಪ್ರತಿ ಅಂಶದ ಹೆಚ್ಚಳಕ್ಕೆ ಪ್ರತಿ ದಿನಕ್ಕೆ ೬ಪೈಸೆಗಳ ತುಟ್ಟಿಭತ್ಯೆ ನಿಗಧಿಪಡಿಸಬೇಕು. ಬೆಲೆ ಸೂಚ್ಯಾಂಕವನ್ನು ಪ್ರಾಮಾಣಿಕವಾಗಿ ಪ್ರಕಟಿಸಬೇಕು. ಸರ್ವೋಚ್ಚ ನ್ಯಾಯಾಲಯದ ತೀರ್ಪಿನನ್ವಯ ವೈಜ್ಞಾನಿಕ ರೀತಿಯಲ್ಲಿ ಕನಿಷ್ಟ ವೇತನವನ್ನು ನಿಗದಿಪಡಿಸಿ ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಕೆಲಸದ ಅವಧಿಯನ್ನು ವಾರಕ್ಕೆ ಗರಿಷ್ಟ ೩೬ ಗಂಟೆಗಳು ಹಾಗು ದಿನದ ಪಾಳಿಯನ್ನು ೬ ಗಂಟೆಗಳಿಗೆ ಮಿತಿಗೊಳಿಸಬೇಕು ಹಾಗೂ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಗಮನ ನೀಡಬೇಕು. ನಮ್ಮ ಸಂವಿಧಾನದ ಪರಿಚ್ಛೇದ ೩೯ (ಡಿ) ನಲ್ಲಿ ಪ್ರತಿಪಾದಿಸಿರುವ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಖಾತ್ರಿಪಡಿಸಬೇಕು. ಕಡಿಮೆ ವೇತನ ನೀಡುತ್ತಾ ಗುತ್ತಿಗೆ-ಹೊರಗುತ್ತಿಗೆ ಹಾಗು ಹಂಗಾಮಿ ನೌಕರರ ಮೇಲೆ ನಡೆಯುತ್ತಿರುವ ಶೋಷಣೆಯನ್ನು ಕೊನೆಗಾಣಿಸಬೇಕು. ದೀರ್ಘಕಾಲಿಕ ಸ್ವರೂಪದಲ್ಲಿರುವ ಎಲ್ಲಾ ರೀತಿಯ ಉದ್ಯೋಗಗಳಲ್ಲಿ ಗುತ್ತಿಗೆ ಕಾರ್ಮಿಕ ವ್ಯವಸ್ಥೆಯನ್ನು ರದ್ದುಪಡಿಸಬೇಕು ಮತ್ತು ದೀರ್ಘಕಾಲಿಕ ಮತ್ತು ಖಾಯಂ ಸ್ವರೂಪದಲ್ಲಿ ಕೆಲಸ ಮಾಡುವ ಗ್ರಾಮಪಂಚಾಯಿತಿ, ಮುನಿಸಿಪಾಲಿಟಿ ಹಾಗೂ ಎಲ್ಲ ಕೈಗಾರಿಕೆಗಳಲ್ಲಿನ ಗುತ್ತಿಗೆ ಹಾಗು ತಾತ್ಕಾಲಿಕ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಲು ತಮಿಳುನಾಡು ಮತ್ತು ಆಸ್ಸಾಂ ಮಾದರಿಯಲ್ಲಿ ಕಾನೂನು ಜಾರಿಗೆ ತರಬೇಕು. ಇಎಸ್‌ಐ, ಇಪಿಎಫ್, ಗ್ರಾಚ್ಯುಟಿ, ಬೋನಸ್ ಕಾಯಿದೆಯಲ್ಲಿ ವಿಧಿಸಲಾದ ಎಲ್ಲಾ ವೇತನ ಮಿತಿಗಳನ್ನು ತೆರೆವುಗೊಳಿಸಬೇಕು. ಈ ಸವಲತ್ತುಗಳನ್ನು ಎಲ್ಲಾ ಕಾರ್ಮಿಕರಿಗೂ ವಿಸ್ತರಿಸಬೇಕು. ಪ್ರತಿ ಕೈಗಾರಿಕಾ ವಲಯ ಮಟ್ಟದಲ್ಲಿ/ತಾಲೂಕು. ಮಟ್ಟದಲ್ಲಿ ಇಎಸ್‌ಐ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸುವ ಮೂಲಕ ಉಚಿತ ವೈದ್ಯಕೀಯ ಸೌಲಭ್ಯವನ್ನು ಖಾತ್ರಿಪಡಿಸಬೇಕು. ಇಪಿಎಫ್ ನಿವೃತಿ ವೇತನವನ್ನು ಕಡೆಯದಾಗಿ ಪಡೆದ ಪೂರ್ಣ ವೇತನಕ್ಕೆ ಸಮನಾಗಿ ಹಾಗು ತುಟ್ಟಿಭತ್ಯೆಯೊಂದಿಗೆ ನಿಗದಿಪಡಿಸಬೇಕು. ಗ್ರಾಚ್ಯುಟಿಯನ್ನು ಪ್ರತಿ ವರ್ಷದ ಸೇವೆಗೆ ೩೦ ದಿನಗಳ ವೇತನ, ಕಾರ್ಖಾನೆಯನ್ನು ಮುಚ್ಚುವಾಗ ಅಥವಾ ರಿಟ್ರಂಚೆಂಟ್ ಮಾಡುವಾಗ ನೀಡಬೇಕಾದ ಪರಿಹಾರ ಮೊತ್ತವನ್ನು ಪ್ರತಿ ವರ್ಷದ ಸೇವೆಗೆ ೧೫ ದಿನಗಳಿಂದ ೯೦ ದಿನಗಳಿಗೆ ಹೆಚ್ಚಿಸಬೇಕು ಎಂದರು.
ಎನ್.ಪಿ.ಎಸ್. ರದ್ದುಗೊಳಿಸಿ ಓಪಿಎಸ್ ಮರುಸ್ಥಾಪಿಸಿ. ಇಪಿಎಸ್ ಪಿಂಚಣಿದಾರರಿಗೆ ಕನಿಷ್ಠ ರೂ. ೯,೦೦೦ ಪಿಂಚಣಿಯನ್ನು ಖಚಿತಪಡಿಸಬೇಕು. ಪ್ರತಿ ಜಿಲ್ಲಾ ಮಟ್ಟದಲ್ಲಿ ಕಾರ್ಮಿಕ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ದೇಶದ ಎಲ್ಲಾ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ರಚಿಸಲಾಗಿರುವ ಸಾಮಾಜಿಕ ಭದ್ರತಾ ಮಂಡಳಿಯನ್ನು ಬಲಪಡಿಸಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿ ಮಾಡುತ್ತಿರುವ ವಿವಿಧ ವಸತಿ ಯೋಜನೆಗಳನ್ನು ಬಳಸಿಕೊಂಡು ರಾಜ್ಯದಲ್ಲಿರುವ ಎಲ್ಲಾ ಅಸಂಘಟಿತ ಕಾರ್ಮಿಕರಿಗೂ ಒಂದು ನಿರ್ಧಿಷ್ಟ ಕಾಲಮಿತಿಯೊಳಗೆ ವಸತಿ ಯೋಜನೆಯನ್ನು ಜಾರಿಗೊಳಿಸಬೇಕು. ಬೀಡಿಕಾರ್ಮಿಕರಿಗೆ ಪರ್ಯಾಯ ಉದ್ಯೋಗ, ಪರಿಹಾರ ಯೋಜನೆ ರೂಪಿಸಬೇಕು. ವಿದ್ಯಾರ್ಥಿ ವೇತನ ಹಾಗು ಇತರೆ ಕಲ್ಯಾಣ ಯೋಜನೆಗಳ ಸಮರ್ಪಕ ಜಾರಿಗೆ ಅನುವಾಗುವಂತೆ ಕೇಂದ್ರ ಸರ್ಕಾರವು ಜಿಎಸ್‌ಟಿಯಿಂದ ಕಲ್ಯಾಣ ನಿಧಿಗೆ ಪಾಲು ನೀಡಬೇಕು ಎಂದು ಹೇಳಿದರು.
ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ವಾರ್ಷಿಕ ೨೦೦ ದಿನಗಳು ಹಾಗು ದಿನಕ್ಕೆ ರೂ ೭೦೦ ವೇತನದೊಂದಿಗೆ ವಿಸ್ತಾರಗೊಳಿಸಬೇಕು. ೨೨. ಆರೋಗ್ಯ ಹಾಗು ಪೌಷ್ಠಿಕ ಆಹಾರ ಪೂರೈಸುವು ಐಸಿಡಿಎಸ್, ಎಂಡಿಎಂ, ಎನ್‌ಹೆಚ್‌ಎಂ, ಐಸಿಪಿಎಸ್, ಎಸ್‌ಎಸ್‌ಎ ಮುಂತಾದ ಯೋಜನೆಗಳನ್ನು ಮುಂದುವರಿಸಬೇಕು. ಕಳೆದ ಬಜೆಟ್‌ಗಳಲ್ಲಿ ಕಡಿತಗೊಳಿಸಿರುವ ಅನುದಾನಗಳನ್ನು ಮರುಪಾವತಿ ಮಾಡುವುದು ಹಾಗು ಯೋಗ್ಯ ಅನುದಾನವನ್ನು ಕೊಡುವ ಮೂಲಕ ಈ ಯೋಜನೆಗಳನ್ನು ಸ್ಥಿರಗೊಳಿಸಬೇಕು. ಕೇಂದ್ರ ಹಾಗು ರಾಜ್ಯ ಸರ್ಕಾರದ ಅನುದಾನವನ್ನು ಕ್ರಮಬದ್ಧವಾಗಿ ೯೦:೧೦ ಎಂಬ ಅನುಪಾತದೊಂದಿಗೆ ನೀಡಬೇಕು ಹಾಗೂ ಆಹಾರ, ಆರೋಗ್ಯ, ಶಿಕ್ಷಣ ಮತ್ತು ಪೌಷ್ಠಿಕ ಆಹಾರಕ್ಕಾಗಿರುವ ಯೋಜನೆಗಳಾದ ಐಸಿಡಿಎಸ್, ಎಂಡಿಎಂ, ಎನ್‌ಹೆಚ್‌ಎಂ, ಐಸಿಪಿಎಸ್, ಎಸ್‌ಎಸ್‌ಎ, ಎಂಎನ್‌ಆರ್‌ಇಜಿ ಮುಂತಾದ ಯೋಜನೆಗಳನ್ನು ಖಾಯಂ ಮಾಡುವ ಮುಖಾಂತರ ಈ ಹಕ್ಕುಗಳನ್ನು ಸಾರ್ವತ್ರಿಕಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ತಾಲೂಕು ಕಾರ್ಯದರ್ಶಿ ಜಯಂತಿ, ಮುಖಂಡರಾದ ಅರವಿಂದ್, ಮಂಜೂಳಾ, ಮೀನಾಕ್ಷಿ, ಗಾಯಿತ್ರಿ, ಗೀತಾ, ಕವಿತಾ ಇತರರು ಭಾಗವಹಿಸಿದ್ದರು.
